
ಬಾರ್ಡರ್- ಗವಾಸ್ಕರ್ ಟೆಸ್ಟ್ (Border-Gavaskar Trophy) ಸರಣಿಯ ಸಲುವಾಗಿ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾಕ್ಕೆ (India Vs Australia) ಇದುವರೆಗೂ ಯಾವುದೇ ಶುಭ ಸುದ್ದಿ ಸಿಕ್ಕಿಲ್ಲ. ಮೊದಲು ನಾಗ್ಪುರ ಮತ್ತು ದೆಹಲಿ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗರೂಗಳಿಗೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಇಡೀ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ವಾಸ್ತವವಾಗಿ ಕೌಟುಂಬಿಕ ಕಾರಣಗಳಿಂದಾಗಿ ದೆಹಲಿ ಟೆಸ್ಟ್ ನಂತರ ಆಸ್ಟ್ರೇಲಿಯಾಕ್ಕೆ ಮರಳಿದ್ದ ಪ್ಯಾಟ್ ಕಮಿನ್ಸ್ ಉಳಿದಿರುವ 2 ಟೆಸ್ಟ್ ಪಂದ್ಯಗಳಿಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಪ್ಯಾಟ್ ಕಮಿನ್ಸ್ ಅವರ ತಾಯಿಯ ಆರೋಗ್ಯ ಹದಗೆಟ್ಟಿರುವುದರಿಂದ ಅವರು ತಮ್ಮ ತಾಯಿಯೊಂದಿಗೆ ಇರಲು ಬಯಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕಮಿನ್ಸ್, ತಾನು ಇನ್ನೂ ಭಾರತಕ್ಕೆ ಮರಳುವುದಿಲ್ಲ. ಈ ಸಮಯದಲ್ಲಿ ನಾನು ತನ್ನ ಕುಟುಂಬದೊಂದಿಗೆ ಇರಬೇಕಾಗಿದೆ. ನನಗೆ ಬೆಂಬಲ ನೀಡಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.
ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಮುಂಚೆಯೂ ಸ್ಟೀವ್ ಸ್ಮಿತ್ ಆಸೀಸ್ ತಂಡದ ನಾಯಕತ್ವವಹಿಸಿಕೊಂಡ ಅನುಭವವಿದೆ. ಆದರೆ ಬಾಲ್ ವಿರೂಪಗೊಳಿಸಿದ ಆರೋಪದಡಿ ಸಿಕ್ಕಿಬಿದ್ದ ನಂತರ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆದಾಗ್ಯೂ, ಸ್ಮಿತ್ ಮತ್ತೆ ತಂಡಕ್ಕೆ ಹಿಂದಿರುಗಿದ ನಂತರ, ಅವರು ಎರಡು ಬಾರಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಮಾರ್ಚ್ 1 ರಿಂದ ಇಂದೋರ್‌ನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ಈ ಟೆಸ್ಟ್ ಸರಣಿಯ ಗೆಲುವು ಸರಣಿಯನ್ನು ಗೆಲ್ಲುವುದು ಮಾತ್ರವಲ್ಲದೆ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಕೂಡ ಪಡೆಯುತ್ತದೆ.
ಕಳಪೆ ಫೀಲ್ಡಿಂಗ್, ಅಗ್ರ ಕ್ರಮಾಂಕ ವಿಫಲ, ಆ 2 ವಿಕೆಟ್; ಭಾರತದ ಸೋಲಿಗೆ ಪ್ರಮುಖ 5 ಕಾರಣಗಳಿವು
ವಾಸ್ತವವಾಗಿ ಆಸ್ಟ್ರೇಲಿಯಾ ತಂಡದ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಮೊಣಕೈ ಸಮಸ್ಯೆಯಿಂದಾಗಿ ಈಗಾಗಲೇ ಡೇವಿಡ್ ವಾರ್ನರ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇವರೊಂದಿಗೆ ಹ್ಯಾಜಲ್‌ವುಡ್ ಕೂಡ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಮ್ಯಾಥ್ಯೂ ರೆನ್ಶಾ ಕೂಡ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಆಷ್ಟನ್ ಅಗರ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಉಳಿದ ಟೆಸ್ಟ್ ಪಂದ್ಯಗಳಿಗೆ ಗೈರಾಗಲಿದ್ದಾರೆ.
ಅಂದಹಾಗೆ, ಇದೆಲ್ಲದರ ನಡುವೆಯೂ ಮೂರನೇ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಕ್ಕೂ ಶುಭ ಸುದ್ದಿ ಸಿಕ್ಕಿದೆ. ಗಾಯದ ಸಮಸ್ಯೆಯಿಂದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಡದಿದ್ದ ಕ್ಯಾಮರೂನ್ ಗ್ರೀನ್ ಇದೀಗ ತಂಡಕ್ಕೆ ಮರಳಲಿದ್ದಾರೆ. ನಾನು 100 ಪ್ರತಿಶತ ಫಿಟ್ ಆಗಿದ್ದು, ಇಂದೋರ್ ಟೆಸ್ಟ್‌ನಲ್ಲಿ ಆಡಲಿದ್ದೇನೆ ಎಂದು ಗ್ರೀನ್ ಅವರೇ ಹೇಳಿದ್ದಾರೆ. ಇವರೊಂದಿಗೆ ಮಿಚೆಲ್ ಸ್ಟಾರ್ಕ್ ಕೂಡ ಇಂದೋರ್‌ನಲ್ಲಿ ಆಡುವ ನಿರೀಕ್ಷೆಯಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Fri, 24 February 23