IND vs ENG: ಬೆನ್ ಡಕೆಟ್ ಅಜೇಯ ಶತಕ; ಭಾರತಕ್ಕೆ ತಿರುಗೇಟು ನೀಡಿದ ಇಂಗ್ಲೆಂಡ್
IND vs ENG: ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿರುವ 445 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿದೆ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) ನೀಡಿರುವ 445 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿದೆ. ಟೀಂ ಇಂಡಿಯಾಕ್ಕಿಂತ ಇಂಗ್ಲೆಂಡ್ ಇನ್ನೂ 238 ರನ್‌ಗಳ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ ಪರ ಅಜೇಯ ಶತಕ ಬಾರಿಸಿರುವ ಡಕೆಟ್ (Ben Duckett) 133 ರನ್ ಸಿಡಿಸಿದ್ದರೆ, ಜೋ ರೂಟ್ 9 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಉಳಿದಂತೆ ಆರಂಭಿಕ ಝಾಕ್ ಕ್ರೌಲಿ 15 ರನ್ ಮತ್ತು ಓಲಿ ಪೋಪ್ 39 ರನ್ ಕೊಡುಗೆ ನೀಡಿದರು. ಇದೀಗ ಮೂರನೇ ದಿನ ಇಂಗ್ಲೆಂಡ್ ತಂಡವನ್ನು ಆದಷ್ಟು ಬೇಗ ಕಟ್ಟಿಹಾಕುವ ಸವಾಲು ಟೀಂ ಇಂಡಿಯಾ ಮುಂದಿದೆ.
ದಾಖಲೆ ಬರೆದ ಅಶ್ವಿನ್
ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಮತ್ತು ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಆರಂಭಿಕ ಝಾಕ್ ಕ್ರೌಲಿ ವಿಕೆಟ್ ಪಡೆದ ಆರ್ ಅಶ್ವಿನ್, ಈ ವಿಕೆಟ್ ಮೂಲಕ ಟೀಂ ಇಂಡಿಯಾ ಪರ 500 ಟೆಸ್ಟ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. ಹಾಗೆಯೇ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಆ ಬಳಿಕ ದಾಳಿಗಿಳಿದ ಸಿರಾಜ್ ಒಲಿ ಪೋಪ್ ಅವರನ್ನು 39 ರನ್‌ಗಳಿಗೆ ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಎರಡನೇ ಹೊಡೆತ ನೀಡಿದರು.
IND vs ENG: ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆ ಬರೆದ ಆರ್ ಅಶ್ವಿನ್..!
ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್
ಏತನ್ಮಧ್ಯೆ, ಅದಕ್ಕೂ ಮೊದಲು ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಕಲೆಹಾಕಿದೆ. 326 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಬೇಗನೆ ಔಟಾದರು. ಕುಲ್ದೀಪ್ 4 ಮತ್ತು ಜಡೇಜಾ 112 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಂತರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಧ್ರುವ್ ಜುರೆಲ್ ಮತ್ತು ಆರ್ ಅಶ್ವಿನ್ 77 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ೀ ಈ ವೇಳೆ ಅಶ್ವಿನ್ 37 ರನ್ ಗಳಿಸಿ ಔಟಾದರೆ, ಧ್ರುವ್ ಜುರೆಲ್ 46 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ವೇಗಿ ಜಸ್ಪ್ರೀತ್ ಬುಮ್ರಾ 26 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಮೊಹಮ್ಮದ್ ಸಿರಾಜ್ 3 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಾರ್ಕ್ ವುಡ್ ಮಾರಕ ದಾಳಿ
ಇದಕ್ಕೂ ಮುನ್ನ ಮೊದಲ ದಿನ ನಾಯಕ ರೋಹಿತ್ ಶರ್ಮಾ ಸಿಡಿಸಿದ 131 ರನ್ ಹಾಗೂ ಜಡೇಜಾ ಸಿಡಿಸಿದ ಶತಕ, ಸರ್ಫರಾಜ್ರ 62 ರನ್‌ಗಳ ಬಲದಿಂದ ಟೀಂ ಇಂಡಿಯಾ 326 ರನ್ ಕಲೆಹಾಕಿತ್ತು. ಆದರೆ ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರಿ ನಿರಾಸೆ ಮೂಡಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮೊದಲ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು 4 ವಿಕೆಟ್ ಪಡೆದರೆ, ರೆಹಾನ್ ಅಹ್ಮದ್ 2 ವಿಕೆಟ್, ಜೇಮ್ಸ್ ಆಂಡರ್ಸನ್, ಟಾಮ್ ಹಾರ್ಟ್ಲಿ ಮತ್ತು ಜೋ ರೂಟ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Fri, 16 February 24