IND vs ENG: ಲಾರ್ಡ್ಸ್ ಟೆಸ್ಟ್ ಗೆಲ್ಲಲು ಭಾರತಕ್ಕೆ 193 ರನ್‌ಗಳ ಗುರಿ ನೀಡಿದ ಇಂಗ್ಲೆಂಡ್
Lords Test: ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ, ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಅನ್ನು 192 ರನ್‌ಗಳಿಗೆ ಮುಗಿಸಿತು. ಇದರಿಂದಾಗಿ ಭಾರತಕ್ಕೆ ಗೆಲುವಿಗೆ 193 ರನ್‌ಗಳ ಗುರಿ ಸಿಕ್ಕಿದೆ. ಯಾವುದೇ ಇಂಗ್ಲೆಂಡ್ ಆಟಗಾರ ಅರ್ಧಶತಕ ಬಾರಿಸಲಿಲ್ಲ. ಜೋ ರೂಟ್ 40 ರನ್, ಬೆನ್ ಸ್ಟೋಕ್ಸ್ 33 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ಭಾರತಕ್ಕೆ ಪ್ರಮುಖ ಕೊಡುಗೆ ನೀಡಿದರು.

ಲಾರ್ಡ್ಸ್ ಟೆಸ್ಟ್ (Lords Test) ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 192 ರನ್‌ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ ಭಾರತ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು 193 ರನ್‌ಗಳ ಗುರಿ ನೀಡಿದೆ. ಇಂಗ್ಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವ ಆಟಗಾರನಿಗೂ ಅರ್ಧಶತಕದ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಮಾಜಿ ನಾಯಕ ಜೋ ರೂಟ್ (Joe Root) ಅತ್ಯಧಿಕ 40 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಬೆನ್ ಸ್ಟೋಕ್ಸ್ 33 ರನ್‌ಗಳ ಕಾಣಿಕೆ ನೀಡಿದರು. ಉಳಿದಂತೆ ಹ್ಯಾರಿ ಬ್ರೂಕ್ 23 ರನ್ ಹಾಗೂ ಆರಂಭಿಕ ಜ್ಯಾಕ್ ಕ್ರೌಲಿ 22 ರನ್ ಬಾರಿಸಿ ತಂಡವನ್ನು ಈ ಗೌರವಯುತ ಮೊತ್ತಕ್ಕೆ ಕೊಂಡೊಯ್ದರು. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ (Washington Sundar) 4 ವಿಕೆಟ್ ಕಬಳಿಸಿದರೆ, ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.
ಆರಂಭಿಕ ಆಘಾತ ನೀಡಿದ ಸಿರಾಜ್
ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 2 ರನ್ ಬಾರಿಸಿದ್ದ ಇಂಗ್ಲೆಂಡ್ ತಂಡ ಇಲ್ಲಿಂದ ತನ್ನ ನಾಲ್ಕನೇ ದಿನದಾಟವನ್ನು ಆರಂಭಿಸಿತು. ಈ ದಿನದ ಮೊದಲ ಸೆಷನ್‌ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ , ಆರಂಭಿಕ ಬೆನ್ ಡಕೆಟ್ ಜೊತೆಗೆ ಓಲ್ಲಿ ಪೋಪ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಡಕೆಟ್ 12 ಮತ್ತು ಪೋಪ್ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ನಂತರ, ನಿತೀಶ್ ಕುಮಾರ್ ರೆಡ್ಡಿ ಜ್ಯಾಕ್ ಕ್ರೌಲಿಯನ್ನು ಬೇಟೆಯಾಡಿದರು. ಕ್ರೌಲಿ 49 ಎಸೆತಗಳಲ್ಲಿ 22 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ಸೆಷನ್‌ನಲ್ಲಿ ಇಂಗ್ಲೆಂಡ್‌ಗೆ ನಾಲ್ಕನೇ ಹೊಡೆತ ನೀಡಿದ ಆಕಾಶ್ ದೀಪ್, ಹ್ಯಾರಿ ಬ್ರೂಕ್ (23)ರನ್ನು ಔಟ್ ಮಾಡಿದರು.
ಸುಂದರ್ ಸ್ಪಿನ್ ಮ್ಯಾಜಿಕ್
ಎರಡನೇ ಸೆಷನ್‌ನಲ್ಲಿಯೂ ಭಾರತೀಯ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರು. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮೊದಲು ಜೋ ರೂಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರೂಟ್ 96 ಎಸೆತಗಳಲ್ಲಿ ಒಂದು ಬೌಂಡರಿ ಸಹಾಯದಿಂದ 40 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ, ಸುಂದರ್, ಜೇಮಿ ಸ್ಮಿತ್ ಅವರನ್ನು ಬಲಿ ತೆಗೆದುಕೊಂಡರು.
IND vs ENG: 540 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ ಯುವ ಪಡೆ
ಮೂರನೇ ಸೆಷನ್‌ನಲ್ಲಿಯೂ ತಮ್ಮ ಮ್ಯಾಜಿಕ್ ಮುಂದುವರೆಸಿದ ಸುಂದರ್ ಬೆನ್ ಸ್ಟೋಕ್ಸ್ (33) ಮತ್ತು ಶೋಯೆಬ್ ಬಶೀರ್ (2) ಅವರನ್ನು ಬೌಲ್ಡ್ ಮಾಡಿದರು. ಅದೇ ಸಮಯದಲ್ಲಿ ಬುಮ್ರಾ, ಕ್ರಿಸ್ ವೋಕ್ಸ್ (10) ಮತ್ತು ಬ್ರೈಡನ್ ಕಾರ್ಸೆ (1) ಗೆ ಪೆವಿಲಿಯನ್‌ಗೆ ಹೋಗುವ ದಾರಿಯನ್ನು ತೋರಿಸಿದರು. ಕೊನೆಯಲ್ಲಿ, ಜೋಫ್ರಾ ಆರ್ಚರ್ ಐದು ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಸುಂದರ್ ನಾಲ್ಕು ವಿಕೆಟ್ ಪಡೆದರೆ, ಬುಮ್ರಾ ಮತ್ತು ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ನಿತೀಶ್ ರೆಡ್ಡಿ ಮತ್ತು ಆಕಾಶ್ ದೀಪ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Sun, 13 July 25
