ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಇಂಗ್ಲೆಂಡ್
New Zealand vs England: ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಅಗ್ರ ಕ್ರಮಾಂಕದ ಬ್ಯಾಟರ್ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಕಳಪೆ ಪ್ರದರ್ಶನದೊಂದಿಗೆ 27 ವರ್ಷಗಳ ಹಿಂದೆ ಬಾಂಗ್ಲಾದೇಶ್ ತಂಡ ಬರೆದ ಅತ್ಯಂತ ಹೀನಾಯ ದಾಖಲೆಯೊಂದನ್ನು ಇಂಗ್ಲೆಂಡ್ ತಂಡ ಮುರಿದಿದೆ.
Updated on: Nov 01, 2025 | 1:53 PM

ಏಕದಿನ ಕ್ರಿಕೆಟ್ ಶುರುವಾಗಿ ಬರೋಬ್ಬರಿ 54 ವರ್ಷಗಳಾಗಿವೆ. ಈ ಐವತ್ತ ನಾಲ್ಕು ವರ್ಷಗಳ ಇತಿಹಾಸದಲ್ಲೇ ಇಂಗ್ಲೆಂಡ್ ತಂಡವು ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಹೀನಾಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಇಂತಹದೊಂದು ಕಳಪೆ ದಾಖಲೆ ನಿರ್ಮಾಣಕ್ಕೆ ಕಾರಣವಾಗಿದ್ದು ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದ ನಾಲ್ವರು ದಾಂಡಿಗರು.

ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪರ ಟಾಪ್-4 ಕ್ರಮಾಂಕಗಳಲ್ಲಿ ಕಣಕ್ಕಿಳಿದ ಬ್ಯಾಟರ್ಗಳೆಂದರೆ ಜೇಮಿ ಸ್ಮಿತ್, ಬೆನ್ ಡಕೆಟ್, ಜೋ ರೂಟ್, ಜೇಕಬ್ ಬೆಥೆಲ್ ಹಾಗೂ ಹ್ಯಾರಿ. ಮೊದಲೆರಡು ಪಂದ್ಯಗಳಲ್ಲಿ ಸ್ಮಿತ್, ಡಕೆಟ್, ರೂಟ್ ಹಾಗೂ ಬೆಥೆಲ್ ಟಾಪ್-4 ನಲ್ಲಿ ಬ್ಯಾಟ್ ಬೀಸಿದ್ದರು.

ಈ ಎರಡು ಪಂದ್ಯಗಳಲ್ಲಿ ಜೇಮಿ ಸ್ಮಿತ್ (13), ಬೆನ್ ಡಕೆಟ್ (3), ಜೋ ರೂಟ್ (27), ಜೇಕಬ್ ಬೆಥೆಲ್ (20) ಕಲೆಹಾಕಿದ ಒಟ್ಟು ಸ್ಕೋರ್ 63 ರನ್ಗಳು ಮಾತ್ರ. ಇನ್ನು ಮೂರನೇ ಪಂದ್ಯದಲ್ಲಿ ಹ್ಯಾರಿ ಬ್ರೂಕ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 6 ರನ್ ಬಾರಿಸಿ ಔಟಾಗಿದ್ದರು.

ಅಂದರೆ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ನ ಟಾಪ್-4 ಬ್ಯಾಟರ್ಗಳಾದ ಜೇಮಿ ಸ್ಮಿತ್ (5), ಬೆನ್ ಡಕೆಟ್ (8), ಜೋ ರೂಟ್ (2), ಜೇಕಬ್ ಬೆಥೆಲ್ (6) ಒಟ್ಟು ಸ್ಕೋರ್ 21 ರನ್ಗಳು ಮಾತ್ರ. ಇದರೊಂದಿಗೆ ಏಕದಿನ ಸರಣಿ ಅಥವಾ ಟೂರ್ನಿಯಲ್ಲಿ ಅತೀ ಕಡಿಮೆ ರನ್ ಕಲೆಹಾಕಿದ ಟಾಪ್-4 ಬ್ಯಾಟರ್ಗಳ ಹೀನಾಯ ದಾಖಲೆಯೊಂದು ಇಂಗ್ಲೆಂಡ್ ಪಾಲಾಯಿತು.

ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಬಾಂಗ್ಲಾದೇಶ್ ತಂಡದ ಹೆಸರಿನಲ್ಲಿತ್ತು. 1988 ರ ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶದ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ಕೇವಲ 89 ರನ್‌ಗಳನ್ನು ಗಳಿಸಿ ಈ ಹೀನಾಯ ದಾಖಲೆ ಬರೆದಿದ್ದರು. ಇದೀಗ 27 ವರ್ಷಗಳ ಬಳಿಕ ಈ ದಾಖಲೆಯನ್ನು ಇಂಗ್ಲೆಂಡ್ ಬ್ಯಾಟರ್ಗಳು ಅಳಿಸಿ ಹಾಕಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅಗ್ರ ನಾಲ್ವರು ಬ್ಯಾಟರ್ಗಳು ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 84 ರನ್ಗಳು ಮಾತ್ರ. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಟೂರ್ನಿ ಅಥವಾ ಏಕದಿನ ಸರಣಿಯೊಂದರಲ್ಲಿ ಅತೀ ಕಡಿಮೆ ಸ್ಕೋರ್ಗಳಿಸಿದ ಟಾಪ್-4 ಬ್ಯಾಟರ್ಗಳ ಹೀನಾಯ ದಾಖಲೆ ಇಂಗ್ಲೆಂಡ್ ತಂಡದ ಹೆಸರಿಗೆ ಸೇರ್ಪಡೆಯಾಗಿದೆ.
