ಭಾರತ ತಂಡ (Team India) ಕಳೆದ ತಿಂಗಳಿನಿಂದ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಕಳೆದ ವರ್ಷ ಜುಲೈ 1 ರಿಂದ ಮುಂದೂಡಲ್ಪಟ್ಟಿದ್ದ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಹಿಡಿತ ಸಾಧಿಸಿತ್ತು. ಆದರೆ ಕೊನೆಯಲ್ಲಿ ಇಂಗ್ಲೆಂಡ್ ಜಯಭೇರಿ ಬಾರಿಸಿತು. ಇದಾದ ಬಳಿಕ ಭಾರತ ಟಿ20 ಸರಣಿಯನ್ನು ಗೆದ್ದುಕೊಂಡಿತು. ಭಾರತ ಏಕದಿನ ಪಂದ್ಯದಲ್ಲೂ ಮೊದಲ ಪಂದ್ಯ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಿರುಗೇಟು ನೀಡಿ ಗೆದ್ದಿತು. ಭಾರತ ಪಂದ್ಯಗಳನ್ನು ಗೆದ್ದಿದೆ, ಕೆಲವು ಪಂದ್ಯಗಳಲ್ಲಿ ಸೋತಿದೆ ಆದರೆ ಫೀಲ್ಡರ್‌ಗಳ ವೈಫಲ್ಯವು ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಪ್ರತಿ ಪಂದ್ಯದಲ್ಲೂ ಕ್ಯಾಚ್‌ಗಳನ್ನು ಕೈಬಿಡಲಾಗುತ್ತಿದೆ
ಟೆಸ್ಟ್ ಪಂದ್ಯದಿಂದ ಆರಂಭಿಸೋಣ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಜೀವದಾನ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಜಾನಿ ಬೈರ್‌ಸ್ಟೋ ಅವರ ಎರಡು ಕ್ಯಾಚ್‌ಗಳನ್ನು ಕೈಬಿಡಲಾಯಿತು. ಇದರ ಪರಿಣಾಮ ಬೈರ್‌ಸ್ಟೋ ಅವರ ಬಿರುಸಿನ ಶತಕವು ಇಂಗ್ಲೆಂಡ್‌ಗೆ ಜಯ ತಂದುಕೊಟ್ಟಿತು. ಅವರ ಕ್ಯಾಚ್‌ಗಳನ್ನು ಹಿಡಿದಿದ್ದರೆ, ಫಲಿತಾಂಶವು ವಿಭಿನ್ನವಾಗಿರಬಹುದಾಗಿತ್ತು. ಮೊದಲ ಟಿ20 ಪಂದ್ಯದಲ್ಲಿ ಇದು ಅತಿಯಾಗಿತ್ತು. ಭಾರತದ ಫೀಲ್ಡರ್‌ಗಳು 6 ಕ್ಯಾಚ್‌ಗಳನ್ನು ಕೈಬಿಟ್ಟರು. ಇದರಲ್ಲಿ ಮೂರು ಕ್ಯಾಚ್‌ಗಳು ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಕೈಯಿಂದ ತಪ್ಪಿಸಿಕೊಂಡವು. ಭಾರತದ ಈ ಆಟಗಾರ ಎರಡನೇ ಟಿ20ಯಲ್ಲಿ ಒಂದು ಕ್ಯಾಚ್ ಮತ್ತು ಮೂರನೇ ಟಿ20ಯಲ್ಲಿ ಎರಡು ಕ್ಯಾಚ್‌ಗಳನ್ನು ಕೈಬಿಟ್ಟರು.
ಏಕದಿನ ಪಂದ್ಯದಲ್ಲೂ ಅದೇ ಪರಿಸ್ಥಿತಿ
ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ 110 ರನ್‌ಗಳಿಗೆ ಆಲೌಟ್ ಮಾಡಿತ್ತು. ಇದರಲ್ಲೂ ಆಟಗಾರರು ಕ್ಯಾಚ್ ಮಿಸ್ ಮಾಡಿಕೊಂಡರು. ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಮೊಯಿನ್ ಅಲಿಗೆ ಜೀವದಾನ ನೀಡಿದರು. ಎರಡನೇ ಏಕದಿನ ಪಂದ್ಯದಲ್ಲೂ ಇದೇ ಪರಿಸ್ಥಿತಿ ಇತ್ತು. ಇಂಗ್ಲೆಂಡ್ 148 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ನಂತರ ಡೇವಿಡ್ ವಿಲ್ಲಿ ಕ್ರೀಸ್‌ಗೆ ಬಂದು ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಇದಕ್ಕೂ ಮುನ್ನ ಅವರು ಪ್ರಸಿದ್ಧ್ ಕೃಷ್ಣಗೆ ಸುಲಭ ಕ್ಯಾಚ್ ನೀಡಿದ್ದರು. ಆದರೆ ಕೃಷ್ಣ ಈ ಕ್ಯಾಚ್ ತೆಗೆದುಕೊಳ್ಳುವಲ್ಲಿ ವಿಫಲರಾದರು. ಬಳಿಕ ವಿಲ್ಲಿ 49 ಎಸೆತಗಳಲ್ಲಿ 41 ರನ್ ಗಳಿಸಿ ತಂಡವನ್ನು 246 ರನ್‌ಗಳಿಗೆ ಕೊಂಡೊಯ್ದರು.
ಆಟಗಾರರು ಯಾವಾಗ ಬುದ್ದಿ ಕಲಿಯುತ್ತಾರೆ?
ಇಂಗ್ಲೆಂಡ್ ಪ್ರವಾಸದ 6 ಪಂದ್ಯಗಳಲ್ಲಿ ಭಾರತದ ಆಟಗಾರರು ಇದುವರೆಗೆ ಒಟ್ಟು 17 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಎರಡು ಪಂದ್ಯಗಳಲ್ಲಿ ಕ್ಯಾಚ್ ಪಡೆಯದ ಕಾರಣ ತಂಡ ಹೀನಾಯ ಸೋಲು ಎದುರಿಸಬೇಕಾಯಿತು. ಈ ವರ್ಷ ಏಷ್ಯಾ ಕಪ್ ನಡೆಯಲ್ಲಿದ್ದು, ಆ ಬಳಿಕ ವಿಶ್ವಕಪ್ ಪಂದ್ಯಾವಳಿ ಕೂಡ ನಡೆಯಲಿದೆ. ಹೀಗಾಗಿ ಆಟಗಾರರು ಒಂದರ ಹಿಂದೆ ಒಂದು ಕ್ಯಾಚ್ ಬಿಡುತ್ತಿರುವ ರೀತಿಯನ್ನು ನೋಡಿದರೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ. ಜೊತೆಗೆ ಇದು ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ತಲೆನೋವನ್ನು ಹೆಚ್ಚಿಸಿದೆ. ಭಾರತವನ್ನು ಇದೀಗ ಅತ್ಯುತ್ತಮ ಫೀಲ್ಡಿಂಗ್ ತಂಡವೆಂದು ಪರಿಗಣಿಸಲಾಗಿದೆ. ರವೀಂದ್ರ ಜಡೇಜಾ ಅವರಂತಹ ವಿಶ್ವದ ಅತ್ಯುತ್ತಮ ಫೀಲ್ಡರ್ರನ್ನು ತಂಡ ಹೊಂದಿದೆ. ಆದರೆ ಇತರ ಆಟಗಾರರಿಗೆ ಇನ್ನೂ ಸಾಕಷ್ಟು ಕೆಲಸಗಳಿವೆ.
2020 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸೋಲಿಗೆ, ಅವರು ಬಿಟ್ಟ ಕ್ಯಾಚ್‌ಗಳೇ ಕಾರಣವಾಯಿತು. ಮ್ಯಾಥ್ಯೂ ವೇಡ್ ಬಾರಿಸಿದ ಚೆಂಡನ್ನು ಹಸನ್ ಅಲಿ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ನಂತರ ವೇಡ್, ಸತತ ಮೂರು ಎಸೆತಗಳಲ್ಲಿ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.
Published On - 5:23 pm, Sat, 16 July 22