IND vs AUS: ರೋಹಿತ್ ಟೆಸ್ಟ್‌ನಿಂದ ನಿವೃತ್ತಿಯಾದರೂ ಆಶ್ಚರ್ಯವಿಲ್ಲ ಎಂದ ರವಿಶಾಸ್ತ್ರಿ
Rohit Sharma's Test Retirement: ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ನಡುವೆ, ನಾಯಕ ರೋಹಿತ್ ಶರ್ಮಾ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಮಾಜಿ ಕೋಚ್ ರವಿ ಶಾಸ್ತ್ರಿ ಅವರು ರೋಹಿತ್ ಅವರ ಕಳಪೆ ಪ್ರದರ್ಶನ ಮತ್ತು ಯುವ ಆಟಗಾರರ ಪ್ರದರ್ಶನವನ್ನು ಗಮನಿಸಿ, ರೋಹಿತ್ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ಹೇಳಿದ್ದಾರೆ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೋಲಿನ ಸರಪಳಿಗೆ ಸಿಲುಕಿರುವ ಟೀಂ ಇಂಡಿಯಾದಲ್ಲಿ ಭಿನ್ನಮತ ಸ್ಫೋಟಗೊಂಡಿರುವ ಬಗ್ಗೆ ವದಂತಿಗಳು ಕೇಳಿಬರಲಾರಂಭಿಸಿವೆ. ಇದರ ಜೊತೆಗೆ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲೇ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವುದು ಖಚಿತ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇದೀಗ ರೋಹಿತ್ ಅವರನ್ನು ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಅಂದರೆ ನಾಯಕ ರೋಹಿತ್ ವಿದಾಯದ ಪಂದ್ಯವನ್ನಾಡದೆ ಟೆಸ್ಟ್ ಮಾದರಿಗೆ ಗುಡ್ಬೈ ಹೇಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ನಡುವೆ ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಬದುಕಿನ ಬಗ್ಗೆ ಮಾತನಾಡಿರುವ ತಂಡದ ಮಾಜಿ ಕೋಚ್ ರವಿಶಾಸ್ತ್ರಿ, ರೋಹಿತ್ ಟೆಸ್ಟ್‌ನಿಂದ ನಿವೃತ್ತಿಯಾದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.
ನನಗೆ ಆಶ್ಚರ್ಯವಿಲ್ಲ
ರೋಹಿತ್ ಶರ್ಮಾ ಟೆಸ್ಟ್‌ನಿಂದ ನಿವೃತ್ತಿಯಾಗುವ ಊಹಾಪೋಹಗಳ ನಡುವೆ, ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ‘ನಾನು ಪ್ರಸ್ತುತ ರೋಹಿತ್ ಶರ್ಮಾ ಸಂಪರ್ಕದಲ್ಲಿದಿದ್ದರೆ, ಎಂದಿನಂತೆ ತಮ್ಮ ಹಳೆಯ ಆಟವನ್ನು ಆಡಲು ಹೇಳುತ್ತಿದ್ದೆ. ಸದ್ಯ ಅವರು ಆಡುತ್ತಿರುವ ರೀತಿ ಚೆನ್ನಾಗಿಲ್ಲ. ರೋಹಿತ್ ಎದುರಾಳಿ ಬೌಲರ್ ವಿರುದ್ಧ ಆಕ್ರಮಣಕಾರಿಯಾಗಿ ಆಡಬೇಕು. ನಂತರ ಅವರ ಪ್ರದರ್ಶನ ಹೇಗೆ ಸುಧಾರಿಸುತ್ತದೆ ಎಂಬುದನ್ನು ನೋಡಿ. ಆದರೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರೋಹಿತ್ ತನ್ನ ವೃತ್ತಿಜೀವನದ ಬಗ್ಗೆ ನಿರ್ಧಾರಕ್ಕೆ ಬರಬೇಕು. ಈ ಹಂತದಲ್ಲಿ ರೋಹಿತ್ ನಿವೃತ್ತಿಯ ನಿರ್ಧಾರ ತೆಗೆದುಕೊಂಡರೂ ನನಗೆ ಆಶ್ಚರ್ಯವಿಲ್ಲ ಎಂದಿದ್ದಾರೆ.
ಮುಂದವರೆದು ಮಾತನಾಡಿದ ಅವರು, 2024ರಲ್ಲಿ 40ರ ಸರಾಸರಿ ಹೊಂದಿರುವ ಶುಭ್‌ಮನ್ ಗಿಲ್ ಅವರಂತೆ ಸರದಿ ಸಾಲಿನಲ್ಲಿ ನಿಂತಿರುವ ಅನೇಕ ಯುವ ಆಟಗಾರರು ಇದ್ದಾರೆ. ಅಂತಹ ಆಟಗಾರರು ಬೆಂಚ್ ಮೇಲೆ ಕುಳಿತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹಾಗಾಗಿ ರೋಹಿತ್ ನಿವೃತ್ತಿಯಾದರೆ ನನಗೆ ಆಶ್ಚರ್ಯವಾಗುವುದಿಲ್ಲ, ಆದರೆ ಇದು ಸಂಪೂರ್ಣವಾಗಿ ರೋಹಿತ್ ಅವರ ನಿರ್ಧಾರವಾಗಿರುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಅರ್ಹತೆ ಪಡೆದರೆ ವಿಷಯಗಳು ವಿಭಿನ್ನವಾಗಿರುತ್ತದೆ. ಆದರೆ, ರೋಹಿತ್ ತನ್ನ ವೈಭವೋಪೇತ ಪಯಣವನ್ನು ಕೊನೆಗೊಳಿಸಲು ಇದೇ ಸರಿಯಾದ ಸಮಯ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ರೋಹಿತ್ ಕಳಪೆ ಫಾರ್ಮ್
ಕಳೆದ ಮೂರು ಸರಣಿಗಳಲ್ಲಿ ರೋಹಿತ್ 15 ಇನ್ನಿಂಗ್ಸ್‌ಗಳಲ್ಲಿ 10.93 ಸರಾಸರಿಯಲ್ಲಿ 164 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂರು ಸರಣಿಗಳಲ್ಲಿ ಎರಡು ಸರಣಿಗಳು ಭಾರತದಲ್ಲೇ ನಡೆದಿದ್ದವು. ಆದಾಗ್ಯೂ ಈ ಎರಡು ಸರಣಿಗಳಲ್ಲಿ ರೋಹಿತ್ ಗಳಿಸಿದ್ದು ಕೇವಲ ಒಂದೇ ಒಂದು ಅರ್ಧಶತಕ. ಉಳಿದಂತೆ ಪ್ರಸಕ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ 31 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ