ಈ ವರ್ಷದ ನವೆಂಬರ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿದೆ. ಸುಮಾರು 2 ತಿಂಗಳ ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿಗೆ ಉಭಯ ತಂಡಗಳ ನಡುವೆ 5 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಡೇ ನೈಟ್ ಟೆಸ್ಟ್ ಪಂದ್ಯವೂ ಸೇರಿದೆ. ಈ ಹಗಲು- ರಾತ್ರಿ ಪಂದ್ಯವು ಅಡಿಲೇಡ್ ಓವಲ್ ಮೈದಾನದಲ್ಲಿ ಡಿಸೆಂಬರ್ 6 ರಿಂದ 10 ರ ನಡುವೆ ನಡೆಯಲಿದೆ. ಈ ಹಿಂದೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡಿದ್ದಾಗ ಹೀನಾಯ ಪ್ರದರ್ಶನ ನೀಡಿತ್ತು. ಹೀಗಾಗಿ ಮತ್ತೊಮ್ಮೆ ಆ ಮುಜುಗರವನ್ನು ತಡೆಯುವ ಸಲುವಾಗಿ ಟೀಂ ಇಂಡಿಯಾ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
2020-21ರ ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಂ ಇಂಡಿಯಾ ಮೊದಲ ಬಾರಿಗೆ ಟೆಸ್ಟ್ ಸರಣಿಗಾಗಿ ಆಸೀಸ್ ಪ್ರವಾಸ ಮಾಡಲಿದೆ. ಆದರೆ ಕಳೆದ ಪ್ರವಾಸದಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಭಾರತ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಅಡಿಲೇಡ್‌ನಲ್ಲಿ ನಡೆದ ಆ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 244 ರನ್ ಗಳಿಸಿ ಪಂದ್ಯಕ್ಕೆ ಶುಭಾರಂಭ ನೀಡಿತ್ತು. ಆ ಬಳಿಕ ಭಾರತದ ಬೌಲರ್‌ಗಳು ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಕಟ್ಟಿ ಹಾಕಿ ಪಂದ್ಯ ಗೆಲ್ಲುವ ಸುಳಿವು ನೀಡಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಇಡೀ ಭಾರತ ತಂಡ 21.2 ಓವರ್ಗಳಲ್ಲಿ ಕೇವಲ 36 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಅಂದರೆ ಇಡೀ ತಂಡ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಗೆಲುವಿನ ಫೇವರೇಟ್ ಎನಿಸಿಕೊಂಡಿದ್ದ ಭಾರತ ತಂಡ ಆ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು.
ಈ ಬಾರಿ ಆಸ್ಟ್ರೇಲಿಯಾದಲ್ಲಿ ಇಂತಹ ಪ್ರಮಾದ ತಪ್ಪಿಸಲು ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಎರಡು ದಿನಗಳ ಹಗಲು-ರಾತ್ರಿ ಅಭ್ಯಾಸ ಪಂದ್ಯ ಆಡಲು ನಿರ್ಧರಿಸಿದೆ. ಅದರಂತೆ ನವೆಂಬರ್ 30 ಮತ್ತು ಡಿಸೆಂಬರ್ 1 ರ ನಡುವೆ ಕ್ಯಾನ್‌ಬೆರಾದಲ್ಲಿ ಹಗಲು-ರಾತ್ರಿ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪ್ರೈಂ ಮಿನಿಸ್ಟರ್ 11 ತಂಡದ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಕಳೆದ 2 ವರ್ಷಗಳಿಂದ ಟೀಂ ಇಂಡಿಯಾ ಯಾವುದೇ ಡೇ-ನೈಟ್ ಟೆಸ್ಟ್ ಆಡಿಲ್ಲ. ಹಾಗಾಗಿ ಈ ಅಭ್ಯಾಸ ಪಂದ್ಯ ಭಾರತೀಯ ಆಟಗಾರರ ಸಿದ್ಧತೆಗೆ ಬಹಳ ಮಹತ್ವದ್ದಾಗಿದೆ.
ಟೀಂ ಇಂಡಿಯಾ ಇದುವರೆಗೆ ಕೇವಲ 4 ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಅವಧಿಯಲ್ಲಿ ಭಾರತದಲ್ಲಿ 3 ಹಗಲು-ರಾತ್ರಿ ಟೆಸ್ಟ್ ಪಂದ್ಯಗಳು ನಡೆದಿದ್ದು, ಈ ಎಲ್ಲ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಅದೇ ಸಮಯದಲ್ಲಿ, ಟೀಂ ಇಂಡಿಯಾ ಭಾರತದ ಹೊರಗೆ ಕೇವಲ ಒಂದು ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿದೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ಇದುವರೆಗೆ 12 ಹಗಲು ರಾತ್ರಿ ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 11 ಪಂದ್ಯಗಳನ್ನು ಗೆದ್ದಿದ್ದರೆ, 1 ಪಂದ್ಯದಲ್ಲಿ ಸೋತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Fri, 9 August 24