IND vs ENG: 4ನೇ ದಿನದಾಟ ಅಂತ್ಯ; 192 ರನ್ ಗುರಿ ಬೆನ್ನಟ್ಟಿರುವ ಭಾರತಕ್ಕೆ ಆರಂಭಿಕ ಆಘಾತ
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ದಿನದಾಟದಲ್ಲಿ, ಭಾರತವು ಗೆಲ್ಲಲು 135 ರನ್‌ಗಳ ಅಗತ್ಯವಿದೆ. ಭಾರತ 4 ವಿಕೆಟ್‌ಗಳಿಗೆ 58 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಎರಡೂ ತಂಡಗಳು 387 ರನ್ ಗಳಿಸಿದವು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 192 ರನ್ ಗಳಿಸಿ ಭಾರತಕ್ಕೆ 193 ರನ್‌ಗಳ ಗುರಿ ನೀಡಿತು. ಕೆ.ಎಲ್. ರಾಹುಲ್ 33 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ದಿನದಾಟ ಅಂತ್ಯಗೊಂಡಿದೆ. ಭಾನುವಾರದ ಅಂತ್ಯದ ವೇಳೆಗೆ ಭಾರತ ನಾಲ್ಕು ವಿಕೆಟ್‌ಗಳಿಗೆ 58 ರನ್ ಗಳಿಸಿದ್ದು, ಗೆಲ್ಲಲು 135 ರನ್‌ಗಳ ಅವಶ್ಯಕತೆಯಿದೆ. ಇಂಗ್ಲೆಂಡ್ ಮತ್ತು ಭಾರತದ ಮೊದಲ ಇನ್ನಿಂಗ್ಸ್ 387 ರನ್‌ಗಳಿಗೆ ಕೊನೆಗೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಇಂಗ್ಲಿಷ್ ತಂಡವು 10 ವಿಕೆಟ್‌ಗಳಿಗೆ 192 ರನ್ ಗಳಿಸಿ ಭಾರತಕ್ಕೆ 193 ರನ್‌ಗಳ ಗುರಿಯನ್ನು ನೀಡಿತು. ದಿನದ ಅಂತ್ಯದ ವೇಳೆಗೆ, ಕೆಎಲ್ ರಾಹುಲ್ (KL Rahul) 47 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 33 ರನ್ ಗಳಿಸುವ ಮೂಲಕ ಕ್ರೀಸ್‌ನಲ್ಲಿದ್ದಾರೆ.
ಸೊನ್ನೆ ಸುತ್ತಿದ ಜೈಸ್ವಾಲ್
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕಳಪೆ ಆರಂಭ ಕಂಡಿತು. ಆರಂಭಿಕ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಟೀಂ ಇಂಡಿಯಾ ಐದು ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜೋಫ್ರಾ ಆರ್ಚರ್, ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಕನ್ನಡಿಗ ಕರುಣ್ ನಾಯರ್ 33 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು.
ಪರಿಣಾಮ ಬೀರದ ಗಿಲ್
ಕಳೆದ ಟೆಸ್ಟ್ನಲ್ಲಿ ರನ್‌ಗಳ ಮಳೆ ಹರಿಸಿದ್ದ ನಾಯಕ ಶುಭ್‌ಮನ್ ಗಿಲ್, ಲಾರ್ಡ್ಸ್ ಟೆಸ್ಟ್ನಲ್ಲಿ ಒಂದೇ ಒಂದು ಅರ್ಧಶತಕವನ್ನು ಬಾರಿಸಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 16 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಗಳಿಸಿ ಕರ್ಸ್‌ಗೆ ಬಲಿಯಾದರು. ಗಿಲ್ ಬಳಿಕ ನೈಟ್ ವಾಚ್ಮನ್ ಆಗಿ ಬಂದಿದ್ದ ಆಕಾಶ್‌ದೀಪ್, ಬೆನ್ ಸ್ಟೋಕ್ಸ್ ಅವರ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ನಾಲ್ಕನೇ ದಿನದಾಟವೂ ಅಂತ್ಯವಾಯಿತು.
IND vs ENG: ಜೋ ರೂಟ್ಗೆ ಪೆವಿಲಿಯನ್ ರೂಟ್ ತೋರಿಸಿದ ಸುಂದರ್; ವಿಡಿಯೋ
ಇಂಗ್ಲೆಂಡ್ 2ನೇ ಇನ್ನಿಂಗ್ಸ್ ಹೀಗಿತ್ತು
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 192 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಮಾಜಿ ನಾಯಕ ಜೋ ರೂಟ್ ಅತ್ಯಧಿಕ 40 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಬೆನ್ ಸ್ಟೋಕ್ಸ್ 33 ರನ್‌ಗಳ ಕಾಣಿಕೆ ನೀಡಿದರು. ಉಳಿದಂತೆ ಹ್ಯಾರಿ ಬ್ರೂಕ್ 23 ರನ್ ಹಾಗೂ ಆರಂಭಿಕ ಜ್ಯಾಕ್ ಕ್ರೌಲಿ 22 ರನ್ ಬಾರಿಸಿ ತಂಡವನ್ನು ಈ ಗೌರವಯುತ ಮೊತ್ತಕ್ಕೆ ಕೊಂಡೊಯ್ದರು. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿದರೆ, ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 pm, Sun, 13 July 25
