ಏಷ್ಯಾಕಪ್ನಲ್ಲಿ (Asia Cup 2023) ಭಾರತದ ಗೆಲುವಿನ ನಾಗಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಪಾಕಿಸ್ತಾನ, ಶ್ರೀಲಂಕಾದಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಏಷ್ಯಾಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ, ಸೂಪರ್ 4 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ (India vs Bangladesh) ವಿರುದ್ಧ ಮುಗ್ಗರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ಟೀಂ ಇಂಡಿಯಾ (Team India) ಗೆಲುವಿಗೆ 266 ರನ್‌ಗಳ ಸವಾಲನ್ನು ನೀಡಿತ್ತು. ಈ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕ ನಿರಾಸೆ ಮೂಡಿಸಿತು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಶುಭ್ಮನ್ ಗಿಲ್ (Shubman Gill) ಶತಕ ಬಾರಿಸಿದರೆ, ಕೆಳಕ್ರಮಾಂಕದಲ್ಲಿ ಭಾರತದ ಗೆಲುವಿನ ಕನಸಿಗೆ ನೀರೆರೆದಿದ್ದ ಅಕ್ಷರ್ ಪಟೇಲ್ (Axar Patel) 42 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಈ ಇಬ್ಬರನ್ನು ಹೊರತುಪಡಿಸಿದರೆ ತಂಡದರ ಇತರ ಆಟಗಾರರಿಂದ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬರಲಿಲ್ಲ. ಹೀಗಾಗಿ ಟೀಂ ಇಂಡಿಯಾ 49.5 ಓವರ್‌ಗಳಲ್ಲಿ 259 ರನ್‌ಗಳಿಸಲಷ್ಟೇ ಶಕ್ತವಾಗಿ ಆಲೌಟ್ ಆಯಿತು.
ಏಷ್ಯಾಕಪ್‌ನಿಂದ ಈಗಾಗಲೇ ಹೊರಗುಳಿದಿರುವ ಬಾಂಗ್ಲಾದೇಶ ಈ ಪಂದ್ಯಕ್ಕೆ ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಫೈನಲ್ ತಲುಪಿದ್ದ ಟೀಂ ಇಂಡಿಯಾ ಕೂಡ ತಂಡದಲ್ಲಿ 5 ಬದಲಾವಣೆ ಮಾಡಿತ್ತು. ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ನೀಡಿದರೆ, ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮತ್ತೊಂದೆಡೆ, ತಂಜಿಮ್ ಹಸನ್ ಸಾಕಿಬ್ ಕೂಡ ಬಾಂಗ್ಲಾದೇಶ ಪರ ಪದಾರ್ಪಣೆ ಮಾಡಿದರು. ಈ ಪೈಕಿ, 20 ವರ್ಷದ ಬಾಂಗ್ಲಾದೇಶದ ಬೌಲರ್ ತಂಜಿಮ್ ಹಸನ್ ಮೊದಲು ಬ್ಯಾಟ್ ಮತ್ತು ನಂತರ ಚೆಂಡಿನೊಂದಿಗೆ ಗಮನಾರ್ಹ ಪ್ರದರ್ಶನ ನೀಡಿದರು.
ಏಷ್ಯಾಕಪ್‌ನಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್; ಭಾರತಕ್ಕೆ ಲಾಭ..!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪರ ತಂಡದ ನಾಯಕ ಶಕೀಬ್ ಅಲ್ ಹಸನ್ ಮತ್ತು ತೌಹೀದ್ ಹೃದಯ್ ತಂಡದ ಪರ ತಲಾ ಅರ್ಧಶತಕ ಸಿಡಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಬ್ಬರ ಇನ್ನಿಂಗ್ಸ್ ಮತ್ತು ಜೊತೆಯಾಟವನ್ನು ಹೊರತುಪಡಿಸಿದರೆ, ಉಳಿದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಕೂಡ ನಿರಾಸೆ ಮೂಡಿಸಿದರು. ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಬಾಂಗ್ಲಾದೇಶದ ಅಗ್ರ ಕ್ರಮಾಂಕವನ್ನು ಅಗ್ಗವಾಗಿ ವಜಾಗೊಳಿಸಿದ್ದರು. ಹೀಗಾಗಿ ಸ್ಕೋರ್ 59 ರನ್ ಆಗುವಷ್ಟರಲ್ಲೇ 14 ಓವರ್‌ಗಳಲ್ಲಿ ಬಾಂಗ್ಲಾ ತಂಡದ 4 ವಿಕೆಟ್‌ಗಳು ಬಿದ್ದವು.
ಇಲ್ಲಿಂದ ಭಾರತದ ಸ್ಪಿನ್ನರ್ಗಳ ಮೇಲೆ ದಾಳಿ ನಡೆಸಿದ ನಾಯಕ ಶಕೀಬ್ ಅರ್ಧಶತಕ ಸಿಡಿಸಿ ಮಿಂಚಿದರು. ಯಂಗ್ ಬ್ಯಾಟ್ಸ್‌ಮನ್ ಹೃದಯ್ ಕೂಡ ಆಕ್ರಮಣಕಾರಿ ಮನೋಭಾವವನ್ನು ಅಳವಡಿಸಿಕೊಂಡರು. ಹೀಗಾಗಿ ಐದನೇ ವಿಕೆಟ್‌ಗೆ ಇಬ್ಬರ ನಡುವೆ 101 ರನ್‌ಗಳ ಜೊತೆಯಾಟ ಕೂಡ ಕಂಡುಬಂತು. ಇದಾದ ಬಳಿಕ ಕೆಳ ಕ್ರಮಾಂಕದಲ್ಲಿ ನಸುಮ್ ಅಹ್ಮದ್, ಮೆಹದಿ ಹಸನ್ ಮತ್ತು ತಂಝೀಮ್ ಒಟ್ಟಾಗಿ 87 ರನ್ ಸೇರಿಸಿದರು. ಇದರ ಆಧಾರದ ಮೇಲೆ ಬಾಂಗ್ಲಾದೇಶ 8 ವಿಕೆಟ್‌ಗೆ 265 ರನ್ ಕಲೆಹಾಕಿತು.
ಇನ್ನು ಈ ಸಾಧಾರಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೂ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಎರಡನೇ ಎಸೆತದಲ್ಲಿ ಕವರ್‌ನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಓವರ್‌ನಲ್ಲಿ ಮೊದಲ ಏಕದಿನ ಪಂದ್ಯವನ್ನಾಡುತ್ತಿರುವ ತಿಲಕ್ ವರ್ಮಾ ಅವರನ್ನು ಬೌಲ್ಡ್ ಮಾಡುವ ಮೂಲಕ ತಂಜೀಮ್ ಭಾರತಕ್ಕೆ ಎರಡನೇ ಹೊಡೆತ ನೀಡಿದರು. ಕೆಎಲ್ ರಾಹುಲ್ ಮತ್ತು ಗಿಲ್ ಅರ್ಧಶತಕದ ಜೊತೆಯಾಟವಾಡಿದರು. ಆದರೆ ರನ್ ರೇಟ್ ಹೆಚ್ಚಿಸುವ ಯತ್ನದಲ್ಲಿ ರಾಹುಲ್ ಪೆವಿಲಿಯನ್ಗೆ ಮರಳಿದರು. ಇಶಾನ್ ಕಿಶನ್ ಕೂಡ 5 ರನ್‌ಗಳಿಗೆ ಸುಸ್ತಾದರು. ಹೀಗಾಗಿ 24ನೇ ಓವರ್ ಆಗುವಷ್ಟರಲ್ಲಿ ಭಾರತ ಕೇವಲ 94 ರನ್ ಕಲೆಹಾಕಿ 4 ವಿಕೆಟ್ ಕಳೆದುಕೊಂಡಿತು.
ಇದೇ ವೇಳೆ ಗಿಲ್ ಅರ್ಧಶತಕ ಪೂರೈಸಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಏಕದಿನದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ಉತ್ತಮ ಅವಕಾಶ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಸೂರ್ಯ ಕೆಲವು ಉತ್ತಮ ಶಾಟ್ ಆಡುವ ಮೂಲಕ ಬೌಂಡರಿಗಳನ್ನು ಕಲೆಹಾಕಿದರಾದರೂ ಅಗತ್ಯಕ್ಕಿಂತ ಹೆಚ್ಚು ಸ್ವೀಪ್ ಶಾಟ್ ಆಡಲು ಪ್ರಯತ್ನದಲ್ಲಿ ಶಕೀಬ್ ಅಲ್ ಹಸನ್ ಎಸೆತದಲ್ಲಿ ಬೌಲ್ಡ್ ಆದರು. ಇಲ್ಲಿ ಗಿಲ್ ನಿರಂತರವಾಗಿ ರನ್ ಗಳಿಸುತ್ತಿದ್ದರೆ, ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದವು. ರವೀಂದ್ರ ಜಡೇಜಾ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ತಂಡದ 6 ವಿಕೆಟ್‌ಗಳು 170 ರನ್‌ಗಳಿಗೆ ಬಿದ್ದವು, ಆದರೆ ಗಿಲ್ ಏಕಾಂಗಿ ಹೋರಾಟ ಮುಂದುವರೆಸಿ ಏಕದಿನದಲ್ಲಿ ಐದನೇ ಶತಕ ಪೂರೈಸಿದರು.
ಶತಕ ಪೂರೈಸಿದ ಗಿಲ್ ಕೂಡ ರನ್ ವೇಗ ಹೆಚ್ಚಿಸಿ ಬಾಂಗ್ಲಾದೇಶವನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದರು. ಅಕ್ಷರ್ ಪಟೇಲ್ ಕೂಡ ಗಿಲ್ಗೆ ಸಾಥ್ ನೀಡಿದ್ದರಿಂದ ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಮಹೇದಿ ಹಸನ್ 44ನೇ ಓವರ್‌ನಲ್ಲಿ ಗಿಲ್ ವಿಕೆಟ್ ಪಡೆಯುವ ಮೂಲಕ ಬಿಗ್ ಶಾಕ್ ನೀಡಿದರು. ಅಕ್ಷರ್ ಪಟೇಲ್ ಕೆಲವು ಅತ್ಯುತ್ತಮ ಹೊಡೆತಗಳನ್ನು ಬಾರಿಸಿ 49ನೇ ಓವರ್ವರೆಗೆ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಆದರೆ 49ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಅಕ್ಷರ್ ವಿಕೆಟ್ ಕಬಳಿಸುವ ಮೂಲಕ ಮುಸ್ತಫಿಜುರ್ ರೆಹಮಾನ್ ಟೀಂ ಇಂಡಿಯಾದ ಸೋಲನ್ನು ಖಚಿತಪಡಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ