IND vs AUS: ಟಾಸ್ ಗೆದ್ದ ಭಾರತ; ರೋಹಿತ್ ಔಟ್, ಬುಮ್ರಾಗೆ ನಾಯಕತ್ವ; ಕನ್ನಡಿಗ ಪ್ರಸಿದ್ಧ್​ಗೆ ಅವಕಾಶ

|

Updated on: Jan 03, 2025 | 5:59 AM

IND vs AUS: ಸಿಡ್ನಿಯಲ್ಲಿ ಆರಂಭವಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಹೊರಗಿಡಲಾಗಿದೆ. ರೋಹಿತ್ ಬದಲಿಗೆ ಶುಭ್‌ಮನ್ ಗಿಲ್ ಪ್ಲೇಯಿಂಗ್ ಇಲೆವೆನ್ನಿನಲ್ಲಿದ್ದಾರೆ ಮತ್ತು ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿದ್ದಾರೆ. ಆಕಾಶ್ ದೀಪ್ ಬದಲಿಗೆ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ದೊರೆತಿದೆ. ರೋಹಿತ್ ಸ್ವಯಂ ನಿರ್ಧಾರದಿಂದ ಹೊರಗುಳಿದಿರುವುದಾಗಿ ಬುಮ್ರಾ ತಿಳಿಸಿದ್ದಾರೆ.

IND vs AUS: ಟಾಸ್ ಗೆದ್ದ ಭಾರತ; ರೋಹಿತ್ ಔಟ್, ಬುಮ್ರಾಗೆ ನಾಯಕತ್ವ; ಕನ್ನಡಿಗ ಪ್ರಸಿದ್ಧ್​ಗೆ ಅವಕಾಶ
ಭಾರತ- ಆಸ್ಟ್ರೇಲಿಯಾ
Follow us on

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯ ಇಂದಿನಿಂದ ಸಿಡ್ನಿಯಲ್ಲಿ ಆರಂಭವಾಗಿದೆ. ಈ ಮೊದಲೆ ವರದಿಯಾಗಿದ್ದಂತೆ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ನಾಯಕ ರೋಹಿತ್ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್‌ನಿಂದ ಹೊರಗಿಡಲಾಗಿದೆ. ಅಂದರೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ರೋಹಿತ್​ಗೆ ಸ್ಥಾನ ನೀಡಲಾಗಿಲ್ಲ. ರೋಹಿತ್ ಶರ್ಮಾ ಬದಲಿಗೆ ಶುಭ್​ಮನ್ ಗಿಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿದ್ದು, ರೋಹಿತ್ ಶರ್ಮಾ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಪರ್ತ್‌ನಲ್ಲಿ ಮೊದಲ ಟೆಸ್ಟ್ ಗೆದ್ದಿತು. ಇದಾದ ಬಳಿಕ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ರೋಹಿತ್ ನಾಯಕತ್ವ ವಹಿಸಿದ್ದು, ಟೀಂ ಇಂಡಿಯಾ 2 ಟೆಸ್ಟ್ ಪಂದ್ಯಗಳನ್ನು ಸೋತಿದ್ದು, ಒಂದು ಪಂದ್ಯ ಡ್ರಾ ಆಗಿತ್ತು. ಇನ್ನು ಕೊನೆಯ ಟೆಸ್ಟ್​ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇದರೊಂದಿಗೆ ತಂಡದ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.

ಟೀಂ ಇಂಡಿಯಾದಲ್ಲಿ 2 ಬದಲಾವಣೆ

ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಮಾತನಾಡಿದ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬ್ಯಾಟಿಂಗ್ ಮಾಡುವುದಾಗಿ ತಿಳಿಸಿದರು. ಆ ಬಳಿಕ ತಂಡದಲ್ಲಾಗಿರುವ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, ತಂಡದಲ್ಲಿ 2 ಬದಲಾವಣೆಗಳಾಗಿದ್ದು ರೋಹಿತ್ ಶರ್ಮಾ ಬದಲಿಗೆ ಶುಭ್​ಮನ್ ಗಿಲ್ ತಂಡಕ್ಕೆ ಮರಳಿದ್ದು, ವೇಗಿ ಆಕಾಶ್ ದೀಪ್ ಬದಲಿಗೆ ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಗಿದೆ ಎಂದರು. ಇನ್ನು ರೋಹಿತ್ ಅವರನ್ನು ಪ್ಲೇಯಿಂಗ್ 11 ನಿಂದ ಹೊರಗಿಟ್ಟ ಬಗ್ಗೆ ಮಾತನಾಡಿದ ಬುಮ್ರಾ, ‘ರೋಹಿತ್ ಶರ್ಮಾ ಅವರೇ ಸ್ವತಃ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ರೋಹಿತ್ ಅವರ ಈ ನಿರ್ಧಾರವು ಟೀಂ ಇಂಡಿಯಾದಲ್ಲಿ ಎಷ್ಟು ಒಗ್ಗಟ್ಟು ಇದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.

ಉಭಯ ತಂಡಗಳು

ಭಾರತ ತಂಡ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ನಾಯಕ), ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಸ್ಯಾಮ್ ಕೊನ್‌ಸ್ಟಾಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್-ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್ .

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 am, Fri, 3 January 25