IND vs BAN, ICC World Cup: ವಿಶ್ವಕಪ್ನಲ್ಲಿಂದು ಭಾರತ-ಬಾಂಗ್ಲಾ ಸೆಣೆಸಾಟ: ರೋಹಿತ್ ಪಡೆಯಲ್ಲಿ ಯಾರಿಗೆಲ್ಲ ವಿಶ್ರಾಂತಿ?
India vs Bangladesh, ICC World Cup 2023: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು ಐಸಿಸಿ ಏಕದಿನ ವಿಶ್ವಕಪ್ 2023 ರ 17ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಇಲ್ಲಿದೆ ಪಂದ್ಯದ ಕುರಿತ ಮಾಹಿತಿ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು 17ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ (India vs Bangladesh) ಮುಖಾಮುಖಿ ಆಗಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಹ್ಯಾಟ್ರಿಕ್ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದ್ದರೆ, ಇತ್ತ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಕಂಡಿರುವ ಬಾಂಗ್ಲಾಕ್ಕೆ ಈ ಮ್ಯಾಚ್ ಮಹತ್ವದ್ದಾಗಿದೆ.
ಭಾರತದಲ್ಲಿ ಬದಲಾವಣೆ?:
ಮೇಲ್ನೋಟಕ್ಕೆ ಬಾಂಗ್ಲಾದೇಶ ತಂಡ ಭಾರತಕ್ಕೆ ದೊಡ್ಡ ಸವಾಲು ಅಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ. ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಬಹುದು. ಮುಖ್ಯವಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಎದುರಾಳಿಗೆ ದೊಡ್ಡ ಸವಾಲು ನೀಡದ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಂಭವವಿದೆ. ಹಾಗೆಯೆ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಇವರು ವಿರಾಟ್ ಕೊಹ್ಲಿ ಅಥವಾ ಶ್ರೇಯಸ್ ಅಯ್ಯರ್ ಜಾಗಕ್ಕೆ ಬರಬಹುದು. ಉಳಿದಂತೆ ಬದಲಾವಣೆ ಅನುಮಾನ.
ಭಾರತದ ವಿರುದ್ಧ ಹೀನಾಯ ಸೋಲಿನ ಹತಾಶೆ; ಐಸಿಸಿಗೆ ದೂರು ನೀಡಿದ ಪಾಕ್ ಕ್ರಿಕೆಟ್ ಮಂಡಳಿ
ಇತ್ತ ಬಾಂಗ್ಲಾ ತಂಡ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆದರೆ, ಸಂಘಟಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟರ್ಗಳು ಸ್ಕೋರ್ ಮಾಡಿದರೆ ಬೌಲರ್ಗಳು ಕಮಾಲ್ ಮಾಡುತ್ತಿಲ್ಲ. ನಾಯಕ ಶಕಿಬ್ ಹಾಗೂ ಅನುಭವಿ ಮುಶ್ಫಿಕರ್ ರಹೀಮ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮೊಹಮ್ಮದುಲ್ಲ ಕೊನೆಯ ಹಂತದಲ್ಲಿ ರನ್ ಕಲೆಹಾಕುತ್ತಿದ್ದಾರೆ. ಉಳಿದ ಬ್ಯಾಟರ್ಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಬೌಲಿಂಗ್ನಲ್ಲೂ ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ಮೆಹ್ದಿ ಹಸನ್ ಮಿಂಚುತ್ತಿಲ್ಲ.
ಎಂಸಿಎ ಪಿಚ್ ರಿಪೋರ್ಟ್:
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದು ಹೇಳಬಹುದು. ಪಂದ್ಯದುದ್ದಕ್ಕೂ ಬ್ಯಾಟರ್‌ಗಳಿಗೆ ಈ ಪಿಚ್ ಸಹಕಾರ ನೀಡುತ್ತದೆ. ಬೌಲರ್ಗಳಿಗೆ ಇಲ್ಲಿ ದೊಡ್ಡ ಸವಾಲು ಎನ್ನಬಹುದು. ಮೈದಾನದ ಗಾತ್ರ ಚಿಕ್ಕದಾಗಿದ್ದು, ಇಲ್ಲಿ ಕೇವಲ 7 ಏಕದಿನ ಪಂದ್ಯಗಳನ್ನು ಆಡಲಾಗಿದೆ. ಈ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 4 ರಲ್ಲಿ ಜಯಗಳಿದೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 356/2 ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಎರಡು ವರ್ಷಗಳ ನಂತರ ಇಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಿಚ್ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ಕುತೂಹಲ ಕೂಡ ಇದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ ಆಯ್ಕೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕಿಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದೊಯ್, ಮಹೇದಿ ಹಸನ್, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹ್ಮಾನ್, ತನ್ಝಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಮಹಮ್ಮದುಲ್ಲಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ