IND vs ENG: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಭಾರತ; ಇಂಗ್ಲೆಂಡ್ಗೆ 28 ರನ್ ಜಯ
IND vs ENG: ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 28 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 28 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಆಂಗ್ಲರು ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 195 ರನ್‌ಗಳ ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿದ್ದು ಇದೇ ಮೊದಲು. ಗೆಲುವಿಗೆ 231 ರನ್‌ಗಳ ಅಲ್ಪ ಗುರಿ ಪಡೆದ ಟೀಂ ಇಂಡಿಯಾ 4ನೇ ದಿನದಾಟದ ಕೊನೆಯಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇಂಗ್ಲೆಂಡ್‌ನ ಈ ರೋಚಕ ಗೆಲುವಿನಲ್ಲಿ 196 ರನ್ ಸಿಡಿಸಿದ ಒಲೀ ಪೋಪ್ (Ollie Pope) ಹಾಗೂ ಬೌಲಿಂಗ್ನಲ್ಲಿ 7 ವಿಕೆಟ್ ಪಡೆದ ಟಾಮ್ ಹಾರ್ಟ್ಲಿ (Tom Hartley) ಪ್ರಮುಖ ಪಾತ್ರವಹಿಸಿದರು.
326 ರನ್‌ಗಳಿಂದ ಪಂದ್ಯದ ನಾಲ್ಕನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್ 420 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತನ್ನ ಎರಡನೇ ಇನ್ನಿಂಗ್ಸ್ಗೆ ಅಂತ್ಯ ಹಾಡಿತು. ಈ ಮೂಲಕ ಟೀಂ ಇಂಡಿಯಾಗೆ 231 ರನ್‌ಗಳ ಗುರಿ ನೀಡಿತು. ಈ ಗುರಿ ಭಾರತಕ್ಕೆ ಅಷ್ಟೇನೂ ಕಷ್ಟವಾಗಿರಲಿಲ್ಲ. ಹಾಗೆಯೇ ಇಂಗ್ಲೆಂಡ್‌ನ ಅನನುಭವಿ ಬೌಲಿಂಗ್‌ನ ಮುಂದೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟುತ್ತಾರೆ ಎಂಬ ಭರವಸೆ ಇತ್ತು. ಆದರೆ ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಹಾರ್ಟ್ಲಿ ಇದಕ್ಕೆ ಅವಕಾಶ ನೀಡಲಿಲ್ಲ.
ಗಬ್ಬಾದಲ್ಲಿ ವಿಂಡೀಸ್ಗೆ ಐತಿಹಾಸಿಕ ಗೆಲುವು! ಕುಣಿದು ಕುಪ್ಪಿಳಿಸಿ ಭಾವುಕರಾದ ಬ್ರಿಯಾನ್ ಲಾರಾ
ಭಾರತಕ್ಕೆ ಉತ್ತಮ ಆರಂಭ
ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (39) ಮತ್ತು ಯಶಸ್ವಿ ಜೈಸ್ವಾಲ್ 42 ರನ್‌ಗಳ ಆರಂಭಿಕ ಜೊತೆಯಾಟ ನಡೆಸಿ ಗುರಿ ಮುಟ್ಟುವ ಭರವಸೆ ಮೂಡಿಸಿದರು. ನಂತರ ಟಾಮ್ ಹಾರ್ಟ್ಲಿಯ ಒಂದು ಓವರ್ ಎಲ್ಲವನ್ನೂ ಬದಲಾಯಿಸಿತು. ಈ ಓವರ್‌ನಲ್ಲಿ ಹಾರ್ಟ್ಲಿ ಮೊದಲು ಜೈಸ್ವಾಲ್ ಅವರ ವಿಕೆಟ್ ಪಡೆದರು. ಬಳಿಕ 2 ಎಸೆತಗಳ ನಂತರ ಶುಭ್ಮನ್ ಗಿಲ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದರು. ಮೂರನೇ ವಿಕೆಟ್ ರೂಪದಲ್ಲಿ ರೋಹಿತ್ ವಿಕೆಟ್ ಪಡೆದ ಹಾರ್ಟ್ಲಿ ಭಾರತಕ್ಕೆ ಆಘಾತದ ಮೇಲೆ ಆಘಾತ ನೀಡಿದರು. ಆ ಬಳಿಕ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಅಕ್ಷರ್ ಪಟೇಲ್, ಕೆಎಲ್ ರಾಹುಲ್ ಅವರೊಂದಿಗೆ ಅಲ್ಪ ಪಾಲುದಾರಿಕೆಯನ್ನು ಮಾಡುವ ಮೂಲಕ ಇನ್ನಿಂಗ್ಸ್ಗೆ ಕೊಂಚ ಚೇತರಿಕೆ ನೀಡಿದರು. ಆದರೆ ಹಾರ್ಟ್ಲಿ ಈ ಇಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
ರನೌಟ್ಗೆ ಬಲಿಯಾದ ಜಡೇಜಾ
ಅಕ್ಷರ್ ಔಟಾದ ಬಳಿಕ ಬಂದ ಜಡೇಜಾ ಹಾಗೂ ರಾಹುಲ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಬೆನ್ ಸ್ಟೋಕ್ಸ್ ಮಿಂಚಿನ ವೇಗದಲ್ಲಿ ಚೆಂಡನ್ನು ಎಸೆದು ಜಡೇಜಾರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಭಾರತ ಕೇವಲ 119 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಲ್ಲಿಂದ ಜೊತೆಯಾದ ರವಿಚಂದ್ರನ್ ಅಶ್ವಿನ್ ಮತ್ತು ಕೆಎಸ್ ಭರತ್ ನಡುವೆ 59 ರನ್‌ಗಳ ಜೊತೆಯಾಟ ಬಂತು. ಹೀಗಾಗಿ ಈ ಇಬ್ಬರೂ ಪಂದ್ಯವನ್ನು 5 ನೇ ದಿನದವರೆಗೆ ಕೊಂಡೊಯ್ಯುತ್ತಾರೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಆಟ ಮುಗಿಯುವ 2 ಓವರ್‌ಗಳ ಮೊದಲು ಟಾಮ್ ಹಾರ್ಟ್ಲಿ ಎಸೆತದಲ್ಲಿ ಭರತ್ (28) ಕ್ಲೀನ್ ಬೌಲ್ಡ್ ಆದರು. ನಂತರ ಅವರ ಮುಂದಿನ ಓವರ್‌ನಲ್ಲಿ ಅಶ್ವಿನ್ ಕೂಡ ಸ್ಟಂಪ್ ಔಟ್ ಆದರು. ಕೊನೆಯ ವಿಕೆಟ್‌ಗಾಗಿ ಅರ್ಧ ಗಂಟೆ ಪಂದ್ಯವನ್ನು ವಿಸ್ತರಿಸಲಾಯಿತು. ಅಂತಿಮವಾಗಿ ಹಾರ್ಟ್ಲಿ ಕೊನೆಯ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು.
ಗೆಲುವಿನ ಹೀರೋ ಪೋಪ್
ಇದಕ್ಕೂ ಮೊದಲು, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 190 ರನ್‌ಗಳ ಮುನ್ನಡೆಗೆ ತಕ್ಕ ಉತ್ತರವನ್ನು ನೀಡಿದ ಒಲಿ ಪೋಪ್ ಇಂಗ್ಲೆಂಡ್ ಪರ ಪ್ರಚಂಡ ಹೋರಾಟ ನಡೆಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗಳಿಸಿದ ರನ್‌ಗಳಿಗೆ ಅರ್ಧದಷ್ಟು ರನ್ಗಳು ಪೋಪ್ ಬ್ಯಾಟ್ನಿಂದ ಬಂದವು. ಒಲಿ ಪೋಪ್ 278 ಎಸೆತಗಳನ್ನು ಎದುರಿಸಿ 21 ಬೌಂಡರಿ ಸಹಿತ 196 ರನ್ ಗಳಿಸಿದರು.ಪೋಪ್ ನಾಲ್ಕನೇ ದಿನ 148 ಸ್ಕೋರ್‌ನೊಂದಿಗೆ ಆಟವಾಡಲು ಪ್ರಾರಂಭಿಸಿ ತಂಡವನ್ನು 420 ರನ್‌ಗಳಿಗೆ ಕೊಂಡೊಯ್ದರು.
ಆದರೆ ದ್ವಿಶತಕ ಗಳಿಸಲು ಸಾಧ್ಯವಾಗದೆ 196 ರನ್ ಗಳಿಸಿ ಔಟಾದರು. ಈ ವೇಳೆ ಪೋಪ್ಗೆ, ಹಾರ್ಟ್ಲಿ (34) ಮತ್ತು ರೆಹಾನ್ ಅಹ್ಮದ್ (28) ರಿಂದ ಉತ್ತಮ ಸಾಥ್ ಸಿಕ್ಕಿತು. ಅವರ ಪ್ರಯತ್ನದ ಫಲವಾಗಿಯೇ ಇಂಗ್ಲೆಂಡ್ ತಂಡ ಭಾರತಕ್ಕೆ ನೀಡಿದ್ದ 190 ರನ್‌ಗಳ ಮುನ್ನಡೆಯನ್ನು ಮೀರಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ ಟೀಂ ಇಂಡಿಯಾಕ್ಕೆ 231 ರನ್‌ಗಳ ಗುರಿ ನೀಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Sun, 28 January 24