
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 387 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಕೂಡ 387 ರನ್ಗಳಿಸಿ ಆಲೌಟ್ ಆಗಿದೆ. ಅದರಂತೆ ಯಾವುದೇ ಮುನ್ನಡೆ ಇಲ್ಲದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವನ್ನು 192 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು.
ಈ ಯಶಸ್ಸಿಗಾಗಿ ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಮಾರಕ ದಾಳಿ ಸಂಘಟಿಸಿದ್ದರು. ಅದರಲ್ಲೂ ಕ್ರೀಸ್ ಕಚ್ಚಿ ಆಡುತ್ತಿದ್ದ ಬೆನ್ ಸ್ಟೋಕ್ಸ್ ವಿಕೆಟ್ ಪಡೆಯಲು ಸಿರಾಜ್ ಸಾಕಷ್ಟು ಬೆವರಿಳಿಸಬೇಕಾಯಿತು. ಇದರ ನಡುವೆ ಸಿರಾಜ್ ಎಸೆದ ಎಸೆತವೊಂದು ಸ್ಟೋಕ್ಸ್ ಅವರ ಖಾಸಗಿಭಾಗಕ್ಕೆ ತಗುಲಿದೆ. ಅತ್ತ ಚೆಂಡು ಬಡಿಯುತ್ತಿದ್ದಂತೆ ನೋವಿನಿಂದ ಸ್ಟೋಕ್ಸ್ ಕುಸಿದು ಬಿದ್ದಿದ್ದಾರೆ. ಅಲ್ಲದೆ ಕೆಲ ಕ್ಷಣಗಳ ಕಾಲ ಪಿಚ್ನಲ್ಲಿ ಮಕಾಡೆ ಮಲಗಿದ್ದರು.
Not where you want to be hit 😅 pic.twitter.com/mvW3uXfMcp
— England Cricket (@englandcricket) July 13, 2025
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಾಗ್ಯೂ ಸ್ಟೋಕ್ಸ್ ವಿಕೆಟ್ ಪಡೆಯಲು ಮೊಹಮ್ಮದ್ ಸಿರಾಜ್ಗೆ ಸಾಧ್ಯವಾಗಲೇ ಇಲ್ಲ. ಆ ಬಳಿಕ ದಾಳಿಗಿಳಿದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಬೆನ್ ಸ್ಟೋಕ್ಸ್ (33) ಇನಿಂಗ್ಸ್ ಕೊನೆಗೊಳಿಸಿದರು.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ನಾಲ್ಕು ದಿನದಾಟಗಳು ಮುಗಿದಿವೆ. ಇನ್ನು ಕೊನೆಯ ದಿನದಾಟ ಮಾತ್ರ ಬಾಕಿಯಿದ್ದು, ಅಂತಿಮ ದಿನದಲ್ಲಿ ಟೀಮ್ ಇಂಡಿಯಾ 135 ರನ್ಗಳನ್ನು ಕಲೆಹಾಕಿದರೆ ಮಾತ್ರ ಪಂದ್ಯವನ್ನು ಗೆಲ್ಲಬಹುದು. ಇದರ ನಡುವೆ ಇಂಗ್ಲೆಂಡ್ 6 ವಿಕೆಟ್ ಕಬಳಿಸಿದರೆ ಭಾರತ ತಂಡ ವಿಜಯವನ್ನು ಕಸಿದುಕೊಳ್ಳಲಿದ್ದಾರೆ.
ಇದನ್ನೂ ಓದಿ: ಒಂದು ಸೆಂಚುರಿಯೊಂದಿಗೆ 6 ಭರ್ಜರಿ ದಾಖಲೆ ಬರೆದ ಕೆಎಲ್ ರಾಹುಲ್
ಸದ್ಯ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿದ್ದು, ಕೆಎಲ್ ರಾಹುಲ್ (33) ಹಾಗೂ ರಿಷಭ್ ಪಂತ್ (0) ಐದನೇ ದಿನದಾಟದಲ್ಲಿ ಇನಿಂಗ್ಸ್ ಮುಂದುವರೆಸಲಿದ್ದಾರೆ.