
ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದರೆ ಆ ತಪ್ಪುಗಳನ್ನು ಗುರುತಿಸಿ ಒಪ್ಪಿಕೊಳ್ಳುವುದು ಕೂಡ ಅಷ್ಟೆ ಮುಖ್ಯವಾಗಿರುತ್ತದೆ. ಅದು ಆಟವೇ ಆಗಿರಲಿ ಅಥವಾ ಕಲಿಕೆಯ ವಿಷಯವೇ ಆಗಿರಲಿ, ತಪ್ಪುಗಳನ್ನು ಮಾಡುವುದು ಸಹಜ. ಆದರೆ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ. ಆದರೆ ಒಂದೇ ತಪ್ಪನ್ನು ಪದೇಪದೇ ಮಾಡುತ್ತಿದ್ದರೆ, ಅದನ್ನು ಯಾರು ಕೂಡ ಸರಿ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಸದ್ಯ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾದ ಕಥೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅದೊಂದು ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಟೀಂ ಇಂಡಿಯಾಕ್ಕೆ (Team India) ವರ್ಷಗಳೇ ಕಳೆದರು ಸಾಧ್ಯವಾಗುತ್ತಿಲ್ಲ. ಹಾಗೆಯೇ ಅದು ನಮ್ಮ ತಂಡದ ನ್ಯೂನತೆ ಎಂದು ಒಪ್ಪಿಕೊಳ್ಳುವುದಕ್ಕೂ ತಂಡದ ನಾಯಕ ಸಿದ್ದವಿಲ್ಲ. ವಾಸ್ತವವಾಗಿ ಟೀಂ ಇಂಡಿಯಾಕ್ಕೆ ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಎಡಗೈ ಇನ್ಸ್ವಿಂಗ್ ಬೌಲರ್ಗಳನ್ನು ಎದುರಿಸುವುದು. ಇದೊಂದು ಸಮಸ್ಯೆ ಟೀಂ ಇಂಡಿಯಾವನ್ನು ಬಹಳ ವರ್ಷಗಳಿಂದಲೇ ಕಾಡುತ್ತಿದೆ. ಇದೀಗ ಆಸೀಸ್ ವಿರುದ್ಧದ ಸರಣಿಯಲ್ಲೂ ಇದೇ ಸಮಸ್ಯೆ ರೋಹಿತ್ (Rohit Sharma) ಪಡೆಯನ್ನು ಕಾಡುತ್ತಿದೆ. ಆದರೆ ಈ ಬಗ್ಗೆ ಕೇಳಿದರೆ ನಾಯಕ ರೋಹಿತ್ ಶರ್ಮಾ ಮಾತ್ರ ತಮ್ಮ ತಂಡದ ನ್ಯೂನತೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.
ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಈ ಸೋಲು ಎಷ್ಟು ಹೀನಾಯವಾಗಿತ್ತು ಎಂದರೆ ಆಸ್ಟ್ರೇಲಿಯಾ, ಭಾರತ ನೀಡಿದ 118 ರನ್‌ಗಳ ಸಾಧಾರಣ ಗುರಿಯನ್ನು ಕೇವಲ 55 ನಿಮಿಷ ಮತ್ತು 11 ಓವರ್‌ಗಳಲ್ಲಿ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದ್ದು, ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್. ಈ ಎಡಗೈ ವೇಗಿಯ ಇನ್ಸ್ವಿಂಗರ್ ಎಸೆತಗಳ ಮುಂದೆ ಕಕ್ಕಾಬಿಕ್ಕಿಯಾದ ಟೀಂ ಇಂಡಿಯಾ ಕೇವಲ 117 ರನ್ಗಳಿಗೆ ಸರ್ವಪತನವಾಯಿತು. ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಿ ಪಡೆದ 5 ವಿಕೆಟ್‌ಗಳಲ್ಲಿ, 4 ವಿಕೆಟ್‌ಗಳು ಇನ್ನಿಂಗ್ಸ್‌ನ ಮೊದಲ 10 ಓವರ್‌ಗಳಲ್ಲಿ ಬಂದವು. ಇದಕ್ಕೂ ಮುನ್ನ ಮುಂಬೈ ಏಕದಿನ ಪಂದ್ಯದಲ್ಲೂ ಸ್ಟಾರ್ಕ್ 3 ವಿಕೆಟ್ ಪಡೆದಿದ್ದರು.
ವಾಸ್ತವವಾಗಿ ಸ್ಟಾರ್ಕ್ ವಿರುದ್ಧ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಎಡುವುತ್ತಿರುವುದು ಇದೇ ಮೊದಲಲ್ಲ. ವರ್ಷದಿಂದ ವರ್ಷಕ್ಕೆ ಹಲವು ಉದಾಹರಣೆಗಳು ಮುನ್ನೆಲೆಗೆ ಬರುತ್ತಿದ್ದರೂ ಅದನ್ನು ದೌರ್ಬಲ್ಯ ಎಂದು ಒಪ್ಪಿಕೊಳ್ಳಲು ಭಾರತ ತಂಡ ಸಿದ್ಧವಿಲ್ಲ. ಎರಡನೇ ಏಕದಿನ ಪಂದ್ಯದ ಸೋಲಿನ ನಂತರ ಸ್ವತಃ ನಾಯಕ ರೋಹಿತ್ ಶರ್ಮಾ ಬಳಿ ಈ ಬಗ್ಗೆ ಪ್ರಶ್ನೆ ಮಾಡಲಾಯಿತು.
ಇದಕ್ಕೆ ಉತ್ತರಿಸಿದ ರೋಹಿತ್, ತಂಡದ ಬ್ಯಾಟ್ಸ್ಮನ್ ಅಥವಾ ಮ್ಯಾನೇಜ್ಮೆಂಟ್, ನಮ್ಮ ಮುಂದಿರುವವನು ಎಡಗೈ ಅಥವಾ ಬಲಗೈ ವೇಗದ ಬೌಲರ್ ಎಂಬುದನ್ನು ಯೋಚಿಸುವುದಿಲ್ಲ. ಬೌಲರ್ ಎಡಗೈ ಅಥವಾ ಬಲಗೈ ಬೌಲರ್ ಆಗಿರಲಿ, ಅವರು ಖಂಡಿತವಾಗಿಯೂ ವಿಕೆಟ್ ಪಡೆಯುತ್ತಾರೆ. ಆದಾಗ್ಯೂ, ಯಾವುದೇ ರೀತಿಯಲ್ಲಿ ವಿಕೆಟ್‌ಗಳು ಬೀಳುವುದು ತಂಡದ ಚಿಂತೆಯ ವಿಷಯವಾಗಿದೆ. ಹೀಗಾಗಿ ಅದನ್ನು ಸುಧಾರಿಸಲು ತಂಡವು ಎಲ್ಲದರ ಬಗ್ಗೆ ಯೋಚಿಸಬೇಕಾಗಿದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ಎಡಗೈ ವೇಗದ ಬೌಲರ್ ಭಾರತ ತಂಡಕ್ಕೆ ಇಷ್ಟೊಂದು ತೊಂದರೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ 6 ವರ್ಷಗಳಲ್ಲಿ ಇಂತಹ ಹಲವು ನಿದರ್ಶನಗಳಿವೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಭಾರತದ ಅಗ್ರ ಕ್ರಮಾಂಕವನ್ನು ಇನ್ನಿಲ್ಲದಂತೆ ಕಾಡಿದ್ದರು. ನಂತರ 2019 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ, ನ್ಯೂಜಿಲೆಂಡ್‌ನ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಮೊದಲ 5 ಓವರ್‌ಗಳಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಉರುಳಿಸಿದ್ದರು.
ಇನ್ನು 2021 ರಲ್ಲಿ ನಡೆದ ಟಿ 20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತದ ಬ್ಯಾಟಿಂಗ್ ಬಗ್ಗೆ ಯಾರು ಹೇಳಬೇಕಿಲ್ಲ ಬಿಡಿ. ಈ ಪಂದ್ಯದಲ್ಲಿ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿಯ ಎರಡು ಓವರ್‌ಗಳಲ್ಲಿ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ರಾಹುಲ್ ಇಬ್ಬರು ಔಟಾಗಿದ್ದರು. ಅದೇ ರೀತಿ ಕಳೆದ ವರ್ಷ ಇಂಗ್ಲೆಂಡ್‌ನ ಎಡಗೈ ವೇಗಿ ರೀಸ್ ಟೋಪ್ಲಿ ಕೂಡ ಭಾರತದ ವಿರುದ್ಧ 6 ವಿಕೆಟ್ ಪಡೆದಿದ್ದರು. ಇದೀಗ ಮುಂಬೈ ಮತ್ತು ವಿಶಾಖಪಟ್ಟಣದಲ್ಲೂ ಇದೇ ಕಥೆ ಪುನರಾವರ್ತನೆಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ