IND vs BAN: ಕಾನ್ಪುರ್ ಟೆಸ್ಟ್‌ಗೆ ಬಿಗಿ ಭದ್ರತೆ; 20 ಜನರ ವಿರುದ್ಧ ಎಫ್‌ಐಆರ್ ದಾಖಲು

|

Updated on: Sep 25, 2024 | 5:32 PM

IND vs BAN: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು ಈಗಾಗಲೇ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಇನ್ನಷ್ಟು ಭದ್ರತೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

IND vs BAN: ಕಾನ್ಪುರ್ ಟೆಸ್ಟ್‌ಗೆ ಬಿಗಿ ಭದ್ರತೆ; 20 ಜನರ ವಿರುದ್ಧ ಎಫ್‌ಐಆರ್ ದಾಖಲು
ಭಾರತ- ಬಾಂಗ್ಲಾ ಟೆಸ್ಟ್
Follow us on

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ಮುಕ್ತಾಯಗೊಂಡಿದ್ದು, ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಸರಣಿಯ ಕೊನೆಯ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಲಿದೆ. ಸುಮಾರು 3 ವರ್ಷಗಳ ನಂತರ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಹೀಗಿರುವಾಗ ನಗರದಲ್ಲಿ ಈ ಬಗ್ಗೆ ಸಂಭ್ರಮ ಮನೆ ಮಾಡಿದ್ದು, ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿರುವ ಕಾರಣ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಅಲ್ಲದೆ ಈ ಟೆಸ್ಟ್ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು ಈಗಾಗಲೇ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಇನ್ನಷ್ಟು ಭದ್ರತೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

ಬಾಂಗ್ಲಾದೇಶ ತಂಡಕ್ಕೆ ಬಿಗಿ ಭದ್ರತೆ

ಕಾನ್ಪುರದಲ್ಲಿ ನಡೆಯಲ್ಲಿರುವ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ಎರಡೂ ತಂಡಗಳು ಕಾನ್ಪುರಕ್ಕೆ ಬಂದಿಳಿದಿವೆ. ಹೀಗಾಗಿ ಎರಡೂ ತಂಡಗಳಿಗೆ ಬಿಗಿ ಭದ್ರತೆ ನೀಡುವ ಸಲುವಾಗಿ ಉಭಯ ತಂಡಗಳು ನೆಲೆಸಿರುವ ಹೋಟೆಲ್ ಹಾಗೂ ಗ್ರೀನ್ ಪಾರ್ಕ್ ಸ್ಟೇಡಿಯಂ ಲ್ಯಾಂಡ್‌ಮಾರ್ಕ್‌ಗಳನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಲಾಗಿದೆ ಎಂದು ಕಾನ್ಪುರ ಪೊಲೀಸ್ ಡಿಸಿಪಿ (ಪೂರ್ವ) ಶ್ರವಣ್ ಕುಮಾರ್ ಸಿಂಗ್ ಹೇಳಿದ್ದಾರೆ ಎಂದು ಪಿಟಿಐ ವರದಿ ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಈ ಪಂದ್ಯದ ಭದ್ರತೆಯ ಜವಾಬ್ದಾರಿಯನ್ನು ಡಿಸಿಪಿ, ಹೆಚ್ಚುವರಿ ಡಿಸಿಪಿ ಮತ್ತು ಎಸಿಪಿ ಶ್ರೇಣಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೆಯೇ, ಟೆಸ್ಟ್ ಪಂದ್ಯವನ್ನು ಯಶಸ್ವಿಯಾಗಿ ನಡೆಸಲು ಕಾನ್ಪುರ ಪೊಲೀಸರು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಕೋರಿದ್ದು, ಪಂದ್ಯದ ವೇಳೆ ಅವರನ್ನು ನಿಯೋಜಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಬಾಂಗ್ಲಾ ತಂಡದ ವಿರುದ್ಧ ಪ್ರತಿಭಟನೆ

ವಾಸ್ತವವಾಗಿ, ಈ ಹೆಚ್ಚುವರಿ ಭದ್ರತೆಗೆ ಪ್ರಮುಖ ಕಾರಣವೆಂದರೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತಕ್ಕೆ ಬಂದಿರುವುದು. ವಾಸ್ತವವಾಗಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಬಾಂಗ್ಲಾದೇಶಿ ಹಿಂದೂಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಅಲ್ಲದೆ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ ಎಂದು ವರದಿಯಾಗಿತ್ತು. ಹೀಗಾಗಿ ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿರುವ ಭಾರತದ ಹಲವು ಹಿಂದೂ ಸಂಘಟನೆಗಳು ಬಾಂಗ್ಲಾದೇಶ ತಂಡವನ್ನು ಭಾರತಕ್ಕೆ ಕರೆಸುವುದನ್ನು ವಿರೋಧಿಸಿದ್ದವು. ಅಲ್ಲದೆ ಕೆಲ ಸಂಘಟನೆಗಳು ಪಂದ್ಯ ನಡೆಯದಂತೆ ತಡೆಯುವುದಾಗಿ ಬೆದರಿಕೆ ಹಾಕಿದ್ದವು.

ರಸ್ತೆಗಿಳಿದ ಹಿಂದೂ ಮಹಾಸಭಾ

ಅದೇ ರೀತಿ ಕಾನ್ಪುರದಲ್ಲಿ ಟೆಸ್ಟ್ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡದ ವಿರುದ್ಧ ಅಖಿಲ ಭಾರತೀಯ ಹಿಂದೂ ಮಹಾಸಭಾವು ಗ್ರೀನ್ ಪಾರ್ಕ್ ಕ್ರೀಡಾಂಗಣದ ಮುಂಭಾಗದಲ್ಲಿಯೇ ರಸ್ತೆ ತಡೆದು ಹವನ ನಡೆಸಿತ್ತು. ಇದೀಗ ಕಾನ್ಪುರ ಪೊಲೀಸರು ಈ ಪ್ರಕರಣದಲ್ಲಿ 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 10 ಮಂದಿ ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Wed, 25 September 24