ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಒಂದು ಬದಲಾವಣೆ ಮಾಡಿಕೊಂಡಿದೆ. ತಂಡದ ಪ್ರಮುಖ ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ಮತ್ತೋರ್ವ ವೇಗಿ ಬ್ರೈಡನ್ ಕಾರ್ಸ್ಗೆ ಸ್ಥಾನ ನೀಡಲಾಗಿದೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 2 ಓವರ್ಗಳನ್ನು ಎಸೆದಿದ್ದ ಗಸ್ ಅಟ್ಕಿನ್ಸನ್ ಬರೋಬ್ಬರಿ 38 ರನ್ ನೀಡಿ ದುಬಾರಿಯಾಗಿದ್ದರು. ಹೀಗಾಗಿ ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಿಂದ ಅವರನ್ನು ಕೈ ಬಿಟ್ಟು, ಬ್ರೈಡನ್ ಕಾರ್ಸ್ ಅವರನ್ನು ಕಣಕ್ಕಿಳಿಸಲು ಇಂಗ್ಲೆಂಡ್ ನಿರ್ಧರಿಸಿದೆ.
29 ವರ್ಷದ ಬ್ರೈಡನ್ ಕಾರ್ಸ್ ಇಂಗ್ಲೆಂಡ್ ಪರ ಈವರೆಗೆ ಆಡಿರುವುದು ಕೇವಲ 4 ಟಿ20 ಪಂದ್ಯಗಳನ್ನು ಮಾತ್ರ. ಈ ವೇಳೆ 6 ವಿಕೆಟ್ ಕಬಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವಾಡಿದ್ದ ಕಾರ್ಸ್ 4 ಓವರ್ಗಳಲ್ಲಿ 26 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ಇದೀಗ ಭಾರತದಲ್ಲಿ ಚೊಚ್ಚಲ ಟಿ20 ಪಂದ್ಯವಾಡಲು ಬ್ರೈಡನ್ ಕಾರ್ಸ್ ಸಜ್ಜಾಗಿದ್ದಾರೆ. ಆದರೆ ಈ ಪಂದ್ಯ ನಡೆಯುತ್ತಿರುವುದು ಸ್ಪಿನ್ ಸ್ನೇಹಿ ಪಿಚ್ ಚೆನ್ನೈನ ಎಂಎ ಚಿದರಂಬರಂ ಸ್ಟೇಡಿಯಂನಲ್ಲಿ. ಹೀಗಾಗಿ ಬ್ರೈಡನ್ ಕಾರ್ಸ್ 2ನೇ ಟಿ20 ಪಂದ್ಯದಲ್ಲಿ ಮಿಂಚಲಿದ್ದಾರಾ ಎಂಬುದೇ ಪ್ರಶ್ನೆ.
ಇಂಗ್ಲೆಂಡ್ ತಂಡವು ಈ ಬಾರಿ ಪ್ಲೇಯಿಂಗ್ ಇಲೆವೆನ್ನಲ್ಲಿ ಜೇಮಿ ಸ್ಮಿತ್ ಅವರನ್ನು ಸಹ ಸೇರಿಸುವ ಸಾಧ್ಯತೆಯಿದೆ. ಏಕೆಂದರೆ ಆಂಗ್ಲರ ಪಡೆ ದ್ವಿತೀಯ ಟಿ20 ಪಂದ್ಯಕ್ಕೆ ಹೆಸರಿಸಲಾದ 12 ಆಟಗಾರರ ಪಟ್ಟಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ಕೂಡ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
Published On - 8:54 am, Sat, 25 January 25