ಒಂದೇ ವರ್ಷದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಡಫಿ
Jacob Duffy: ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ಇಂಡಿಯನ್ ಪ್ರೀಮಿಯರ್ ಲೀಗ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಕಿವೀಸ್ ವೇಗಿಯನ್ನು ಆರ್ಸಿಬಿ ಈ ಬಾರಿಯ ಮಿನಿ ಹರಾಜಿನ ಮೂಲಕ ಕೇವಲ 2 ಕೋಟಿ ರೂ.ಗೆ ಖರೀದಿಸಿದೆ. ಅದರಂತೆ ಮುಂದಿನ ಸೀಸನ್ನಲ್ಲಿ ಡಫಿ ಆರ್ಸಿಬಿ ತಂಡದ ಬೌಲಿಂಗ್ ಯುನಿಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on: Dec 23, 2025 | 7:59 AM

ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ (Jacob Duffy) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಒಂದೇ ವರ್ಷದೊಳಗೆ ಎಂಬುದು ವಿಶೇಷ. ಅಂದರೆ 2025 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಡಫಿ ವಿಕೆಟ್ಗಳ ಬೇಟೆಯೊಂದಿಗೆ ಇದೀಗ ದಾಖಲೆ ಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಈ ವರ್ಷ 36 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಜೇಕಬ್ ಡಫಿ 325 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ ಪಡೆದಿರುವುದು ಬರೋಬ್ಬರಿ 81 ವಿಕೆಟ್ಗಳು. ಅಂದರೆ 2025 ರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆ ಡಫಿ ಪಾಲಾಗಿದೆ.

ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ಪರ ಒಂದೇ ವರ್ಷದೊಳಗೆ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಕೂಡ ಡಫಿ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ ರಿಚರ್ಡ್ ಹ್ಯಾಡ್ಲಿ ಹೆಸರಿನಲ್ಲಿತ್ತು. 1985 ರಲ್ಲಿ 79 ವಿಕೆಟ್ ಕಬಳಿಸಿ ಹ್ಯಾಡ್ಲಿ ದಾಖಲೆ ಬರೆದಿದ್ದರು. ಇದೀಗ 81 ವಿಕೆಟ್ಗಳೊಂದಿಗೆ ಜೇಕಬ್ ಡಫಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಝಿಲೆಂಡ್ ಪರ ಒಂದೇ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಟ್ರೆಂಟ್ ಬೌಲ್ಟ್ ದಾಖಲೆಯನ್ನು ಕೂಡ ಡಫಿ ಮುರಿದಿದ್ದಾರೆ. ಬೌಲ್ಟ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 20 ವಿಕೆಟ್ ಕಬಳಿಸಿ ತವರಿನಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ತವರಿನ ಟೆಸ್ಟ್ ಸರಣಿಯಲ್ಲಿ ವಿಂಡೀಸ್ ವಿರುದ್ಧ 23 ವಿಕೆಟ್ ಉರುಳಿಸಿ ಜೇಕಬ್ ಡಫಿ ಕಿವೀಸ್ ಪರ ಹೊಸ ದಾಖಲೆ ಬರೆದಿದ್ದಾರೆ.

ಇಷ್ಟೇ ಅಲ್ಲದೆ ಒಂದೇ ವರ್ಷದೊಳಗೆ ಜೇಕಬ್ ಡಫಿ ಮೂರು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವರ್ಷವೇ ಮೂರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ವರ್ಷವೇ ಡಫಿ ಕಡೆಯಿಂದ ಭರ್ಜರಿ ಪ್ರದರ್ಶನ ಮೂಡಿಬಂದಿದ್ದು, ಈ ಅಮೋಘ ಪ್ರದರ್ಶನದೊಂದಿಗೆ ಕಿವೀಸ್ ವೇಗಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
