IND vs AUS: ಸಿಡ್ನಿ ಟೆಸ್ಟ್ ಸೋತರೆ ಅದಕ್ಕೆ ಆತುರದ ಆಟವೇ ಕಾರಣ ಎಂದ ಗವಾಸ್ಕರ್
IND vs AUS: ಸಿಡ್ನಿ ಟೆಸ್ಟ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಸುನಿಲ್ ಗವಾಸ್ಕರ್ ತೀವ್ರವಾಗಿ ಟೀಕಿಸಿದ್ದಾರೆ. ವೇಗದ ರನ್ ಗಳಿಸುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡಿದ್ದಕ್ಕಾಗಿ ಅವರು ಜೈಸ್ವಾಲ್ ಮತ್ತು ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೆಲ್ಬೋರ್ನ್‌ನಲ್ಲಿ ರಿಷಬ್ ಪಂತ್ ಅವರ ಆಟವನ್ನು ನೆನಪಿಸುತ್ತಾ, ಗವಾಸ್ಕರ್ ಅವರು ಆತುರದ ಆಟದಿಂದ ಭಾರತ ತಂಡ ಸೋಲಿನ ಅಂಚಿಗೆ ಬಂದಿದೆ ಎಂದು ಹೇಳಿದ್ದಾರೆ.
ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ವಿಕೆಟ್ ಒಪ್ಪಿಸಿದಕ್ಕಾಗಿ ರಿಷಬ್ ಪಂತ್ ಅವರನ್ನು ಮೂರ್ಖ ಎಂದು ಕರೆದಿದ್ದ ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ಪಂದ್ಯವನ್ನು ಸೋತ ನಂತರ ಪಂತ್ರನ್ನು ತೀವ್ರವಾಗಿ ಟೀಕಿಸಿದ್ದರು. ಇದೀಗ ಸಿಡ್ನಿ ಟೆಸ್ಟ್‌ನಲ್ಲಿಯೂ ಪಂತ್ ರೀತಿಯೇ ಬೇಜವಬ್ದಾರಿಯುತ ಆಟ ಪ್ರದರ್ಶಿಸಿದ ತಂಡದ ಇಬ್ಬರು ಆರಂಭಿಕರನ್ನು ಗವಾಸ್ಕರ್ ಗುರಿಯಾಗಿಸಿಕೊಂಡಿದ್ದಾರೆ. ವಾಸ್ತವವಾಗಿ, ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆರಂಭಿಕರು ಅತ್ಯಂತ ವೇಗವಾಗಿ ರನ್ ಕಲೆಹಾಕಿದರು. ಹೀಗಾಗಿ ಟೀಂ ಇಂಡಿಯಾ ಪ್ರತಿ ಓವರ್‌ಗೆ 6 ರನ್‌ಗಳ ದರದಲ್ಲಿ ರನ್ ಗಳಿಸುತ್ತಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆಸ್ಟ್ರೇಲಿಯಾದ ಬೌಲರ್‌ಗಳ ವಿರುದ್ಧ ಆರಂಭದಲ್ಲೆ ಪ್ರಾಬಲ್ಯ ಸಾಧಿಸಿದರು. ಆದರೆ ಅವರು ಬೇಗನೇ ಔಟಾದ ಪರಿಣಾಮವಾಗಿ ಭಾರತ ತಂಡ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು. ಇದನ್ನು ಕಂಡು ಕೋಪಗೊಂಡ ಗವಾಸ್ಕರ್ ಇಬ್ಬರೂ ಆರಂಭಿಕರ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.
ಗವಾಸ್ಕರ್ ಹೇಳಿದ್ದೇನು?
ದಿನದಾಟದ ಅಂತ್ಯದ ನಂತರ ಪಂದ್ಯವನ್ನು ವಿಶ್ಲೇಷಿಸಿದ ಸುನಿಲ್ ಗವಾಸ್ಕರ್, ಈ ವೇಳೆ ವೇಗದ ರನ್ ಗಳಿಸುವ ಯತ್ನದಲ್ಲಿ ಟೀಂ ಇಂಡಿಯಾ ವಿಕೆಟ್ ಕಳೆದುಕೊಳ್ಳುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದರು. ಈ ಬಗ್ಗೆ ಮಾತನಾಡಿದ ಅವರು, ‘ನೀನೇಕೆ ವೇಗವಾಗಿ ಆಡಬೇಕು? ಇದು ಕೇವಲ ಎರಡನೇ ದಿನ. ಹೀಗಾಗಿ ಆತುರ ಪಡುವ ಅವಶ್ಯಕತೆ ಏನಿದೆ? ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ ಆದರೆ ಆತುರಪಡಬೇಕು ಎಂದಲ್ಲ. ಒಂದು ವೇಳೆ ಪಂದ್ಯವನ್ನು ನಾವು ಸೋತರೆ ಅದಕ್ಕೆ ಈ ಆತುರವೇ ಕಾರಣ ಎಂದು ಗವಾಸ್ಕರ್ ಹೇಳಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಕಲೆಹಾಕುವುದಕ್ಕೆ ಪರದಾಡಿದ್ದ ಟೀಂ ಇಂಡಿಯಾದ ಆರಂಭಿಕರು ಎರಡನೇ ಇನಿಂಗ್ಸ್‌ನಲ್ಲಿ 7.2 ಓವರ್‌ಗಳಲ್ಲಿ 42 ರನ್ ಕಲೆಹಾಕಿದರು. ಇದಾದ ಬಳಿಕ ಯಶಸ್ವಿ ಜೈಸ್ವಾಲ್ 35 ಎಸೆತಗಳಲ್ಲಿ 22 ರನ್ ಗಳಿಸಿ ಬೋಲ್ಯಾಂಡ್ಗೆ ಬಲಿಯಾದರು. ಮುಂದಿನ 5 ರನ್‌ಗಳ ನಂತರ ಕೆಎಲ್ ರಾಹುಲ್ ಕೂಡ 20 ಎಸೆತಗಳಲ್ಲಿ 13 ರನ್ ಗಳಿಸಿ ಬೋಲ್ಯಾಂಡ್ಗೆ ವಿಕೆಟ್ ಒಪ್ಪಿಸಿದರು. ಈ ಇಬ್ಬರ ನಿರ್ಗಮನದ ತಂಡ, 59 ರನ್‌ಗಳಲ್ಲಿ ಮೂರನೇ ವಿಕೆಟ್ ಮತ್ತು 78 ರನ್‌ಗಳಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಈ ವೇಳೆ ಗಿಲ್ 15 ಎಸೆತಗಳಲ್ಲಿ 13 ರನ್ ಮತ್ತು ಕೊಹ್ಲಿ 12 ಎಸೆತಗಳಲ್ಲಿ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಗವಾಸ್ಕರ್ ಅವರಿಂದ ಛೀಮಾರಿ ಹಾಕಿಸಿಕೊಂಡಿದ್ದ ಪಂತ್ ಮತ್ತೊಮ್ಮೆ ತಮ್ಮ ಹಳೆಯ ಶೈಲಿಯಲ್ಲೇ ಬ್ಯಾಟ್ ಬೀಸಿ 33 ಎಸೆತಗಳಲ್ಲಿ 61 ರನ್‌ಗಳಿಗೆ ವಿಕೆಟ್ ಕೈಚೆಲ್ಲಿದರು.
ರೋಚಕ ಘಟ್ಟದತ್ತ ಸಿಡ್ನಿ ಟೆಸ್ಟ್
ಸಿಡ್ನಿ ಟೆಸ್ಟ್ ಪ್ರಸ್ತುತ ಅತ್ಯಂತ ರೋಚಕ ಘಟ್ಟದಲ್ಲಿದೆ. ಕೇವಲ ಎರಡು ದಿನ ಕಳೆದಿದ್ದು 26 ವಿಕೆಟ್‌ಗಳು ಬಿದ್ದಿವೆ. ಅಲ್ಲದೇ ಪಂದ್ಯದ ಮೂರನೇ ಇನಿಂಗ್ಸ್ ಆರಂಭವಾಗಿದ್ದು, ಇದೀಗ ಮೂರನೇ ದಿನವೇ ಪಂದ್ಯದ ಫಲಿತಾಂಶ ಹೊರಬೀಳುವಂತೆ ತೊರುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದೆ. ಇದರೊಂದಿಗೆ ತಂಡದ ಒಟ್ಟು ಮುನ್ನಡೆ 145 ರನ್‌ಗಳಿಗೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್ ಗಳಿಸಿದ್ದರೆ, ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 181 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Sat, 4 January 25