IND vs AUS: 590 ದಿನಗಳ ಬಳಿಕ ಏಕದಿನ ಮಾದರಿಯಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ..!

|

Updated on: Sep 23, 2023 | 6:32 AM

Suryakumar Yadav: ಸತತ ಅವಕಾಶಗಳ ನಡುವೆಯೂ ಏಕದಿನ ಪಂದ್ಯಗಳಲ್ಲಿ ಸೂರ್ಯ ಅವರಿಗೆ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಿರಲಿಲ್ಲ. ಏಷ್ಯಾಕಪ್‌ನಲ್ಲೂ ಸೂರ್ಯ ನಿರಾಸೆ ಮೂಡಿಸಿದ್ದರು. ಹಾಗಾಗಿ ಸೂರ್ಯ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆದರೆ ಸೂರ್ಯ ಆಸ್ಟ್ರೇಲಿಯಾ ವಿರುದ್ಧ ಹೋರಾಟದ ಅರ್ಧಶತಕ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

IND vs AUS: 590 ದಿನಗಳ ಬಳಿಕ ಏಕದಿನ ಮಾದರಿಯಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ..!
ಸೂರ್ಯಕುಮಾರ್ ಯಾದವ್
Follow us on

ಟಿ20 ಕ್ರಿಕೆಟ್​ನಲ್ಲಿ ಸುಮಾರು ತಿಂಗಳುಗಳಿಂದ ನಂಬರ್ 1 ಬ್ಯಾಟರ್ ( World No 1 T20 batter) ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್​ಗೆ (Suryakumar Yadav) ಏಕದಿನ ಮಾದರಿಯಲ್ಲಿ ಮಾತ್ರ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈತ ಈ ಮಾದರಿಗೆ ಸೂಕ್ತವಾದ ಬ್ಯಾಟರ್ ಅಲ್ಲ ಎಂಬ ಮಾತು ಎಲ್ಲೆಡೆ ಕೇಳಿಬರಲಾರಂಬಿಸಿತ್ತು. ಇದಕ್ಕೆ ಕಾರಣವೂ ಇದ್ದು, ಟಿ20 ಮಾದರಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿರುವ ಸೂರ್ಯನಿಗೆ ಏಕದಿನ ಮಾದರಿಯಲ್ಲಿ ಬರೋಬ್ಬರಿ 590 ದಿನಗಳಿಂದ ಒಂದೇ ಒಂದು ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ (India vs Australia) ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ಲಯಕಂಡುಕೊಂಡಿರುವ ಸೂರ್ಯಕುಮಾರ್ ಯಾದವ್ ಹೋರಾಟದ ಅರ್ಧಶತಕ ಬಾರಿಸಿದರು. ಸೂರ್ಯ ಕೇವಲ 47 ಎಸೆತಗಳಲ್ಲಿ 106 ಸ್ಟ್ರೈಕ್ ರೇಟ್‌ನೊಂದಿಗೆ ಈ ಅರ್ಧ ಶತಕವನ್ನು ಪೂರ್ಣಗೊಳಿಸಿದರು. ಈ ವೇಳೆ ಸೂರ್ಯ ಅವರ ಬ್ಯಾಟ್​​ನಿಂದ 5 ಬೌಂಡರಿ ಹಾಗೂ 1 ಸಿಕ್ಸರ್‌ ಕೂಡ ಹೊರಬಂತು. ಇದು ಏಕದಿನ ವೃತ್ತಿಜೀವನದಲ್ಲಿ ಸೂರ್ಯ ಅವರ ಮೂರನೇ ಅರ್ಧಶತಕವಾಗಿದೆ.

ಸತತ ಅವಕಾಶಗಳ ನಡುವೆಯೂ ಏಕದಿನ ಪಂದ್ಯಗಳಲ್ಲಿ ಸೂರ್ಯ ಅವರಿಗೆ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗಿರಲಿಲ್ಲ. ಏಷ್ಯಾಕಪ್‌ನಲ್ಲೂ ಸೂರ್ಯ ನಿರಾಸೆ ಮೂಡಿಸಿದ್ದರು. ಹಾಗಾಗಿ ಸೂರ್ಯ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆದರೆ ಸೂರ್ಯ ಆಸ್ಟ್ರೇಲಿಯಾ ವಿರುದ್ಧ ಹೋರಾಟದ ಅರ್ಧಶತಕ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಏಕದಿನದಲ್ಲಿ ಸೂರ್ಯಕುಮಾರ್​ಗೆ ಪದೇಪದೇ ಅವಕಾಶ ನೀಡುತ್ತಿರುವುದ್ಯಾಕೆ? ರೋಹಿತ್ ನೀಡಿದ ಉತ್ತರವಿದು

2022 ರಲ್ಲಿ ಕೊನೆಯ ಅರ್ಧಶತಕ

ವಾಸ್ತವವಾಗಿ ಕಳೆದ ವರ್ಷ ಅಂದರೆ, 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸೂರ್ಯ ಅವರ ಬ್ಯಾಟ್ ಕೊನೆಯದ್ದಾಗಿ ಅರ್ಧಶತಕ ಸಿಡಿಸಿತ್ತು. ಆ ಸಮಯದಲ್ಲಿ ಸೂರ್ಯ ಟಿ20 ಮಾದರಿಯಲ್ಲಿ ಮೂರು ಶತಕ ಹಾಗೂ ಐಪಿಎಲ್​ನಲ್ಲೂ ಒಂದು ಶತಕ ಬಾರಿಸಿದ್ದರು. ಆದರೆ ಇದೇ ಆಸೀಸ್ ವಿರುದ್ಧ ಈ ಹಿಂದೆ ನಡೆದಿದ್ದ ಏಕದಿನ ಸರಣಿಯಲ್ಲಿ ಆಡಿದ ಎಲ್ಲಾ ಮೂರು ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಡಕ್‌ಗೆ ಔಟಾಗಿ ಮುಜುಗರದ ದಾಖಲೆ ಬರೆದಿದ್ದರು.

ಹೀಗಾಗಿ ಸೂರ್ಯರನ್ನು ಏಕದಿನ ಮಾದರಿಯಿಂದ ಕೈಬಿಟ್ಟು ಸಂಜು ಸ್ಯಾಮ್ಸನ್ ಅಥವಾ ಇತರ ಆಟಗಾರರಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೂರ್ಯಕುಮಾರ್ ಯಾದವ್​ಗೆ ಪದೇಪದೇ ಅವಕಾಶ ನೀಡಿ ಅವರನ್ನು ಮತ್ತೆ ಫಾರ್ಮ್​ಗೆ ಕರೆತಂದಿದ್ದಾರೆ.

ಐದನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ

ಇನ್ನು ಈ ಪಂದ್ಯದಲ್ಲಿ ಸೂರ್ಯ ಅರ್ಧಶತಕ ಸಿಡಿಸಿದಲ್ಲದೆ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಐದನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಇದು ಭಾರತದ ಗೆಲುವಿನ ಪ್ರಮುಖ ಪಾತ್ರವಹಿಸಿತು. ಆದರೆ ತಂಡವನ್ನು ಗೆಲುವಿನ ಸನಿಹಕ್ಕೆ ತಂದ ಸೂರ್ಯ ಅಂತಿಮವಾಗಿ 47ನೇ ಓವರ್​ನಲ್ಲಿ ಸೀನ್ ಅಬಾಟ್​ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು. ಆದರೆ ಅಷ್ಟರಲ್ಲಾಗಲೇ ಸೂರ್ಯ ತಾವು ಮಾಡಬೇಕಿದ್ದ ಕೆಲಸವನ್ನು ಮಾಡಿ ಮುಗಿಸಿದ್ದರು.ಇನ್ನು ಈ ಪಂದ್ಯದಲ್ಲಿ ಈ ಇಬ್ಬರ ಜೊತೆಗೆ ಆರಂಭಿಕರಾದ ಶುಭ್​ಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರ 142 ರನ್‌ಗಳ ಆರಂಭಿಕ ಜೊತೆಯಾಟವು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ