IND vs AUS: 3ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ರಿಲೀಫ್

India vs Australia T20: ಭಾರತ-ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಶುಭ ಸುದ್ದಿ. 2ನೇ ಪಂದ್ಯದಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣರಾಗಿದ್ದ ಆಸ್ಟ್ರೇಲಿಯಾದ ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಮುಂಬರು ಆಶಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿರುವ ಹೇಜಲ್‌ವುಡ್ ಅನುಪಸ್ಥಿತಿ ಭಾರತಕ್ಕೆ ಸರಣಿ ಗೆಲ್ಲಲು ದೊಡ್ಡ ಅವಕಾಶವಾಗಿದೆ. ಮುಂದಿನ ಮೂರು ಪಂದ್ಯಗಳು ಭಾರತಕ್ಕೆ ನಿರ್ಣಾಯಕ.

IND vs AUS: 3ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ರಿಲೀಫ್
Australia

Updated on: Nov 01, 2025 | 4:08 PM

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾಕ್ಕೆ (India vs Australia) ಮುಂದಿನ ಮೂರು ಪಂದ್ಯಗಳು ಸರಣಿ ಗೆಲ್ಲಲು ನಿರ್ಣಾಯಕವಾಗಿವೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ20 ಸರಣಿಯನ್ನು ಗೆಲ್ಲಬೇಕಾದರೆ, ಉಳಿದ 3 ಪಂದ್ಯಗಳನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇದಕ್ಕೆ ಪೂರಕವಾಗಿ ಇದೀಗ ಟೀಂ ಇಂಡಿಯಾಕ್ಕೆ ಶುಭ ಸುದ್ದಿಯೊಂದು ಸಿಕ್ಕಿದ್ದು, ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದಿದ್ದ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹೇಜಲ್​ವುಡ್ (Josh Hazlewood)​ ಸರಣಿಯ ಉಳಿದ ಮೂರು ಪಂದ್ಯಗಳಿಂದ ಹೊರಗುಳಿಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಬೌಲಿಂಗ್ ಕೊಂಚ ದುರ್ಬಲವಾಗಲಿದ್ದು, ಟೀಂ ಇಂಡಿಯಾ ಇದನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.

ಸರಣಿಯಿಂದ ಹೊರಬಿದ್ದ ಹೇಜಲ್‌ವುಡ್

ಮೇಲೆ ಹೇಳಿದಂತೆ ಎರಡನೇ ಟಿ20ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಐದು ಪಂದ್ಯಗಳ ಟಿ20 ಸರಣಿಯ ಉಳಿದ ಪಂದ್ಯಗಳನ್ನು ಆಡುವುದಿಲ್ಲ. ನವೆಂಬರ್ ಅಂತ್ಯದಲ್ಲಿ ಆಶಸ್ ಟೆಸ್ಟ್ ಸರಣಿ ಆರಂಭವಾಗಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಂಪೂರ್ಣವಾಗಿ ಫಿಟ್ ಆಗಿರಬೇಕೆಂಬ ಉದ್ದೇಶದಿಂದ ಹ್ಯಾಜಲ್‌ವುಡ್‌ಗೆ ವಿಶ್ರಾಂತಿ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಹೇಜಲ್‌ವುಡ್ ನಾಲ್ಕು ಓವರ್‌ಗಳಲ್ಲಿ ಕೇವಲ 13 ರನ್‌ಗಳನ್ನು ನೀಡಿ ಪ್ರಮುಖ ಮೂವರು ಆಟಗಾರರನ್ನು ಔಟ್ ಮಾಡಿದ್ದರು.

ಹೇಜಲ್​ವುಡ್ ಬದಲು ಯಾರು?

ಹೇಜಲ್‌ವುಡ್ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ಟೀಂ ಇಂಡಿಯಾ, ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಇದರ ಪರಿಣಾಮವಾಗಿ ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗದೆ 18.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 125 ರನ್​ಗಳಿಗೆ ಆಲೌಟ್ ಆಯಿತು ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 4 ವಿಕೆಟ್​ಗಳ ಸುಲಭ ಜಯ ಸಾಧಿಸಿತು. ಇನ್ನು ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿರುವ ಹೇಜಲ್‌ವುಡ್ ಅನುಪಸ್ಥಿತಿಯಲ್ಲಿ ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್ ಅಥವಾ ಸೀನ್ ಅಬಾಟ್ ಈ ಮೂವರಲ್ಲಿ ಒಬ್ಬರು ಆಡುವ ಸಾಧ್ಯತೆಯಿದೆ.

IND vs AUS: ಟೀಂ ಇಂಡಿಯಾಕ್ಕೆ ಆಘಾತ; ಮೊದಲ 3 ಟಿ20 ಪಂದ್ಯಗಳಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್

ಆಸ್ಟ್ರೇಲಿಯಾದ ಪರಿಷ್ಕೃತ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ, ಮಹ್ಲಿ ಬಿಯರ್ಡ್‌ಮನ್, ಸೀನ್ ಅಬಾಟ್ (ಮೊದಲ 3 ಪಂದ್ಯಗಳಿಗೆ), ಬೆನ್ ದ್ವಾರಶುಯಿಸ್ (ಕೊನೆಯ 2 ಪಂದ್ಯಗಳಿಗೆ), ಗ್ಲೆನ್ ಮ್ಯಾಕ್ಸ್‌ವೆಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ