21 ವರ್ಷಗಳ ಬಳಿಕ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು?
Virender Sehwag and Aarti: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಪತ್ನಿ ಆರತಿ ಅವರಿಂದ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಕಾರಣಕ್ಕೆ. ಸೆಹ್ವಾಗ್-ಆರತಿ ಕಳೆದ ಕೆಲ ತಿಂಗಳುಗಳಿಂದ ಪತ್ಯೇಕವಾಗಿ ವಾಸಿಸುತ್ತಿದ್ದು, ಶೀಘ್ರದಲ್ಲೇ ಈ ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ವದಂತಿಗಳ ಬೆನ್ನಲ್ಲೇ, ಇದೀಗ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿದೆ. ಸೆಹ್ವಾಗ್ ಹಾಗೂ ಪತ್ನಿ ಆರತಿ 21 ವರ್ಷಗಳ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದು, ಹೀಗಾಗಿ ಇಬ್ಬರು ಪತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಡ್ಯಾಶಿಂಗ್ ಓಪನರ್ ದೂರ ದೂರು:
ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಅಗಿದ್ದ ವೀರೇಂದ್ರ ಸೆಹ್ವಾಗ್ 2004 ರಲ್ಲಿ ಆರತಿ ಅವರನ್ನು ವಿವಾಹವಾಗಿದ್ದರು. ಆದರೆ ಈಗ ಸುಮಾರು 21 ವರ್ಷಗಳ ನಂತರ ಅವರ ಸಂಬಂಧವು ಮುರಿದು ಬೀಳುವ ಹಂತಕ್ಕೆ ಬಂದು ನಿಂತಿದೆ. ಇಬ್ಬರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಸೆಹ್ವಾಗ್ ಅವರ ಇತ್ತೀಚಿನ ಪೋಸ್ಟ್‌ಗಳು ಮತ್ತು ಅಪ್‌ಡೇಟ್‌ಗಳಲ್ಲಿ ಸಹ ಅವರ ಪತ್ನಿಯೊಂದಿಗೆ ಯಾವುದೇ ಚಿತ್ರವಿಲ್ಲ. ದೀಪಾವಳಿ ವೇಳೆಯೂ ಕೂಡ ಮಕ್ಕಳು ಮತ್ತು ತಾಯಿ ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಹಂಚಿಕೊಂಡರೂ, ಪತ್ನಿ ಜತೆಗಿನ ಫೋಟೋವನ್ನು ಶೇರ್ ಮಾಡಿರಲಿಲ್ಲ. ಅತ್ತ ಆರತಿ ಕೂಡ ಮಕ್ಕಳೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ವಿನಃ, ವೀರೇಂದ್ರ ಸೆಹ್ವಾಗ್ ಜೊತೆಗಿನ ಯಾವುದೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿಲ್ಲ.
ಅಷ್ಟೇ ಅಲ್ಲದೆ ಇಬ್ಬರು ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ಸೆಲೆಬ್ರಿಟಿ ದಂಪತಿ ಕಾನೂನು ಪ್ರಕಾರ ದೂರವಾಗಲಿದ್ದಾರೆ ಎಂದು ವರದಿಯಾಗಿದೆ.
ಪ್ರೀತಿ ಪ್ರೇಮ ವಿವಾಹ:
1999ರಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ವೀರೇಂದ್ರ ಸೆಹ್ವಾಗ್, 2004ರ ಏಪ್ರಿಲ್‌ನಲ್ಲಿ ಆರತಿ ಅಹ್ಲಾವತ್‌ರನ್ನು ಪ್ರೀತಿಸಿ ವಿವಾಹವಾದರು. ಅರಂಭದಲ್ಲಿ ಇಬ್ಬರ ಪ್ರೇಮ ವಿವಾಹಕ್ಕೆ ಕುಟುಂಬಸ್ಥರಿಂದ ಒಪ್ಪಿಗೆ ಇರಲಿಲ್ಲ.
ಇದಕ್ಕೆ ಮುಖ್ಯ ಕಾರಣ, ಸೆಹ್ವಾಗ್ ಹಾಗೂ ಆರತಿ ಕುಟುಂಬಗಳು ದೂರದ ಸಂಬಂಧಿಗಳು. ಇದಾಗ್ಯೂ ಕೆಲ ಸಮಯದ ನಂತರ ಕುಟುಂಬಸ್ಥರನ್ನು ಒಪ್ಪಿಸುವಲ್ಲಿ ಇಬ್ಬರೂ ಯಶಸ್ವಿಯಾದರು.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್‌ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ವಿಶೇಷ ಎಂದರೆ ವಿರೇಂದ್ರ ಸೆಹ್ವಾಗ್ ಮುಲ್ತಾನ್ನಲ್ಲಿ ಪಾಕಿಸ್ತಾನ್ ವಿರುದ್ಧದ ತ್ರಿಶತಕ ಸಿಡಿಸಿದ ಒಂದೇ ತಿಂಗಳಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದು ಇದು ಭಾರೀ ಸುದ್ದಿಯಾಗಿತ್ತು. ಇದೀಗ ಪ್ರೀತಿಸಿ ವಿವಾಹವಾಗಿದ್ದ ಜೋಡಿಯು ದೂರವಾಗಲು ನಿರ್ಧರಿಸಿದ್ದಾರೆ ಎಂದು ವರಿಯಲ್ಲಿ ತಿಳಿಸಲಾಗಿದೆ.
ದಂಪತಿಗೆ ಇಬ್ಬರು ಪುತ್ರರು:
ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆರ್ಯವೀರ್ ಮತ್ತು ವೇದಾಂತ್ ಹೆಸರಿನ ಇಬ್ಬರು ಪುತ್ರರೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ.