IND vs ENG: ದ್ವಿಶತಕಗಳ ಸರಮಾಲೆ; ರಾಂಚಿಯಲ್ಲಿ ಟೀಂ ಇಂಡಿಯಾ ದಾಖಲೆ ಹೇಗಿದೆ ಗೊತ್ತಾ?

|

Updated on: Feb 19, 2024 | 4:22 PM

IND vs ENG: ಸರಣಿಯ ನಾಲ್ಕನೇ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ ಆರಂಭವಾಗಲಿದೆ. ರಾಂಚಿಯಲ್ಲಿ ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳ ದಾಖಲೆಗಳನ್ನು ಗಮನಿಸಿದರೆ ಇಲ್ಲಿ ಸಾಕಷ್ಟು ರನ್ ಮಳೆಯಾಗುವುದು ಖಚಿತ. ಅಂದರೆ ಆಂಗ್ಲ ತಂಡಕ್ಕೆ ಇಲ್ಲೂ ಸಮಾಧಾನ ಸಿಗುವ ಭರವಸೆ ಕಾಣುತ್ತಿಲ್ಲ.

IND vs ENG: ದ್ವಿಶತಕಗಳ ಸರಮಾಲೆ; ರಾಂಚಿಯಲ್ಲಿ ಟೀಂ ಇಂಡಿಯಾ ದಾಖಲೆ ಹೇಗಿದೆ ಗೊತ್ತಾ?
ರಾಂಚಿ ಮೈದಾನ
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಸರಣಿಯ ಮೂರನೇ ಪಂದ್ಯವು ಇಂದು ಅಂದರೆ ಫೆಬ್ರವರಿ 19 ರಂದು ಕೊನೆಗೊಳ್ಳಬೇಕಿತ್ತು. ಆದರೆ ಟೀಂ ಇಂಡಿಯಾ (Team India) ಕೇವಲ 4 ದಿನಗಳಲ್ಲಿ ಇಂಗ್ಲೆಂಡ್ ತಂಡವನ್ನು 434 ರನ್‌ಗಳಿಂದ ಸೋಲಿಸುವ ಮೂಲಕ ದಾಖಲೆ ನಿರ್ಮಿಸಿದಲ್ಲದೆ ಸರಣಿಯಲ್ಲಿ ಮುನ್ನಡೆ ಕೂಡ ಕಾಯ್ದುಕೊಂಡಿದೆ. ಇದೀಗ ಸರಣಿಯ ನಾಲ್ಕನೇ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ (Ranchi) ಆರಂಭವಾಗಲಿದೆ. ರಾಂಚಿಯಲ್ಲಿ ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳ ದಾಖಲೆಗಳನ್ನು ಗಮನಿಸಿದರೆ ಇಲ್ಲಿ ಸಾಕಷ್ಟು ರನ್ ಮಳೆಯಾಗುವುದು ಖಚಿತ. ಅಂದರೆ ಆಂಗ್ಲ ತಂಡಕ್ಕೆ ಇಲ್ಲೂ ಸಮಾಧಾನ ಸಿಗುವ ಭರವಸೆ ಕಾಣುತ್ತಿಲ್ಲ.

ರಾಂಚಿಯಲ್ಲಿ ನಡೆದಿವೆ 2 ಟೆಸ್ಟ್ ಪಂದ್ಯಗಳು

ರಾಂಚಿಯ ಜೆಎಸ್​ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ 2 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಒಂದು ಪಂದ್ಯ ಗೆದ್ದಿದ್ದರೆ ಇನ್ನೊಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ, ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿಗೆ ರಾಂಚಿಯ ಈ ಕ್ರೀಡಾಂಗಣದಲ್ಲಿ ಆಡಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2017ರಲ್ಲಿ ರಾಂಚಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತ 600ಕ್ಕೂ ಹೆಚ್ಚು ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದರಲ್ಲಿ ಭಾರತ ಪರ ಚೇತೇಶ್ವರ ಪೂಜಾರ ಭರ್ಜರಿ ದ್ವಿಶತಕ ಸಿಡಿಸಿದರೆ, ವೃದ್ಧಿಮಾನ್ ಸಹಾ ಶತಕ ಬಾರಿಸಿದ್ದರು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ದ್ವಿಶತಕ ಸಿಡಿಸಿದ್ದ ರೋಹಿತ್ ಶರ್ಮಾ

ಈ ಪಂದ್ಯದ ನಂತರ, 2019 ರಲ್ಲಿ ಈ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಬಾರಿ ಭಾರತ ಇನ್ನಿಂಗ್ಸ್ ಮತ್ತು 202 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ 212 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ ಅಜಿಂಕ್ಯ ರಹಾನೆ ಕೂಡ ಶತಕ ಬಾರಿಸಿದ್ದರು. ಅಂತಿಮವಾಗಿ ಭಾರತ 497 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಎರಡೂ ಇನಿಂಗ್ಸ್‌ಗಳಲ್ಲಿ ಇಷ್ಟು ರನ್ ಗಳಿಸಲು ಸಾಧ್ಯವಾಗದೆ ಇನ್ನಿಂಗ್ಸ್‌ ಸೋಲನುಭವಿಸಿತು.

ದ್ವಿಶತಕದ ಸಾಧನೆ

ಎರಡು ಪಂದ್ಯಗಳನ್ನು ಗಮನಿಸಿದರೆ ಕಾಣುವ ಸಾಮಾನ್ಯ ಸಂಗತಿಯೆಂದರೆ, ಈ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಕನಿಷ್ಠ ಒಂದು ದ್ವಿಶತಕ ಹಾಗೂ ಒಂದು ಶತಕ ಸಿಡಿಸಿದೆ. ಇದರಿಂದ ಇಲ್ಲಿ ಸಾಕಷ್ಟು ರನ್ ಸಿಡಿಯುವುದು ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಯಶಸ್ವಿ ಜೈಸ್ವಾಲ್ ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರೆ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಬಾರಿಸಿದ್ದರು. ಪ್ರಸ್ತುತ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮುಂದಿನ ಪಂದ್ಯದಲ್ಲೂ ಅಬ್ಬರಿಸುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಆಂಗ್ಲ ಬೌಲರ್‌ಗಳು ಟೀಂ ಇಂಡಿಯಾ ಬ್ಯಾಟರ್​ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Mon, 19 February 24