ಕಿವೀಸ್ ಪ್ರವಾಸದ ಬಳಿಕ ಇದೀಗ ಏಕದಿನ ಹಾಗೂ ಟೆಸ್ಟ್ ಸರಣಿಗಳಿಗಾಗಿ ಬಾಂಗ್ಲಾದೇಶಕ್ಕೆ (India vs Bangladesh) ಕಾಲಿಟ್ಟಿರುವ ರೋಹಿತ್ ಬಳಗ ಭಾನುವಾರದಂದು ನಡೆಯುವ ಮೊದಲ ಏಕದಿನ ಪಂದ್ಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆರಂಭಿಸಲಿದೆ. ಟಿ20 ವಿಶ್ವಕಪ್ (T20 World Cup) ಬಳಿಕ ವಿಶ್ರಾಂತಿ ಪಡೆದಿದ್ದ ಹಲವು ಹಿರಿಯ ತಲೆಗಳು ಈ ಸರಣಿ ಮೂಲಕ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲಿವೆ. ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (Rohit Sharma, Virat Kohli and KL Rahul) ಅವರಂತಹ ಹಿರಿಯ ಆಟಗಾರರು ತಂಡಕ್ಕೆ ಮರಳಿದ್ದು, ಈಗಾಗಲೇ ಪ್ರಕಟಗೊಂಡಿರುವ ತಂಡದಲ್ಲಿ ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ.
ಬ್ಯಾಟಿಂಗ್ ವಿಭಾಗ
2022 ರ ಟಿ20 ವಿಶ್ವಕಪ್‌ನಿಂದ ಬರಿಗೈಯಲ್ಲಿ ವಾಪಸ್ಸಾದ ಬಳಿಕ ನಾಯಕನಾಗಿ ರೋಹಿತ್ ಶರ್ಮಾ ಅವರ ಮೊದಲ ಸರಣಿ ಇದಾಗಿದೆ. ಹೀಗಾಗಿ ರೋಹಿತ್ ವಾಪಸಾತಿಯೊಂದಿಗೆ ಅವರು ಶಿಖರ್ ಧವನ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ಸಾಧ್ಯತೆಯಿದೆ. ಎಂದಿನಂತೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗೆಯೇ ಉಪನಾಯಕ ಕೆಎಲ್ ರಾಹುಲ್ ನಾಲ್ಕನೆ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ನಂತರ 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ 6ನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಆಡುವ ಸಾಧ್ಯತೆಗಳಿವೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಬ್ಯಾಟ್ ಭರ್ಜರಿಯಾಗಿ ಸದ್ದು ಮಾಡಿತ್ತು. ಹೀಗಾಗಿ ಈ ಸರಣಿಯಲ್ಲೂ ಅವರು ಅದೇ ಫಾರ್ಮ್ ಮುಂದುವರೆಸಲು ಪ್ರಯತ್ನಿಸಲಿದ್ದಾರೆ. ಇತ್ತ ಬಹಳ ದಿನಗಳಿಂದ ಮೌನವಾಗಿರುವ ಪಂತ್ ಬ್ಯಾಟ್ ಈ ಸರಣಿಯಲ್ಲಾದರೂ ಘರ್ಜಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಳೆ ಪಂತ್ ಈ ಸರಣಿಯಲ್ಲೂ ಉತ್ತಮವಾಗಿ ಆಡದಿದ್ದರೆ ಟೀಂ ಇಂಡಿಯಾದಲ್ಲಿ ಅವರ ಸ್ಥಾನಕ್ಕೆ ಕುತ್ತು ಬರುವುದಂತೂ ಖಚಿತ.
ಇದನ್ನೂ ಓದಿ: IND vs BAN: ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ತಂಡಕ್ಕೆ ಎಂಟ್ರಿಕೊಟ್ಟ ‘‘ಜಮ್ಮು ಎಕ್ಸ್ಪ್ರೆಸ್’’..!
ಆಲ್ರೌಂಡರ್ ಕೋಟಾ
ಬೌಲಿಂಗ್ ಆಲ್ರೌಂಡರ್ ಕೋಟಾದಲ್ಲಿ ಕಿವೀಸ್ ವಿರುದ್ಧ ಬ್ಯಾಟಿಂಗ್ನಲ್ಲಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆಯಲ್ಲಿದ್ದಾರೆ. ಅಲ್ಲದೆ ಬಾಂಗ್ಲಾದೇಶದ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುವುದರಿಂದ ಟೀಂ ಇಂಡಿಯಾ ಇಬ್ಬರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇರುವುದರಿಂದ ಅಕ್ಷರ್ ಪಟೇಲ್ ಕೂಡ 8ನೇ ಕ್ರಮಾಂಕಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
ಬೌಲಿಂಗ್ ವಿಭಾಗ
ಇನ್ನುಳಿದಂತೆ ಆಡುವ ಹನ್ನೊಂದರ ಬಳಗದಲ್ಲಿ ಉಳಿದ ಮೂರು ಸ್ಥಾನಗಳನ್ನು ವೇಗಿಗಳು ಆಕ್ರಮಿಸಿಕೊಳ್ಳಲಿದ್ದಾರೆ. ಈಗಾಗಲೇ ಮೊಹಮ್ಮದ್ ಶಮಿ ಭುಜದ ಗಾಯದಿಂದ ಹೊರಗುಳಿದಿರುವುದರಿಂದ ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ವೇಗಿಗಳಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ದೀಪಕ್ ಚಾಹರ್ ಹಾಗೂ ಶಾರ್ದೂಲ್ ಠಾಕೂರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡುವ ಸಾಮಥ್ರ್ಯ ಹೊಂದಿರುವುದರಿಂದ ಭಾರತದ ಬ್ಯಾಟಿಂಗ್ ವಿಭಾಗವೂ ಬಲಿಷ್ಠಗೊಳಲ್ಲಿದೆ. ಸಿರಾಜ್ ಮತ್ತು ಚಹಾರ್ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಲ್ಲಿದ್ದು, ಶಾರ್ದೂಲ್ ಅವರನ್ನು ಮಧ್ಯಮ ಓವರ್‌ಗಳಲ್ಲಿ ಮತ್ತು ಮೂರನೇ ವೇಗದ ಆಯ್ಕೆಯಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಹೀಗಿರಬಹುದು
ಆರಂಭಿಕರು: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್
ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್
ಕೆಳಮಧ್ಯಮ ಕ್ರಮಾಂಕ: ರಿಷಭ್ ಪಂತ್(ವಿಕೆಟ್ ಕೀಪರ್)
ಆಲ್ ರೌಂಡರ್ಸ್: ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್
ವೇಗಿಗಳು: ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Sat, 3 December 22