IND vs AUS: ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ತಾಯಿ ನಿಧನ; ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ತಂಡ

IND vs AUS: ತಾಯಿಯ ಅನಾರೋಗ್ಯದ ಕಾರಣ ನೀಡಿ ಭಾರತ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ತಾಯಿ ವಿಧಿವಶರಾಗಿದ್ದಾರೆ

IND vs AUS: ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ತಾಯಿ ನಿಧನ; ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ತಂಡ
ಪ್ಯಾಟ್ ಕಮಿನ್ಸ್ ತಾಯಿ ನಿಧನ

Updated on: Mar 10, 2023 | 10:09 AM

ತಾಯಿಯ ಅನಾರೋಗ್ಯದ ಕಾರಣ ನೀಡಿ ಭಾರತ ಪ್ರವಾಸವನ್ನು (India Vs Australia) ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರ ತಾಯಿ ಇಂದು ವಿಧಿವಶರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿ ಮರಿಯಾ ಅವರ ಜೊತೆ ಹೆಚ್ಚು ಸಮಯ ಕಳೆಯುವ ಸಲುವಾಗಿ ಕಮಿನ್ಸ್, ದೆಹಲಿ ಟೆಸ್ಟ್ ಮುಗಿದ ನಂತರ ತವರಿಗೆ ವಾಪಸ್ಸಾಗಿದ್ದರು. 2005 ರಲ್ಲಿ ಕಮ್ಮಿನ್ಸ್ ಅವರ ತಾಯಿಗೆ ಸ್ತನ ಕ್ಯಾನ್ಸರ್ (breast cancer ) ಇರುವುದು ಪತ್ತೆಯಾಗಿತ್ತು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕಳೆದ ಕೆಲವು ವಾರಗಳಿಂದ ಆರೋಗ್ಯ ತೀರ ಹದಗೆಟ್ಟಿತ್ತು. ವಿಧಿವಶರಾಗಿರುವ ತಂಡದ ನಾಯಕನ ತಾಯಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡ ಕಪ್ಪು ಬ್ಯಾಂಡ್ ಧರಿಸಿ ಮೈದಾನಕ್ಕಿಳಿದಿದೆ.

ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕಿಳಿದ ತಂಡ

ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಕಮಿನ್ಸ್ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮರಿಯಾ ಕಮಿನ್ಸ್ ಅವರ ನಿಧನದಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ. ಆಸ್ಟ್ರೇಲಿಯನ್ ಕ್ರಿಕೆಟ್ ಪರವಾಗಿ, ನಾವು ಕಮಿನ್ಸ್ ಮತ್ತು ಅವರ ಕುಟುಂಬಕ್ಕೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಆಸ್ಟ್ರೇಲಿಯಾ ತಂಡ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿಯಲಿದೆ ಎಂದು ಬರೆದುಕೊಂಡಿದೆ.

ಆಸೀಸ್ ನಾಯಕನ ತಾಯಿಯ ನಿಧನಕ್ಕೆ ಬಿಸಿಸಿಐ ಕೂಡ ಸಂತಾಪ ಸೂಚಿಸಿದ್ದು, ಪ್ಯಾಟ್ ಕಮಿನ್ಸ್ ಅವರ ತಾಯಿಯ ನಿಧನದಿಂದ ನಾವು ದುಃಖಿತರಾಗಿದ್ದೇವೆ. ಕಮಿನ್ಸ್ ಕುಟುಂಬಕ್ಕೆ ದುಃಖವನ್ನು ಬರಿಸುವಂತಹ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದೆ.

ಅಂತಿಮ ಟೆಸ್ಟ್​ನಲ್ಲಿ ಆಸೀಸ್ ಮೇಲುಗೈ

ಕಮಿನ್ಸ್ ನಾಯಕತ್ವದಲ್ಲಿ, ಆಸ್ಟ್ರೇಲಿಯಾ ತಂಡ ಆರಂಭಿಕ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಸೋತಿತ್ತು. ಆದರೆ ಆ ಬಳಿಕ ಕಮಿನ್ಸ್ ಅಲಭ್ಯತೆಯಿಂದಾಗಿ ತಂಡದ ನಾಯಕತ್ವವಹಿಸಿಕೊಂಡಿದ್ದ ಸ್ಟೀವ್ ಸ್ಮಿತ್​ ಇಂದೋರ್​ ಟೆಸ್ಟ್​ನಲ್ಲಿ ತಂಡಕ್ಕೆ ಮೊದಲ ಜಯ ತಂದುಕೊಟ್ಟಿದ್ದರು. ಆದರೂ ಸಹ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಅಂತಿಮ ಪಂದ್ಯವನ್ನು ಭಾರತ ಗೆದ್ದರೆ, ಸರಣಿ ಮತ್ತೊಮ್ಮೆ ಭಾರತದ ಪಾಲಾಗಲಿದೆ. ಸೋತರೆ ಸರಣಿ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ. ಇನ್ನು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕಮಿನ್ಸ್, ಮೊದಲ ಟೆಸ್ಟ್​ನಲ್ಲಿ ಒಟ್ಟು 7 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಹಾಗೆಯೇ ಎರಡನೇ ಟೆಸ್ಟ್​ನಲ್ಲಿ 33 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 am, Fri, 10 March 23