
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಕ್ರಿಸ್ ವೋಕ್ಸ್ ಎಸೆದ 68ನೇ ಓವರ್ನ 4ನೇ ಎಸೆತದಲ್ಲಿ ಪಂತ್ ರಿವರ್ಸ್-ಸ್ವೀಪ್ ಶಾಟ್ ಬಾರಿಸಲು ಯತ್ನಿಸಿದ್ದು, ಈ ವೇಳೆ ಚೆಂಡು ಅವರ ಬಲಗಾಲಿಗೆ ತಾಗಿದೆ.
Fingers crossed for our X-factor 🤞
Speedy recovery, Rishabh!#SonySportsNetwork #GroundTumharaJeetHamari #ENGvIND #NayaIndia #DhaakadIndia #TeamIndia #ExtraaaInnings pic.twitter.com/ZHfyMvMfNx
— Sony Sports Network (@SonySportsNetwk) July 23, 2025
ಚೆಂಡು ಬಡಿದ ರಭಸಕ್ಕೆ ರಿಷಭ್ ಪಂತ್ ಅವರ ಕಾಲಿನ ಭಾಗ ಊದಿಕೊಂಡಿದ್ದು, ಹೀಗಾಗಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಅವರು ಮೈದಾನ ತೊರೆದಿದ್ದಾರೆ. ಅಲ್ಲದೆ ಆ ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಅಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗಲಾಯಿತು. ಇದೀಗ ತೀವ್ರವಾಗಿ ಗಾಯಗೊಂಡಿರುವ ರಿಷಭ್ ಪಂತ್ ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ರಿಷಭ್ ಪಂತ್ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿದ್ದಾರೆ. ಆ ಬಳಿಕ ರವೀಂದ್ರ ಜಡೇಜಾ ಬ್ಯಾಟಿಂಗ್ಗೆ ಆಗಮಿಸಿದ್ದರು. ಇದೀಗ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಕ್ರೀಸ್ನಲ್ಲಿದ್ದಾರೆ. ಹೀಗಾಗಿ ಪಂತ್ಗೆ ಮತ್ತೆ ಮೊದಲ ಇನಿಂಗ್ಸ್ ಆಡಲು ಅವಕಾಶ ಇದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…
ರಿಷಭ್ ಪಂತ್ ಮೈದಾನ ತೊರೆದಿರುವುದು ರಿಟೈರ್ಡ್ ಹರ್ಟ್ ಆಗಿ. ಅಂದರೆ ಗಾಯದ ಕಾರಣ ಅಥವಾ ನೋವಿನ ಕಾರಣ ಮೈದಾನ ತೊರೆದಿದ್ದಾರೆ. ಐಸಿಸಿ ಆಟದ ಷರತ್ತುಗಳ ಪ್ರಕಾರ, ಪಂತ್ ಮತ್ತೆ ಬ್ಯಾಟಿಂಗ್ ಮಾಡಲು ಅರ್ಹರಾಗಿರುತ್ತಾರೆ.
ಏಕೆಂದರೆ ಐಸಿಸಿ ಸೆಕ್ಷನ್ 25.4 ಪ್ರಕಾರ, “ಒಬ್ಬ ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನಲ್ಲಿ ಚೆಂಡು ಡೆಡ್ ಆಗಿರುವ ಯಾವುದೇ ಸಮಯದಲ್ಲಿ ನಿವೃತ್ತಿ ಹೊಂದಬಹುದು. ಅಲ್ಲದೆ ಆಟವನ್ನು ಮುಂದುವರಿಸಲು ಅನುಮತಿಸುವ ಮೊದಲು, ಅಂಪೈರ್‌ಗಳಿಗೆ ಬ್ಯಾಟ್ಸ್‌ಮನ್ ನಿವೃತ್ತಿ ಹೊಂದಲು ಕಾರಣವನ್ನು ತಿಳಿಸಬೇಕು. ಹೀಗೆ ಅನಾರೋಗ್ಯ, ಗಾಯ ಅಥವಾ ಇನ್ನಾವುದೇ ಅನಿವಾರ್ಯ ಕಾರಣದಿಂದಾಗಿ ಬ್ಯಾಟ್ಸ್‌ಮನ್ ನಿವೃತ್ತರಾದರೆ, ಆ ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್ ಅನ್ನು ಪುನರಾರಂಭಿಸಲು ಅರ್ಹನಾಗಿರುತ್ತಾನೆ.”
ಈ ಮೇಲೆ ತಿಳಿಸಿದಂತೆ ರಿಷಭ್ ಪಂತ್ ಮೈದಾನ ತೊರೆದಿರುವುದು ರಿಟೈರ್ಡ್ ಹರ್ಟ್ ಆಗಿ. ಅಂಪೈರ್ನಿಂದ ಅನುಮತಿ ಪಡೆದ ಬಳಿಕವಷ್ಟೇ ರಿಟೈರ್ಡ್ ಆಗಿ ಪೆವಿಲಿಯನ್ಗೆ ತೆರಳಬಹುದು. ಹೀಗಾಗಿ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದಿರುವ ರಿಷಭ್ ಪಂತ್ ಮತ್ತೆ ಬ್ಯಾಟಿಂಗ್ ಮಾಡಬಹುದು.
ಇನ್ನು ರಿಟೈರ್ಡ್ ಔಟ್ ಆಗಿ ಹೊರ ನಡೆದರೆ ಮತ್ತೆ ಬ್ಯಾಟ್ ಮಾಡಲು ಅವಕಾಶ ನೀಡಲಾಗುವುದಿಲ್ಲ. ಅದನ್ನು ಔಟ್ ಎಂದೇ ಪರಿಗಣಿಸಲಾಗುತ್ತದೆ. ಆದರೆ ರಿಷಭ್ ಪಂತ್ ರಿಟೈರ್ಡ್ ಹರ್ಟ್ ಆಯ್ಕೆಯ ಮೂಲಕ ಹೊರ ನಡೆದಿರುವ ಕಾರಣ ಅವರಿಗೆ ಮೊದಲ ಇನಿಂಗ್ಸ್ನಲ್ಲೇ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಗುತ್ತದೆ.
ರಿಟೈರ್ಡ್ ಹರ್ಟ್ ಆಗಿ ಹೊರ ನಡೆದ ಬ್ಯಾಟ್ಸ್‌ಮನ್ ಯಾವುದೇ ಕ್ರಮಾಂಕದಲ್ಲೂ ಮತ್ತೆ ಕಣಕ್ಕಿಳಿಯಬಹುದು. ಅಂದರೆ ಭಾರತ ತಂಡವು ಮುಂದಿನ ವಿಕೆಟ್ ಕಳೆದುಕೊಂಡರೆ, ರಿಷಭ್ ಪಂತ್ ಮತ್ತೆ ಬ್ಯಾಟಿಂಗ್ಗೆ ಇಳಿಯಬಹುದು. ಅಂದರೆ ಪ್ರಸ್ತುತ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡಿದೆ. 5ನೇ ವಿಕೆಟ್ ಪತನವಾದರೆ ಪಂತ್ ಮತ್ತೆ ಬ್ಯಾಟಿಂಗ್ಗೆ ಆಗಮಿಸಬಹುದು.
ಇಲ್ಲಿ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದ ಆಟಗಾರನು ಕೊನೆಯಲ್ಲಿ ಕಣಕ್ಕಿಳಿಯಬೇಕೆಂಬ ನಿಯಮವಿಲ್ಲ. ಅದರಂತೆ ಬ್ಯಾಟರ್ರೊಬ್ಬರು ಔಟ್ ಆದರೆ ಮತ್ತೆ ಕಣಕ್ಕಿಳಿಯಲು ಅವಕಾಶವಿದೆ. ಸದ್ಯ ಗಾಯಾಳುವಾಗಿರುವ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿದ್ದರೆ ಯಾವುದೇ ಕ್ರಮಾಂಕದಲ್ಲೂ ಬೇಕಿದ್ದರೂ ಇನಿಂಗ್ಸ್ ಮುಂದುವರೆಸಬಹುದು.
ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ 46 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 58 ರನ್ ಗಳಿಸಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಳಿದ ಸಾಯಿ ಸುದರ್ಶನ್ 61 ರನ್ಗಳ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಮೊಹಮ್ಮದ್ ಸಿರಾಜ್
ಹಾಗೆಯೇ ರಿಷಭ್ ಪಂತ್ 37 ರನ್ ಬಾರಿಸಿ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 264 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, 2ನೇ ದಿನದಾಟಲ್ಲಿ ಇನಿಂಗ್ಸ್ ಮುಂದುವರೆಸಲಿದ್ದಾರೆ.