ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸೋತಿರುವ ಭಾರತದ ಮನೋಬಲ ಕುಗ್ಗಿದ್ದರೆ, ಸೋಲಿನ ಸುಳಿಯಿಂದ ಹೊರಬಂದು ಭಾರತವನ್ನು ಮಣಿಸಿದ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ. ಟೀಂ ಇಂಡಿಯಾ (Team India) ಸರಣಿಯಲ್ಲಿ ಈಗಾಗಲೇ 1-0 ಹಿನ್ನಡೆಯಲ್ಲಿರುವ ಕಾರಣ ಈಗ ತಂಡದ ಮೇಲೆ ಸ್ವಲ್ಪ ಒತ್ತಡವಿದೆ. ಇದಲ್ಲದೆ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಆಡದಿರುವುದು ಕೂಡ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಈ ನಡುವೆ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ (Brendon McCullum) ಕೂಡ ಟೀಂ ಇಂಡಿಯಾಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 28 ರನ್‌ಗಳಿಂದ ಸೋಲಿಸಿತ್ತು. ಹೈದರಾಬಾದ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಇಂಗ್ಲೆಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪುನರಾಗಮನ ಮಾಡಿತು. ಬ್ಯಾಟಿಂಗ್ನಲ್ಲಿ ಒಲಿ ಪೋಪ್ ಅಬ್ಬರಿಸಿದರೆ ಬೌಲಿಂಗ್ನಲ್ಲಿ ಮಿಂಚಿದ ಟಾಮ್ ಹಾರ್ಟ್ಲಿ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡರು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಪಿನ್ ಬೌಲರ್‌ಗಳು ಪಿಚ್‌ನ ಸಂಪೂರ್ಣ ಲಾಭ ಪಡೆದರು. ಇದರಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 231 ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೊಮ್ಮೆ ಇಂಗ್ಲೆಂಡ್ ತಂಡ ಸಾಧ್ಯವಾದಷ್ಟು ಸ್ಪಿನ್ ಬೌಲರ್ಗಳನ್ನು ಆಡಿಸುವ ಇಂಗಿತ ವ್ಯಕ್ತಪಡಿಸಿದೆ.
IND vs ENG: ಎನ್ಸಿಎಗೆ ರವೀಂದ್ರ ಜಡೇಜಾ; ಟೆಸ್ಟ್ ಸರಣಿಯಿಂದ ಔಟ್?
ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ನಾವು ಹೆದರುವುದಿಲ್ಲ ಎಂದು ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ. ಅದೇನೆಂದರೆ, ಎರಡನೇ ಪಂದ್ಯದಲ್ಲೂ ಇಂಗ್ಲೆಂಡ್ ಸ್ಪಿನ್ ಬೌಲರ್ಗಳತ್ತ ಹೆಚ್ಚು ಗಮನ ಹರಿಸಲಿದೆ ಎಂಬುದು ಈಗ ಸ್ಪಷ್ಟವಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಯುವ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು. ವೀಸಾ ವಿವಾದದಿಂದಾಗಿ ಶೋಯೆಬ್ ಬಶೀರ್ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.
ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಸಾಮಾನ್ಯವಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಸರುವಾಸಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ತಂಡದ ಅತ್ಯಂತ ಅನುಭವಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಕೂಡ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿರಲಿಲ್ಲ. ನಂತರ ಈ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ತಂಡ ಸಾಧ್ಯವಾದಷ್ಟು ಸ್ಪಿನ್ ಬೌಲರ್ಗಳನ್ನು ಆಡಿಸುವತ್ತ ಗಮನ ಹರಿಸಲಿದೆಯಂತೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪಾರ್ಟ್ ಟೈಮ್ ಬೌಲರ್ ಜೋ ರೂಟ್ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ ಟಾಮ್ ಹಾರ್ಟ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ