Updated on:Mar 20, 2023 | 11:47 AM
ಮಾರ್ಚ್ 31 ರಿಂದ ಪ್ರಾರಂಭವಾಗುವ ಐಪಿಎಲ್ಗೆ ಸಿದ್ಧತೆಗಳು ಬರದಿಂದ ಸಾಗಿದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಅಭ್ಯಾಸ ಆರಂಭಿಸಿವೆ. ಈ ನಡುವೆ ಗಾಯಗೊಂಡ ಆಟಗಾರರ ಬದಲಿ ಆಯ್ಕೆಯ ಪ್ರಕ್ರಿಯೆಯೂ ನಡೆಯುತ್ತಿದ್ದು, ಸಿಎಸ್ಕೆ ತಂಡ ಕೂಡ ಬದಲಿ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಬೌಲರ್ಗೆ ಮಣೆ ಹಾಕಿದೆ.
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದ ಬೌಲರ್ ಕೈಲ್ ಜೇಮಿಸನ್ ಇಂಜುರಿಯಿಂದಾಗಿ ಸಿಎಸ್ಕೆ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಅವರ ಬದಲಿ ಆಟಗಾರನಿಗಾಗಿ ಹುಡುಕುತ್ತಿದ್ದ ಚೆನ್ನೈ ತಂಡ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿರುವ ಜೇಮಿಸನ್ ಅವರನ್ನು ಮಿನಿ ಹಾರಜಿನಲ್ಲಿ 1 ಕೋಟಿಗೆ ಸಿಎಸ್ಕೆ ಖರೀದಿಸಿತ್ತು. ಆದರೆ ಅವರ ಬದಲಿ ಆಟಗಾರನಾಗಿ ಬಂದಿರುವ ಮಗಾಲಾ ಅವರನ್ನು ಮೂಲ ಬೆಲೆ 50 ಲಕ್ಷ ರೂಗಳಿಗೆ ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಫ್ರಾಂಚೈಸಿ ಹೇಳಿಕೊಂಡಿದೆ.
ಇನ್ನು ಸಿಸಂಡಾ ಮಗಾಲಾ ಆಟದ ಅತ್ಯಂತ ಕಡಿಮೆ ಸ್ವರೂಪದಲ್ಲಿ ಅಪಾರ ಅನುಭವವನ್ನು ಹೊಂದಿದ್ದು, ದಕ್ಷಿಣ ಆಫ್ರಿಕಾ ಪರ ಕೇವಲ 4 ಟಿ30 ಪಂದ್ಯಗಳನ್ನು ಆಡಿದ್ದಾರೆ. ಆದರೆ ಮಗಾಲಾ ದೇಶೀಯ ಟಿ20 ಪಂದ್ಯಗಳಲ್ಲಿ ನಿಯಮಿತವಾಗಿ ವಿಕೆಟ್-ಟೇಕರ್ ಎಂಬ ಖ್ಯಾತಿಯನ್ನು ಹೊಂದಿದ್ದಾರೆ.
ಸಿಎಸ್ಕೆ ತಂಡ ಈ ಆವೃತ್ತಿಯ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ಆಡಲಿದೆ. ಆದರೆ ಪಂದ್ಯಾವಳಿಯ ಪ್ರಾರಂಭದ ಪಂದ್ಯಗಳಿಗೆ ಮಗಾಲಾ ಲಭ್ಯವಾಗುವುದು ಅನುಮಾನವಾಗಿದೆ. ಏಕೆಂದರೆ ಆ ಸಮಯದಲ್ಲಿ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಏಕದಿನ ಸರಣಿ ಆಡಲಿದೆ.
Published On - 11:45 am, Mon, 20 March 23