ಬುಮ್ರಾ ಇಲ್ಲದೆ ಕಣಕ್ಕಿಳಿದ ಭಾರತ: ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ
Australia vs India, 5th Test: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದಿಲ್ಲ. ಇದರ ಸಂಪೂರ್ಣ ಲಾಭ ಪಡೆದಿರುವ ಆಸ್ಟ್ರೇಲಿಯಾ ಬ್ಯಾಟರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ (2024-25) ಕೊನೆಯ ಮತ್ತು ನಿರ್ಣಾಯಕ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆಯುತ್ತಿದೆ. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ನು ನೋವಿನ ಕಾರಣ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದಿಲ್ಲ. ಇದರ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲೇ ಭರ್ಜರಿ ದಾಖಲೆ ಬರೆದಿದೆ.
ಸಿಡ್ನಿಯಲ್ಲಿ ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ
ಸಿಡ್ನಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ನಲ್ಲಿ 157 ರನ್ಗಳಿಗೆ ಆಲೌಟ್ ಆಯಿತು. ಅದರಂತೆ 162 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರು ಸ್ಪೋಟಕ ಆರಂಭ ಒದಗಿಸಿದರು.
ಅದರಲ್ಲೂ ಯುವ ಆರಂಭಿಕ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಬಿರುಸಿನ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಮೂರು ಓವರ್‌ಗಳಲ್ಲಿ 35 ರನ್ ಕಲೆಹಾಕಿತು. ಇದು ಟೆಸ್ಟ್‌ನಲ್ಲಿ ಯಾವುದೇ ಇನ್ನಿಂಗ್ಸ್‌ನ ಮೊದಲ ಮೂರು ಓವರ್‌ಗಳಲ್ಲಿ ಆಸ್ಟ್ರೇಲಿಯಾ ಗಳಿಸಿದ ಗರಿಷ್ಠ ಸ್ಕೋರ್ ಎಂಬುದು ವಿಶೇಷ.
ಈ ವೇಳೆ ಸ್ಯಾಮ್ ಕೊನ್ಸ್ಟಾಸ್ ಕೇವಲ 17 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 22 ರನ್ ಬಾರಿಸಿದ್ದರು. ಈ ಮೂಲಕ ಟೆಸ್ಟ್‌ನಲ್ಲಿ ಭರ್ಜರಿ ದಾಖಲೆ ಬರೆಯುವಲ್ಲಿ ಯುವ ದಾಂಡಿಗ ಪ್ರಮುಖ ಪಾತ್ರವಹಿಸಿದರು.
ಜಸ್ಪ್ರೀತ್ ಬುಮ್ರಾಗೆ ಏನಾಗಿದೆ?
ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಭೋಜನಾ ವಿರಾಮದ ಬಳಿಕ ದಿಢೀರ್ ಆಗಿ ಡ್ರೆಸ್ಸಿಂಗ್ ರೂಮ್ಗೆ ಮರಳಿದ್ದರು.
ಭೋಜನಾ ವಿರಾಮದ ಬಳಿಕ ಓವರ್ ಎಸೆದ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಅವರ ಬೆನ್ನಿನ ಸ್ನಾಯುವಿನಲ್ಲಿ ಸೆಳೆತ ಉಂಟಾಗಿದ್ದು, ಹೀಗಾಗಿ ಮುನ್ನೆಚ್ಚರಿಕೆಯ ಸಲುವಾಗಿ ಅವರು ಮೈದಾನದಿಂದ ಹೊರ ನಡೆದಿದ್ದರು. ಅದಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: IND vs AUS: ಮೈದಾನ ತೊರೆದ ಜಸ್ಪ್ರೀತ್ ಬುಮ್ರಾ: ವಿರಾಟ್ ಕೊಹ್ಲಿ ಕ್ಯಾಪ್ಟನ್
ಇನ್ನು ಡ್ರೆಸ್ಸಿಂಗ್ ರೂಮ್ಗೆ ತೆರಳಿದ ಬಳಿಕ ಜಸ್ಪ್ರೀತ್ ಬುಮ್ರಾ ಅವರನ್ನು ಫಿಸಿಯೋ ಪರೀಕ್ಷಿಸಿದ್ದಾರೆ. ಅಲ್ಲದೆ ಸ್ಕ್ಯಾನಿಂಗ್ಗಾಗಿ ಸಿಡ್ನಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಜಸ್ಪ್ರೀತ್ ಕಾಣಿಸಿಕೊಂಡಿಲ್ಲ.