IND vs AUS PM XI: ಮಳೆಯಿಂದಾಗಿ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಮೊದಲ ದಿನದಾಟ ರದ್ದು

|

Updated on: Nov 30, 2024 | 2:56 PM

IND vs AUS PM XI: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಕ್ಯಾನ್ಬೆರಾದಲ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಆದರೆ, ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿದೆ. ಇದರಿಂದಾಗಿ ಭಾರತ ತಂಡಕ್ಕೆ ಪ್ಲೇಯಿಂಗ್ 11 ನಿರ್ಧರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

IND vs AUS PM XI: ಮಳೆಯಿಂದಾಗಿ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಮೊದಲ ದಿನದಾಟ ರದ್ದು
ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಜಯ ಸಾಧಿಸಿತ್ತು. ಇದೀಗ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಇದು ಹಗಲು-ರಾತ್ರಿ ಪಂದ್ಯವಾಗಿದ್ದು, ಗುಲಾಬಿ ಬಣ್ಣದ ಚೆಂಡಿನೊಂದಿಗೆ ಆಡಲಾಗುತ್ತದೆ. ಕಳೆದ ಬಾರಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 36 ರನ್​ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ತಂಡವು ಈ ಬಾರಿ ಪಿಂಕ್ ಬಾಲ್ ಟೆಸ್ಟ್​ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದು, ಈ ಟೆಸ್ಟ್​ಗೂ ಮುನ್ನ ಅಭ್ಯಾಸ ಪಂದ್ಯವನ್ನು ಆಡಲು ನಿರ್ಧರಿಸಿತ್ತು. ಆದರೆ ಈ ಅಭ್ಯಾಸ ಪಂದ್ಯಕ್ಕೆ ವರುಣನ ಅವಕೃಪೆ ಎದುರಾಗಿದ್ದು, ಮೊದಲ ದಿನದಾಟ ಮಳೆಯಿಂದ ರದ್ದಾಗಿದೆ.

ಭಾರತಕ್ಕೆ ಪ್ಲೇಯಿಂಗ್​ 11 ನದ್ದೇ ಸಮಸ್ಯೆ

ಮೇಲೆ ಹೇಳಿದಂತೆ ಪಿಂಕ್ ಬಾಲ್ ಟೆಸ್ಟ್‌ಗೆ ಸಿದ್ಧವಾಗಲು ಟೀಂ ಇಂಡಿಯಾ, ಇಂದಿನಿಂದ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಪ್ರಧಾನ ಮಂತ್ರಿ 11 ತಂಡದ ವಿರುದ್ಧ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಆದರೆ ಈ ಪಂದ್ಯದ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ. ಕ್ಯಾನ್‌ಬೆರಾದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪಂದ್ಯದ ಟಾಸ್‌ ಕೂಡ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮೊದಲ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಇದರರ್ಥ ಈಗ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಸಂಯೋಜನೆಯನ್ನು ನಿರ್ಧರಿಸಲು ಕೇವಲ 1 ದಿನ ಮಾತ್ರ ಬಾಕಿ ಉಳಿದಿದ್ದು, ಎರಡನೇ ದಿನದಾಟದಲ್ಲಿ ಪ್ಲೇಯಿಂಗ್ 11 ಬಗ್ಗೆ ಎದ್ದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

ವಾಸ್ತವವಾಗಿ ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಈ ಅಭ್ಯಾಸ ಪಂದ್ಯವು ಅವರಿಗೆ ಬಹಳ ಮುಖ್ಯವಾಗಿತ್ತು. ರೋಹಿತ್ ಜೊತೆಗೆ ಶುಭ್​ಮನ್ ಗಿಲ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಇದಲ್ಲದೇ ಈ ಇಬ್ಬರು ಆಟಗಾರರು ಆಡುವ 11ರೊಳಗೆ ಪ್ರವೇಶ ಪಡೆದಿರುವುದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲೂ ಕೆಲ ಬದಲಾವಣೆ ಕಾಣಲಿದೆ. ಅಂದರೆ ಟೀಂ ಇಂಡಿಯಾಗೆ ಈ 2 ದಿನಗಳ ಅಭ್ಯಾಸ ಪಂದ್ಯವನ್ನು ಆಡುವುದು ಬಹಳ ಮುಖ್ಯ, ಆದರೆ ಮಳೆಯಿಂದಾಗಿ ಇದೀಗ ಭಾರತ ತಂಡ ಕೇವಲ ಒಂದೇ ದಿನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ತಲಾ 50 ಓವರ್​ಗಳ ಪಂದ್ಯ

ಟೀಂ ಇಂಡಿಯಾ ಮತ್ತು ಪ್ರೈಮ್ ಮಿನಿಸ್ಟರ್ 11 ತಂಡಗಳ ನಡುವಿನ ಈ ಪಂದ್ಯಕ್ಕೆ ಕೇವಲ ಒಂದು ದಿನ ಮಾತ್ರ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ಸಿದ್ಧತೆಯನ್ನು ಪರಿಗಣಿಸಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಎರಡನೇ ದಿನದ ಆಟದಲ್ಲಿ ತಲಾ 50 ಓವರ್‌ಗಳ ಪಂದ್ಯ ನಡೆಯಲಿದೆ. ಅಂದರೆ ಟೀಂ ಇಂಡಿಯಾ 50 ಓವರ್‌ಗಳ ಬ್ಯಾಟಿಂಗ್ ಮತ್ತು 50 ಓವರ್‌ಗಳನ್ನು ಬೌಲ್ ಮಾಡುವ ಅವಕಾಶವನ್ನು ಪಡೆಯುತ್ತದೆ. ಇದರಿಂದಾಗಿ ಇಡೀ ತಂಡವು ಪಿಂಕ್ ಬಾಲ್​ನೊಂದಿಗೆ ಅಭ್ಯಾಸ ಮಾಡುವ ಅವಕಾಶವನ್ನು ಪಡೆಯುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sat, 30 November 24