IND vs BAN: ಹಾರ್ದಿಕ್ ಪಾಂಡ್ಯರನ್ನು ಹಾಡಿ ಹೊಗಳಿದ ರೋಹಿತ್ ಶರ್ಮಾ

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಅಮೋಘ ಗೆಲುವು ದಾಖಲಿಸಿದ್ದ ಭಾರತ ತಂಡವು ಇದೀಗ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿದಿದೆ. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಸೆಮಿಫೈನಲ್​ಗೇರುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

IND vs BAN: ಹಾರ್ದಿಕ್ ಪಾಂಡ್ಯರನ್ನು ಹಾಡಿ ಹೊಗಳಿದ ರೋಹಿತ್ ಶರ್ಮಾ
Rohit Sharma - Hardik Pandya

Updated on: Jun 23, 2024 | 7:33 AM

T20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ 2ನೇ ಪಂದ್ಯದಲ್ಲೂ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಅಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು.

ಮೊದಲ ವಿಕೆಟ್​ಗೆ 39 ರನ್​ಗಳನ್ನು ಕಲೆಹಾಕಿದ ಬಳಿಕ ರೋಹಿತ್ ಶರ್ಮಾ (23) ಔಟಾದರು. ಇನ್ನು ವಿರಾಟ್ ಕೊಹ್ಲಿ 37 ರನ್​ಗಳ ಕೊಡುಗೆ ನೀಡಿದರೆ, ರಿಷಭ್ ಪಂತ್ 36 ರನ್​ಗಳ ಕಾಣಿಕೆಯಿತ್ತರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ (6) ಬೇಗನೆ ನಿರ್ಗಮಿಸಿದರೂ, ಶಿವಂ ದುಬೆ 34 ರನ್ ಬಾರಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಅಜೇಯ ಅರ್ಧಶತಕ ಸಿಡಿಸಿದರು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 146 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 50 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಾವು ಇಂದಿನ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಆಡಿದ್ದೇವೆ. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಒಂದು ಯೋಜನೆಯನ್ನು ಪರಿಸ್ಥಿತಿಗೆ ತಕ್ಕಂತೆ ಕಾರ್ಯರೂಪಕ್ಕೆ ತರುವುದು ಮುಖ್ಯವಾಗುತ್ತದೆ. ಹೀಗಾಗಿ ನಮ್ಮ ತಂಡದ ಪ್ರದರ್ಶನ ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ.

ನನ್ನ ಪ್ರಕಾರ, ಟಿ20 ಕ್ರಿಕೆಟ್​ನಲ್ಲಿ ಎಲ್ಲಾ ಬ್ಯಾಟರ್​ಗಳು ಅರ್ಧಶತಕ ಗಳಿಸಬೇಕೆಂದಿಲ್ಲ. ಒಬ್ಬ ಬ್ಯಾಟರ್ ಅರ್ಧಶತಕ ಬಾರಿಸಿದರೂ ನಾವು 196 ರನ್​ಗಳಿಸಿದ್ದೇವೆ.​ ಹೀಗಾಗಿ ಇದೇ ಮಾದರಿಯಲ್ಲಿ ನಮ್ಮ ಆಟ ಮುಂದುವರೆಯಬೇಕೆಂದು ನಾನು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ನಮ್ಮ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಟಾಪ್- 5, 6 ಬ್ಯಾಟರ್​ಗಳ ಬಳಿಕ ಹಾರ್ದಿಕ್ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿರುವುದರಿಂದ ಅಂತಿಮ ಓವರ್​ಗಳ ಮೂಲಕ ದೊಡ್ಡ ಸ್ಕೋರ್​ಗಳಿಸುತ್ತಿದ್ದೇವೆ.

ಹಾರ್ದಿಕ್, ಹಾರ್ದಿಕ್ ಆಗಿರುವುದರಿಂದ ಅವರ ಸಾಮರ್ಥ್ಯ ಏನು ಎಂದು ನಮಗೆ ತಿಳಿದಿದೆ. ಅವರು ನಮಗೆ ಬಹಳ ಮುಖ್ಯವಾದ ಆಟಗಾರ. ಪಾಂಡ್ಯ ಇದೇ ಆಲ್​ರೌಂಡರ್​ ಆಟವನ್ನು ಮುಂದುವರಿಸಿದರೆ, ನಾವು ಮುಂದಿನ ಹಂತಕ್ಕೇರುವುದರಲ್ಲಿ ಅನುಮಾನವೇ ಇಲ್ಲ ಎಂದು ಟೀಮ್ ಇಂಡಿಯಾ ನಾಯಕ, ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನವನ್ನು ಹಾಡಿ ಹೊಗಳಿದರು.

ಇದನ್ನೂ ಓದಿ: Mitchell Starc: ಸ್ಟಾರ್ಕ್​ ಸ್ಪಾರ್ಕ್​: ಹೊಸ ವಿಶ್ವ ದಾಖಲೆ ಸೃಷ್ಟಿ

ಇನ್ನು ನಾವು ಬೌಲರ್​ಗಳೊಂದಿಗೆ ಚರ್ಚಿಸಿದ ರೀತಿಯಲ್ಲೇ ಪ್ರತಿಯೊಂದು ಕಾರ್ಯರೂಪಕ್ಕೆ ಬಂದಾಗ ಸಂತೋಷವಾಗುತ್ತದೆ. ನಮ್ಮ ಬೌಲರ್​ಗಳು ಸಹ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಇದೇ ರೀತಿಯಲ್ಲಿ ಟೀಮ್ ಇಂಡಿಯಾ ಸಾಂಘಿಕ ಪ್ರದರ್ಶನವನ್ನು ಮುಂದುವರೆಸಿದರೆ, ಭಾರತ ತಂಡವು ಮುಂದಿನ ಹಂತಕ್ಕೇರುವುದು ಸುಲಭವಾಗುತ್ತದೆ. ಹಾಗಾಗಿ ನಮ್ಮ ಆಟಗಾರರಿಂದ ಇಂತಹ ಪ್ರದರ್ಶನವನ್ನೇ ನಾನು ನಿರೀಕ್ಷಿಸುತ್ತಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.