ICC World Cup 2023: ರೋಹಿತ್ ಪಡೆ ಮಾಡಿದ ಈ 5 ತಪ್ಪುಗಳಿಂದ ವಿಶ್ವಕಪ್ ಕೈಜಾರಿತು..!
ICC World Cup 2023: ವಿಶ್ವಕಪ್‌ನಲ್ಲಿ ಸತತ 10 ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಎಡವಿದ್ದು ಏಕೆ ಎಂಬುದು ಈಗ ಪ್ರಶ್ನೆ. ಅಷ್ಟಕ್ಕೂ ಟೀಂ ಇಂಡಿಯಾ ಮಾಡಿದ ತಪ್ಪುಗಳೇನು?. ರೋಹಿತ್ ಪಡೆ ಮಾಡಿದ ಈ ಐದು ತಪ್ಪುಗಳಿಂದಲೇ ವಿಶ್ವಕಪ್ ಕೈ ಜಾರಿತಾ?
2023 ರ ವಿಶ್ವಕಪ್‌ನಲ್ಲಿ (ICC World Cup 2023) ಸತತ 10 ಪಂದ್ಯಗಳನ್ನು ಗೆದ್ದು ಪ್ರಶಸ್ತಿಯ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಟೀಂ ಇಂಡಿಯಾ, ನಿರ್ಣಾಯಕ ಹಂತದಲ್ಲಿ ಎಡವುವ ಮೂಲಕ ಎಂದಿನಂತೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು (India Vs Australia) ಸೋಲಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 240 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 42 ಎಸೆತಗಳು ಬಾಕಿ ಇರುವಂತೆಯೇ ಕೇವಲ 4 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತು. ವಿಶ್ವಕಪ್‌ನಲ್ಲಿ ಸತತ 10 ಗೆಲುವು ಸಾಧಿಸಿದ್ದ ಟೀಂ ಇಂಡಿಯಾ (Team India) ಫೈನಲ್‌ನಲ್ಲಿ ಎಡವಿದ್ದು ಏಕೆ ಎಂಬುದು ಈಗ ಪ್ರಶ್ನೆ. ಅಷ್ಟಕ್ಕೂ ಟೀಂ ಇಂಡಿಯಾ ಮಾಡಿದ ತಪ್ಪುಗಳೇನು?.
ವಿಕೆಟ್ ಕೈಚೆಲ್ಲಿದ ರೋಹಿತ್
2023 ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟ್ ಅಬ್ಬರಿಸಿತ್ತು ನಿಜ. ಆದರೆ ಫೈನಲ್‌ನಲ್ಲಿ ಅವರು ಮಾಡಿದ ತಪ್ಪೇ ಅಂತಿಮವಾಗಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು. ಉತ್ತಮ ಆರಂಭ ಪಡೆದ ನಂತರ ರೋಹಿತ್ ಶರ್ಮಾ ಮತ್ತೊಮ್ಮೆ ತಮ್ಮ ವಿಕೆಟ್ ಕೈಚೆಲ್ಲಿದರು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 47 ರನ್‌ಗಳ ಇನ್ನಿಂಗ್ಸ್ ಆಡಿ, ಮತ್ತೊಮ್ಮೆ ಕೆಟ್ಟ ಶಾಟ್ ಆಡಿ ಔಟಾದರು. ವಾಸ್ತವವಾಗಿ ರೋಹಿತ್ ಶರ್ಮಾ ಫೈನಲ್‌ನ ಒತ್ತಡವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ದೊಡ್ಡ ಇನ್ನಿಂಗ್ಸ್ ಆಡಬೇಕಿತ್ತು. ಆದರೆ ಗ್ಲೆನ್ ಮ್ಯಾಕ್ಸ್ವೆಲ್ ಎಸೆತದಲ್ಲಿ ಕೆಟ್ಟ ಶಾಟ್ ಆಡಿದ ರೋಹಿತ್ ಸುಲಭವಾಗಿ ವಿಕೆಟ್ ಒಪ್ಪಿಸಿದರು. ನೋವಿನ ಸಂಗತಿಯೆಂದರೆ ಅದೇ ಓವರ್‌ನಲ್ಲಿ ರೋಹಿತ್ ಎರಡು ಬೌಂಡರಿಗಳನ್ನು ಬಾರಿಸಿದ್ದರು. ಆದರೆ ಇನ್ನೂ ಒಂದು ಬೌಂಡರಿಯ ದುರಾಸೆ ಅವರನ್ನು ಪೆವಿಲಿಯನ್‌ಗೆ ಮರಳುವಂತೆ ಮಾಡಿತು.
ಪಂದ್ಯಾವಳಿಯ ಆಟಗಾರ ಕಿಂಗ್ ಕೊಹ್ಲಿ; ಈ ವಿಶ್ವಕಪ್‌ನ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
ಸೆಟ್ ಆದ ನಂತರ ವಿರಾಟ್ ಔಟ್
ಟೀಂ ಇಂಡಿಯಾದ ಸೋಲಿಗೆ ವಿರಾಟ್ ಕೊಹ್ಲಿಯ ನಿರ್ಗಮನವೂ ಪ್ರಮುಖ ಕಾರಣವಾಗಿದೆ. ವಿರಾಟ್ ಕೊಹ್ಲಿ ಅಂತಿಮ ಪಂದ್ಯದಲ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿದರು. ನಿಸ್ಸಂಶಯವಾಗಿ ವಿರಾಟ್ ಕೊಹ್ಲಿ ಉತ್ತಮ ಕ್ರಿಕೆಟ್ ಆಡಿದರು. ಆದರೆ ಅವರ ವಿಕೆಟ್ ಕಳೆದುಕೊಂಡ ಕ್ಷಣ ಅದು ಟೀಂ ಇಂಡಿಯಾಕ್ಕೆ ದೊಡ್ಡ ನಷ್ಟವನ್ನು ಉಂಟುಮಾಡಿತು. 29ನೇ ಓವರ್‌ನಲ್ಲಿ ವಿರಾಟ್ ವಿಕೆಟ್ ಪತನಗೊಂಡಿತು. ಕೊಹ್ಲಿ ಔಟಾದ ನಂತರ ಜಡೇಜಾ ಮತ್ತು ರಾಹುಲ್ ಒತ್ತಡಕ್ಕೆ ಸಿಲುಕಿದರು ಮತ್ತು ಇಬ್ಬರ ನಡುವೆ ಬಹಳ ನಿಧಾನವಾದ ಜೊತೆಯಾಟವಿತ್ತು. ಅಲ್ಲದೆ ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿದ್ದು ತಂಡದ ಒತ್ತಡ ಹೆಚ್ಚಿಸಿತು.
ರಾಹುಲ್ ಆಮೆಗತಿಯ ಬ್ಯಾಟಿಂಗ್
ಕೆಎಲ್ ರಾಹುಲ್ ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕವನ್ನೇನೋ ಬಾರಿಸಿದರು. ಆದರೆ ಅವರು 66 ರನ್‌ಗಳ ಇನ್ನಿಂಗ್ಸ್ ಆಡಲು ಬರೋಬ್ಬರಿ 107 ಎಸೆತಗಳನ್ನು ತೆಗೆದುಕೊಂಡರು. ಅವರ ಸ್ಟ್ರೈಕ್ ರೇಟ್ ಕೇವಲ 61.68 ಆಗಿತ್ತು. ಅಚ್ಚರಿಯ ಸಂಗತಿ ಎಂದರೆ ರಾಹುಲ್ ತಮ್ಮ ಸುದೀರ್ಘ ಇನ್ನಿಂಗ್ಸ್ನಲ್ಲಿ ಕೇವಲ ಒಂದು ಬೌಂಡರಿಯನ್ನು ಬಾರಿಸಲಷ್ಟೇ ಶಕ್ತರಾದರು. ರಾಹುಲ್ ಹೆಚ್ಚು ಡಾಟ್ ಬಾಲ್ ಆಡಿದ್ದರಿಂದ ಟೀಂ ಇಂಡಿಯಾ 280 ರಿಂದ 290 ರನ್‌ಗಳ ಟಾರ್ಗೆಟ್ ತಲುಪಲು ಸಾಧ್ಯವಾಗಲಿಲ್ಲ.
40 ಓವರ್‌ಗಳಲ್ಲಿ ಕೇವಲ 4 ಬೌಂಡರಿ
2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾ ಒಟ್ಟು 16 ಬೌಂಡರಿಗಳನ್ನು ಬಾರಿಸಿತು. ಅದರಲ್ಲಿ ಮೊದಲ 10 ಓವರ್‌ಗಳಲ್ಲಿ 12 ಬೌಂಡರಿಗಳು ಸಿಡಿದವು. ಆ ಬಳಿಕ ಟೀಂ ಇಂಡಿಯಾ 40 ಓವರ್‌ಗಳಲ್ಲಿ ಕೇವಲ 4 ಬೌಂಡರಿಗಳನ್ನು ಸಿಡಿಸಲಷ್ಟೇ ಶಕ್ತವಾಯಿತು. ಭಾರತದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸುವುದನ್ನೇ ಮರೆತಂತೆ ಕಾಣುತ್ತಿತ್ತು.
ಬೌಲಿಂಗ್ನಲ್ಲಿ ಬದಲಾವಣೆ
ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ತನ್ನ ಬೌಲಿಂಗ್ ತಂತ್ರವನ್ನು ಬದಲಿಸಿದ್ದು, ಸೋಲಿಗೆ ಪ್ರಮುಖ ಕಾರಣವಾಯಿತು. ಹೊಸ ಚೆಂಡಿನೊಂದಿಗೆ ಟೀಂ ಇಂಡಿಯಾ, ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಅವರನ್ನು ಬೌಲಿಂಗ್ಗೆ ಇಳಿಸಿತು. ಆದರೆ ಕಳೆದ 10 ಪಂದ್ಯಗಳಲ್ಲಿ ಸಿರಾಜ್, ಬುಮ್ರಾ ಅವರೊಂದಿಗೆ ಬೌಲಿಂಗ್ ಆರಂಭಿಸಿದ್ದರು. ಎಂದಿನಂತೆ ಶಮಿ ಫೈನಲ್‌ನಲ್ಲಿಯೂ ಆರಂಭದಲ್ಲೇ ಟೀಂ ಇಂಡಿಯಾಗೆ ವಿಕೆಟ್ ತಂದುಕೊಟ್ಟರು. ಆದರೆ ಅವರ ಸರಾಗವಾಗಿ ರನ್ ಬಿಟ್ಟುಕೊಟ್ಟರು. ಅವರ ಬಾಲ್ ತುಂಬಾ ಸ್ವಿಂಗ್ ಆಗಿದ್ದು ಅವರ ನಿಯಂತ್ರಣ ತಪ್ಪಿತು. ಅಲ್ಲದೆ ಟೀಂ ಇಂಡಿಯಾ ಮೊಹಮ್ಮದ್ ಸಿರಾಜ್ ಅವರನ್ನು ಐದನೇ ಬೌಲರ್ ಆಗಿ ಬಳಸಿದ್ದು ಸಾಕಷ್ಟು ಅಚ್ಚರಿ ಮೂಡಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Mon, 20 November 23