ಬಾಂಗ್ಲಾದೇಶ ಪ್ರವಾಸವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿರುವ ಟೀಂ ಇಂಡಿಯಾ (India Vs Bangladesh) ಸಿಹಿ- ಕಹಿಯೊಂದಿಗೆ ತವರಿಗೆ ವಾಪಸ್ಸಾಗುತ್ತಿದೆ. ಈ ಹಿಂದೆ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ (Team India) ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯರನ್ನು 2-0 ಅಂತರದಲ್ಲಿ ಸೋಲಿಸಿದ ಭಾರತ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು. ಆದರೆ ಎರಡನೇ ಟೆಸ್ಟ್ ಗೆಲ್ಲಲು ಶತಪ್ರಯತ್ನ ಮಾಡಿದ ಬಾಂಗ್ಲಾದೇಶ ತನ್ನ ಆಟದ ಮೂಲಕ ಎಲ್ಲರನ್ನೂ ಆಕರ್ಷಿಸಿತ್ತು. ಅದರಲ್ಲೂ ಇಡೀ ಪ್ರವಾಸದಲ್ಲಿ ಬಾಂಗ್ಲಾ ಪರ ಮಿಂಚಿದ ಮೆಹದಿ ಹಸನ್ ಮಿರಾಜ್ (Mehdi Hasan Miraj), ಬಾಂಗ್ಲಾದೇಶ ಏಕದಿನ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕಾಗಿ ಮೀರಜ್, ವಿರಾಟ್ ಕೊಹ್ಲಿಯಿಂದ (Virat Kohli) ವಿಶೇಷ ಉಡುಗೊರೆಯನ್ನೂ ಸಹ ಪಡೆದಿದ್ದಾರೆ.
ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೀರಜ್, ನಂತರ ಟೆಸ್ಟ್ ಸರಣಿಯಲ್ಲೂ ಆ ಪ್ರದರ್ಶನವನ್ನು ಮುಂದುವರೆಸಿದರು. ಅದರಲ್ಲೂ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಪ್ರಮುಖ 5 ವಿಕೆಟ್‌ಗಳನ್ನು ಉರುಳಿಸಿದ ಮೀರಜ್ ತಂಡವನ್ನು ಗೆಲುವಿನ ಸನಿಹಕ್ಕೂ ತಂದರು. ಆದರೆ ಮೀರಾಜ್ ಹೋರಾಟಕ್ಕೆ ಫುಲ್ಸ್ಟಾಪ್ ಇಡುವುದರೊಂದಿಗೆ ಅಶ್ವಿನ್ ಹಾಗೂ ಅಯ್ಯರ್ ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದರು.
IND vs BAN: ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಡಬ್ಲ್ಯುಟಿಸಿ ಫೈನಲ್ ಆಡಲು ಇನ್ನೇಷ್ಟು ಪಂದ್ಯ ಗೆಲ್ಲಬೇಕು?
ಬಾಂಗ್ಲಾ ಪರ ಏಕದಿನ ಹಾಗೂ ಟೆಸ್ಟ್ ಸರಣಿ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಮೀರಜ್ ಆಟಕ್ಕೆ ಮನಸೋತ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಉಡುಗೊರೆ ನೀಡಿ ಪ್ರೋತ್ಸಾಹಿಸಿದ್ದಾರೆ. ಮೀರ್‌ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಂತರ ವಿರಾಟ್ ತಮ್ಮ ಜೆರ್ಸಿಯನ್ನು ಮೀರಜ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಏಕದಿನ ಜರ್ಸಿಯನ್ನು ಮೀರಜ್‌ಗೆ ನೀಡಿರುವ ವಿರಾಟ್, ಅದರ ಮೇಲೆ ತನ್ನ ಸಹಿ ಕೂಡ ಹಾಕಿದ್ದಾರೆ.
Kohli gifted his signed jersey to Mehidy – nice gesture from King. pic.twitter.com/z8hbBtBiEq
— Johns. (@CricCrazyJohns) December 25, 2022
ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಅವರನ್ನು ಔಟ್ ಮಾಡಿ ಬಾಂಗ್ಲಾದೇಶವನ್ನು ಮತ್ತೆ ಮರಳಿ ಗೆಲುವಿನ ಹಾದಿಗೆ ತರುವಲ್ಲಿ ಮಿರಾಜ್ ನೆರವಾಗಿದ್ದರು. ಅಲ್ಲದೆ ಈ ಸಂಪೂರ್ಣ ಸರಣಿಯಲ್ಲಿ ಮಿರಾಜ್ ತನ್ನ ಆಫ್ ಸ್ಪಿನ್‌ನಿಂದ ಭಾರತಕ್ಕೆ ಸಾಕಷ್ಟು ತೊಂದರೆ ನೀಡಿದ್ದರು. ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೀರಜ್ ಒಟ್ಟು 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಏಕದಿನ ಸರಣಿಯಲ್ಲಿ ಶತಕ
ಟೆಸ್ಟ್ ಸರಣಿಗೂ ಮುನ್ನ ಮೀರಜ್ ಏಕದಿನ ಸರಣಿಯಲ್ಲೂ ಅದ್ಭುತ ಸಾಧನೆ ಮಾಡಿದ್ದರು. ಅವರು ಎರಡನೇ ಏಕದಿನ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಅದ್ಭುತ ಶತಕ ಬಾರಿಸಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಮೊದಲ ಶತಕವೂ ಆಗಿತ್ತು. ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಪರ 9ನೇ ವಿಕೆಟ್ಗೆ ದಾಖಲೆಯ ಜೊತೆಯಾಟವಾಡಿ ಭಾರತಕ್ಕೆ ಸೋಲಿನ ಶಾಕ್ ನೀಡಿದ್ದರು. ಹಾಗೆಯೇ ಮೂರನೇ ಏಕದಿನ ಪಂದ್ಯದಲ್ಲೂ 38 ರನ್‌ಗಳ ಇನ್ನಿಂಗ್ಸ್ ಕೂಡ ಆಡಿದರು. ಒಟ್ಟು ಮೂರು ಏಕದಿನ ಪಂದ್ಯಗಳಲ್ಲಿ 141 ರನ್ ಗಳಿಸಿದ ಹಸನ್, ಈ ಮೂಲಕ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Sun, 25 December 22