IND-W vs SL-W: ಲಂಕಾ ವಿರುದ್ಧ ಭಾರತ ಮಹಿಳಾ ಪಡೆಗೆ 8 ವಿಕೆಟ್ ಜಯ
India vs Sri Lanka Women's T20: ವಿಶಾಖಪಟ್ಟಣಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಜೆಮಿಮಾ ರಾಡ್ರಿಗಸ್ ಅಜೇಯ 69 ರನ್ ಗಳಿಸಿ ಮಿಂಚಿದರು. 121 ರನ್‌ಗಳ ಗುರಿಯನ್ನು ಭಾರತ 14.4 ಓವರ್‌ಗಳಲ್ಲಿ ಬೆನ್ನಟ್ಟಿತು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಯುವ ಬೌಲರ್‌ಗಳಾದ ಕ್ರಾಂತಿ ಗೌಡ್ ಕೂಡ ಉತ್ತಮ ಪ್ರದರ್ಶನ ನೀಡಿದರು.

ವಿಶಾಖಪಟ್ಟಣಂನಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ (India vs Sri Lanka) 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಜೆಮಿಮಾ ರೊಡ್ರಿಗಸ್ (Jemimah Rodrigues) ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತೀಯ ಮಹಿಳಾ ತಂಡವು ಶ್ರೀಲಂಕಾವನ್ನು ಏಕಪಕ್ಷೀಯವಾಗಿ ಸೋಲಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಡಿದ ಶ್ರೀಲಂಕಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 120 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ಜೆಮಿಮಾ ಅವರ ಪ್ರಬಲ ಪ್ರದರ್ಶನದ ನೆರವಿನಿಂದ 14.4 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 122 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
122 ರನ್ ಗುರಿ ನೀಡಿದ ಶ್ರೀಲಂಕಾ
ಶ್ರೀಲಂಕಾ ಪರ ಚಾಮರಿ ಅಟಪಟ್ಟು ಮತ್ತು ವಿಷ್ಮಿ ಗುಣರತ್ನೆ ಇನ್ನಿಂಗ್ಸ್ ಆರಂಭಿಸಿದರು. ಆದಾಗ್ಯೂ ಭಾರತದ ಯುವ ಬೌಲರ್ ಕ್ರಾಂತಿ ಗೌಡ್, ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಚಾಮರಿ 12 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 15 ರನ್ ಗಳಿಸಿ ಔಟಾದರು. ಇದಾದ ಬಳಿಕ ಶ್ರೀಲಂಕಾ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದಿದ್ದರೂ, ರನ್ ವೇಗ ಕಡಿಮೆಯಾಯಿತು. ಇದೇ ವೇಳೆ ದಾಳಿಗಿಳಿದ ದೀಪ್ತಿ ಶರ್ಮಾ, ಹಸಿನಿ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಎರಡನೇ ಹೊಡೆತ ನೀಡಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ವಿಷ್ಮಿ ಗುಣರತ್ನೆ 43 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ಭಾರತ ಪರ ಕ್ರಾಂತಿ ಗೌಡ್, ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.
IND vs SA: ಸತತ 19ನೇ ಟಿ20 ಸರಣಿ ಗೆದ್ದು 2025 ಕ್ಕೆ ವಿದಾಯ ಹೇಳಿದ ಟೀಂ ಇಂಡಿಯಾ
ಜೆಮಿಮಾ ಗೆಲುವಿನ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ ಅವರ ವಿಕೆಟ್ ಬೇಗನೆ ಪತನವಾಯಿತು. ಆದರೆ ಜೆಮಿಮಾ ಮತ್ತು ಮಂಧಾನ 50+ ರನ್‌ಗಳ ಜೊತೆಯಾಟವನ್ನು ಮಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ಮೂರನೇ ವಿಕೆಟ್‌ಗೆ 55 ರನ್‌ಗಳ ಅಜೇಯ ಪಾಲುದಾರಿಕೆಯನ್ನು ನಿರ್ಮಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿ20 ಯಲ್ಲಿ ಭಾರತ ಎರಡನೇ ಮತ್ತು ಮೂರನೇ ವಿಕೆಟ್‌ಗೆ 50+ ರನ್‌ಗಳ ಜೊತೆಯಾಟವನ್ನು ಮಾಡಿರುವುದು ಇದೇ ಮೊದಲು. ಅಂತಿಮವಾಗಿ ಜೆಮಿಮಾ 44 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಅಜೇಯ 69 ರನ್ ಗಳಿಸಿದರೆ, ಹರ್ಮನ್‌ಪ್ರೀತ್ 16 ಎಸೆತಗಳಲ್ಲಿ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ಕಾವ್ಯ ಕವಿಂದಿ ಮತ್ತು ಇನೋಕಾ ರಣವೀರ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Sun, 21 December 25
