IND vs BAN: ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಡಬ್ಲ್ಯುಟಿಸಿ ಫೈನಲ್ ಆಡಲು ಇನ್ನೇಷ್ಟು ಪಂದ್ಯ ಗೆಲ್ಲಬೇಕು?
IND vs BAN: ಎರಡನೇ ಟೆಸ್ಟ್ನಲ್ಲಿ ಬಾಂಗ್ಲಾದೇಶ ನೀಡಿದ 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಜೊತೆಯಾಟದ ನೆರವಿನಿಂದ ಮೂರು ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ (India Vs Bangladesh) ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದೆ. ಮೊದಲನೆಯದ್ದು, ಈ ಹಿಂದೆ ನಡೆದ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ಆ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಎರಡನೇಯದಾಗಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ICC World Test Championship) ಫೈನಲ್ಗೆ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಎರಡನೇ ಟೆಸ್ಟ್ನಲ್ಲಿ ಬಾಂಗ್ಲಾದೇಶ ನೀಡಿದ 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ (Team India) ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ (Shreyas Iyer and R Ashwin) ಅವರ ಜೊತೆಯಾಟದ ನೆರವಿನಿಂದ ಮೂರು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಈ ಸರಣಿಯಲ್ಲಿನ ಒಂದೇ ಒಂದು ಸೋಲು ಭಾರತದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ ಅನ್ನು ಮತ್ತಷ್ಟು ಕಠಿಣಗೊಳಿಸುತ್ತಿತ್ತು. ಅಲ್ಲದೆ ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಅವರ ಇಂಜುರಿಯಿಂದಾಗಿ ಆಘಾತಕ್ಕೊಳಗಾಗಿತ್ತು. ಇವರಲ್ಲಿ ಪಾಂಡ್ಯ ಹೊರತುಪಡಿಸಿ ಉಳಿದವರೆಲ್ಲ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಗೆ ಗೆಲುವು ಸುಲಭವಾಗಿರಲಿಲ್ಲ. ಆದರೆ, ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ, ಬಾಂಗ್ಲಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದೆ.
IND vs BAN: 6,2,4,4..! ಒಂದೇ ಓವರ್ನಲ್ಲಿ ಬಾಂಗ್ಲಾ ಬೌಲರ್ನ ಹುಟ್ಟಡಗಿಸಿದ ಅಶ್ವಿನ್
ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಭಾರತ
ಈ ಗೆಲುವಿನ ನಂತರ ಡಬ್ಲ್ಯುಟಿಸಿಯ ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಈ ವರ್ಷ ಟೀಂ ಇಂಡಿಯಾ ಆಡಿರುವ 14 ಪಂದ್ಯಗಳಲ್ಲಿ ಎಂಟು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ 99 ಅಂಕಗಳನ್ನು ಹೊಂದಿದೆ ಮತ್ತು ಶೇಕಡ 58.93 ಗೆಲುವಿನ ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 13 ಪಂದ್ಯಗಳಲ್ಲಿ ಒಂಬತ್ತು ಗೆಲುವು ಮತ್ತು ಒಂದು ಸೋಲಿನೊಂದಿಗೆ 120 ಅಂಕಗಳನ್ನು ಪಡೆದುಕೊಂಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಹಾಗೆಯೇ ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಐದು ಸೋಲುಗಳೊಂದಿಗೆ 72 ಅಂಕ ಪಡೆದಿದ್ದು, ಮೂರನೇ ಸ್ಥಾನದಲ್ಲಿದೆ.
ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, ಆಡಿರುವ 10 ಪಂದ್ಯಗಳಲ್ಲಿ ಐದು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ 64 ಅಂಕಗಳನ್ನು ಹೊಂದಿದೆ. ಐದನೇ ಸ್ಥಾನದಲ್ಲಿರುವ ಇಂಗ್ಲೆಂಡ್ 22 ಪಂದ್ಯಗಳಲ್ಲಿ 10 ಗೆಲುವು ಮತ್ತು ಎಂಟು ಸೋಲುಗಳೊಂದಿಗೆ 124 ಅಂಕಗಳನ್ನು ಸಂಪಾದಿಸಿದೆ.
ಟೀಂ ಇಂಡಿಯಾ ಫೈನಲ್‌ನಲ್ಲಿ ಆಡುತ್ತಾ?
ಈ ಗೆಲುವಿನ ನಂತರ ಟೀಂ ಇಂಡಿಯಾ ಐಸಿಸಿ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡುತ್ತಾ ಅಥವಾ ಇಲ್ಲವಾ ಎಂಬುದು ಈಗ ಪ್ರಶ್ನೆಯಾಗಿದೆ. ಬಾಂಗ್ಲಾದೇಶದೊಂದಿಗಿನ ಪ್ರಸಕ್ತ ಸರಣಿಯನ್ನು ಗೆದ್ದ ನಂತರ, ಭಾರತವು ಫೈನಲ್‌ನಲ್ಲಿ ಆಡುವ ಅವಕಾಶವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಫೈನಲ್ಗೆ ತನ್ನ ಸ್ಥಾನವನ್ನು ಬಹುತೇಕ ದೃಢಪಡಿಸಿಕೊಂಡಿದೆ. ಆದರೆ ಭಾರತ ಎರಡನೇ ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸುತ್ತಿದೆ. ಹೀಗಾಗಿ ಭಾರತ, ಆಸ್ಟ್ರೇಲಿಯಾ ಎದುರು ತವರಿನಲ್ಲಿ ನಡೆಯಲ್ಲಿರುವ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕಾಗಿದೆ. ಈ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದಲ್ಲಿ ಗೆದ್ದರೆ ಫೈನಲ್ ಆಡುವುದು ಖಚಿತವಾಗಲಿದೆ.
ಅಥವಾ ಈ ಸರಣಿಯನ್ನು ಟೀಂ ಇಂಡಿಯಾ 3-0 ಅಥವಾ 3-1 ಅಂತರದಲ್ಲಿ ಗೆದ್ದರೂ ಫೈನಲ್ಗೆ ಖಚಿತವಾಗಿ ಎಂಟ್ರಿಕೊಡಲಿದೆ. ಆದರೆ ಇದನ್ನು ಹೊರತುಪಡಿಸಿ, ಸರಣಿ ಡ್ರಾದಲ್ಲಿ ಅಂತ್ಯಗೊಂಡರೆ ಅಥವಾ ಭಾರತ ಸರಣಿ ಸೋತರೆ ಫೈನಲ್ಗೇರುವುದು ಅನುಮಾನ. ಇತ್ತ ಭಾರತಕ್ಕೆ ಸ್ಪರ್ಧಿಯಾಗಿರುವ ದಕ್ಷಿಣ ಆಫ್ರಿಕಾ ಕೂಡ ಇನ್ನುಳಿದಿರುವ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ