ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ಆರಂಭವಾಗಿದೆ. ಪಂದ್ಯದ ಎರಡನೇ ದಿನವಾದ ಇಂದು, ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 104 ರನ್ಗಳಿಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ಗಳನ್ನು ಕಲೆಹಾಕಿರುವ ಟೀಂ ಇಂಡಿಯಾ ಇದರೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ 218 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಭಾರತವನ್ನು ಭದ್ರ ಸ್ಥಿತಿಯಲ್ಲಿಡುವಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ಪಾತ್ರ ಪ್ರಮುಖವಾಗಿತ್ತು. ಈ ಇಬ್ಬರು ಅಜೇಯರಾಗಿ ಉಳಿದಿರುವುದಲ್ಲದೆ ತಲಾ ಅರ್ಧಶತಕವನ್ನು ಕಲೆಹಾಕಿ ತಂಡವನ್ನು ಉತ್ತಮ ಸ್ಥಿತಿಯಲ್ಲಿರಿಸಿದ್ದಾರೆ. ಇದೇ ವೇಳೆ ಪದೇ ಪದೇ ಬ್ಯಾಟಿಂಗ್ ಮಾಡಲು ತೊಂದರೆ ನೀಡುತ್ತಿದ್ದ ಆಸೀಸ್ ಆಟಗಾರರಿಗೆ ತಕ್ಕ ತಿರುಗೇಟು ನೀಡುವ ಕೆಲಸವನ್ನು ಆರಂಭಿಕ ಯಶಸ್ವಿ ಜೈಸ್ವಾಲ್ ಮಾಡಿದ್ದಾರೆ.
ವಾಸ್ತವವಾಗಿ ಕ್ರಿಕೆಟ್ನಲ್ಲಿ ಸ್ಲೆಡ್ಜಿಂಗ್ ಎಂದೊಡನೆ ನಮಗೆಲ್ಲಾ ಥಟ್ಟನೆ ನೆನಪಾಗುವುದು ಆಸೀಸ್ ಆಟಗಾರರು. ಮೈದಾನ ಯಾವುದೇ ಇರಲಿ, ಆಟಗಾರ ಯಾರೇ ಇರಲಿ, ತಮ್ಮ ಮಾತಿನಿಂದಲೇ ಜರಿಯುವ ಕೆಲಸ ಮಾಡುವಲ್ಲಿ ಆಸೀಸ್ ಆಟಗಾರರು ನಿಸ್ಸೀಮರು. ಇದೀಗ ಅದೇ ಕೆಲಸಕ್ಕೆ ಕೈಹಾಕಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮುಂದೆ ಮುಜುಗರಕ್ಕೊಳಗಾಗಿದ್ದಾರೆ.
ಪರ್ತ್ ಟೆಸ್ಟ್‌ನ ಎರಡನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್, ವೇಗಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ನಂತರದ ಎಸೆತವನ್ನು ಜೈಸ್ವಾಲ್ ಬೌಂಡರಿಗಟ್ಟಲು ಯತ್ನಿಸಿ ವಿಫಲರಾದರು. ಈ ವೇಳೆ ಸ್ಟಾರ್ಕ್, ಜೈಸ್ವಾಲ್ರನ್ನು ನೋಡುತ್ತ ತಮಾಷೆಯಾಗಿ ನಗಲಾರಂಭಿಸಿದರು. ನಂತರದ ಎಸೆತದಲ್ಲೂ ಜೈಸ್ವಾಲ್‌ಗೆ ರನ್ ಕದಿಯಲು ಸಾಧ್ಯವಾಗಲಿಲ್ಲ. ಈ ವೇಳೆ ಸ್ಟಾರ್ಕ್, ಜೈಸ್ವಾಲ್‌ಗೆ ಏನನ್ನೋ ಹೇಳಿದರು. ಅದನ್ನು ಕೇಳಿಸಿಕೊಂಡು ಕೆರಳಿದ ಜೈಸ್ವಾಲ್, ‘ನಿಮ್ಮ ಚೆಂಡು ನಿಧಾನವಾಗಿ ಬರುತ್ತಿದೆ’ ಎಂದು ಹೇಳುವ ಮೂಲಕ ಸ್ಟಾರ್ಕ್ ಬಾಯಿಗೆ ಬೀಗ ಹಾಕಿದರು.
#YashasviJaiswal didn’t hesitate! 😁
“It’s coming too slow!” – words no fast bowler ever wants to hear! 👀
📺 #AUSvINDOnStar 👉 1st Test, Day 2, LIVE NOW! #AUSvIND #ToughestRivalry pic.twitter.com/8eFvxunGGv
— Star Sports (@StarSportsIndia) November 23, 2024
ಇಲ್ಲಿಗೆ ಸುಮ್ಮನಾಗದ ಆಸೀಸ್ ಆಟಗಾರರು ಜೈಸ್ವಾಲ್ರನ್ನು ಆಗಾಗ್ಗೆ ಕೆದಕುತ್ತಲೇ ಇದ್ದರು. ಭಾರತದ ಇನ್ನಿಂಗ್ಸ್ನ 44ನೇ ಓವರ್‌ನಲ್ಲಿ ಜೈಸ್ವಾಲ್ ರನ್ ಕದಿಯಲು ಯತ್ನಿಸಿದರು. ಆದರೆ ಚೆಂಡು ವಿಕೆಟ್ ಹತ್ತಿರದಲ್ಲೇ ಫಿಲ್ಡರ್ ಕೈಗೆ ಹೋದುದ್ದರಿಂದ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜೈಸ್ವಾಲ್ ಕೂಡಲೇ ಕ್ರೀಸ್ನತ್ತ ಓಡಿದರು. ಈ ವೇಳೆ ಚೆಂಡನ್ನು ಹಿಡಿದ ಲಬುಶೇನ್, ಸ್ಟಂಪ್ಗೆ ಚೆಂಡನ್ನು ಹೊಡೆಯುವಂತೆ ನಟಿಸಿದರು. ಇದನ್ನು ಗಮನಿಸಿದ ಜೈಸ್ವಾಲ್, ಕ್ರೀಸ್ನ ಹೊರಗೆ ನಿಂತು, ಚೆಂಡನ್ನು ಸ್ಟಂಪ್ಗೆ ಹೊಡೆಯುವಂತೆ ಲಬುಶೇನ್ಗೆ ಆಹ್ವಾನ ನೀಡಿದರು. ಇಬ್ಬರ ನಡುವೆ ಈ ರೀತಿಯ ಘಟನೆ 2-3 ಬಾರಿ ಮುಂದುವರೆಯಿತು.
Jaiswal 😭😭😭 pic.twitter.com/kmhVUYqLKN
— soo washed (@anubhav__tweets) November 23, 2024
ಈ ಎಲ್ಲಾ ಮಾತುಕತೆಗಳ ನಡುವೆಯೂ ತಮ್ಮ ಲಯ ಕಳೆದುಕೊಳ್ಳದ ಜೈಸ್ವಾಲ್, ದಿನದಾಟದಂತ್ಯಕ್ಕೆ 90 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡದ್ದಾರೆ. ಆದಾಗ್ಯೂ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲಿ ಆಮೆಗತಿಯ ಬ್ಯಾಟಿಂಗ್ ಮಾಡಿದ್ದು, ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಂತ ನಿಧಾನವಾದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಯಶಸ್ವಿ ಜೈಸ್ವಾಲ್ 122 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದರ ಜೊತೆಗೆ ಜೈಸ್ವಾಲ್, ರಾಹುಲ್ ಅವರೊಂದಿಗೆ 172 ರನ್‌ಗಳ ಜೊತೆಯಾಟವನ್ನು ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ