IND vs ENG: ಹೈದರಾಬಾದ್‌ನಲ್ಲಿ ಭಾರತ ಎಡವಿದ್ದೆಲ್ಲಿ? ಸೋಲಿನ ಕಥೆ ಹೇಳುತ್ತಿವೆ ತಂಡ ಮಾಡಿದ ಈ 4 ತಪ್ಪುಗಳು
IND vs ENG: ಟೆಸ್ಟ್ನ ಮೊದಲ ಮೂರು ದಿನ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಎಡವಿದ್ದು ಎಲ್ಲಿ? 231 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವ ವೇಳೆಯಲ್ಲಿ ಆಟಗಾರರು ಮಾಡಿದ ತಪ್ಪುಗಳೇನು? ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯರು ಸಪ್ಪೆ ಪ್ರದರ್ಶನ ನೀಡಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳು ತಂಡದ ಸೋಲಿನ ಕಥೆಯನ್ನು ಒಂದೊಂದಾಗಿ ಬಿಚ್ಚಿಟ್ಟಿವೆ.
ಭಾಝ್ ಬಾಲ್ ಕ್ರಿಕೆಟ್ ಮೂಲಕ ಟೀಂ ಇಂಡಿಯಾಕ್ಕೆ ಸೋಲುಣಿಸುವ ಇರಾದೆಯೊಂದಿಗೆ ಭಾರತಕ್ಕೆ ಕಾಲಿಟ್ಟಿದ್ದ ಇಂಗ್ಲೆಂಡ್ (India vs England) ತಂಡ ಮೊದಲ ಟೆಸ್ಟ್ನಲ್ಲೇ ತನ್ನ ಗುರಿ ಸಾಧಿಸಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಟೀಂ ಇಂಡಿಯಾವನ್ನು (Team India) 28 ರನ್‌ಗಳಿಂದ ಮಣಿಸಿದ ಆಂಗ್ಲರು ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಇಂಗ್ಲೆಂಡ್‌ನ ಈ ಗೆಲುವಿನಲ್ಲಿ ಒಲಿ ಪೋಪ್ (Ollie Pope) ಸಿಡಿಸಿದ 196 ರನ್‌ಗಳ ಅದ್ಭುತ ಇನ್ನಿಂಗ್ಸ್ ಹಾಗೂ ತಂಡದ ಯುವ ಸ್ಪಿನ್ನರ್ ಟಾಪ್ ಹಾರ್ಟ್ಲಿ (Tom Hartley) ಪಡೆದ 7 ವಿಕೆಟ್ಗಳು ಪ್ರಮುಖ ಪಾತ್ರವಹಿಸಿತು. ಅಷ್ಟಕ್ಕೂ ಟೆಸ್ಟ್ನ ಮೊದಲ ಮೂರು ದಿನ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಎಡವಿದ್ದು ಎಲ್ಲಿ? 231 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವ ವೇಳೆಯಲ್ಲಿ ಆಟಗಾರರು ಮಾಡಿದ ತಪ್ಪುಗಳೇನು? ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯರು ಸಪ್ಪೆ ಪ್ರದರ್ಶನ ನೀಡಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳು ತಂಡದ ಸೋಲಿನ ಕಥೆಯನ್ನು ಒಂದೊಂದಾಗಿ ಬಿಚ್ಚಿಟ್ಟಿವೆ.
ಸುವರ್ಣಾವಕಾಶ ಕೈತಪ್ಪಿತು
ಭಾರತ ತಂಡಕ್ಕೆ ಮೂರು ದಿನಗಳೊಳಗೆ ಪಂದ್ಯ ಗೆಲ್ಲುವ ಅವಕಾಶವಿದ್ದರೂ ಅದು ಕೈಗೂಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತ ತಂಡ ಬ್ಯಾಟಿಂಗ್ನಲ್ಲಿ ಗಮರ್ನಾಹ ಪ್ರದರ್ಶನ ನೀಡಿತು. ಆದರೆ ಓಲಿ ಪೋಪ್ ಅವರಂತೆ ತಂಡದ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಶತಕದಂಚಿನಲ್ಲಿ ಎಡವಿದರೆ, ನಾಯಕ ರೋಹಿತ್ ಶರ್ಮಾ ಕೂಡ ಉತ್ತಮ ಆರಂಭವನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಈ ನಾಲ್ವರಲ್ಲಿ ಒಬ್ಬರು ಬಿಗ್ ಇನ್ನಿಂಗ್ಸ್ ಆಡಿದ್ದರೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿಯೇ 550 ಅಥವಾ 600 ರನ್ ಗಳಿಸಬಹುದಾಗಿತ್ತು. ಇದು ಸಂಭವಿಸಿದ್ದರೆ ಬಹುಶಃ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಬ್ಯಾಟಿಂಗ್ ಮಾಡುವ ಅಗತ್ಯವೇ ಇರುತ್ತಿರಲಿಲ್ಲ.
IND vs ENG: 14 ವರ್ಷಗಳ ನಂತರ ಹೈದರಾಬಾದ್‌ನಲ್ಲಿ ಸೋತು ಬೇಡದ ದಾಖಲೆಗಳಿಗೆ ಕೊರಳೊಡ್ಡಿದ ಭಾರತ..!
ಕೆಟ್ಟ ಫೀಲ್ಡಿಂಗ್
ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪ್ರತಿ ಓವರ್‌ನಲ್ಲಿಯೂ ಸರಾಗವಾಗಿ ರನ್ ಬಿಟ್ಟುಕೊಟ್ಟಿತು. ತಂಡದ ಬಾಡಿ ಲಾಂಗ್ವೇಜ್ ಕೂಡ ಇದಕ್ಕೆ ಪೂರಕವಾಗಿತ್ತು. ಇದರ ಪರಿಣಾಮ ಇಂಗ್ಲೆಂಡ್ ತಂಡದ ಬಾಲಂಗೋಚಿಗಳು ಕೂಡ ನೀರು ಕುಡಿದಷ್ಟೇ ಸರಾಗವಾಗಿ ರನ್ ಕಲೆಹಾಕಿದರು. ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್ ಅವರು ಕೆಲವು ಸಂದರ್ಭಗಳಲ್ಲಿ ಮಿಸ್ ಫೀಲ್ಡಿಂಗ್ ಮಾಡಿದರೆ, ವೈಯಕ್ತಿಕ 110 ರನ್ಗಳಲ್ಲಿ ಒಲಿ ಪೋಪ್ ನೀಡಿದ್ದ ಸುಲಭ ಕ್ಯಾಚ್ ಅನ್ನು ಅಕ್ಷರ್ ಪಟೇಲ್ ಕೈಬಿಟ್ಟರು. ಜೀವದಾನವನ್ನು ಸದುಪಯೋಗಪಡಿಸಿಕೊಂಡ ಪೋಪ್, 196 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.
ರೋಹಿತ್, ಗಿಲ್, ಅಯ್ಯರ್ ಫ್ಲಾಪ್ ಶೋ
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ನಾಯಕ ರೋಹಿತ್ ಶರ್ಮಾ ಅವರು ತಮ್ಮ ಉತ್ತಮ ಆರಂಭವನ್ನು ಸತತ ಎರಡೂ ಇನ್ನಿಂಗ್ಸ್‌ಗಳಲ್ಲಿ ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ 24 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್ ಗಳಿಸಿ ಔಟಾದರು. ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಇನ್ನಷ್ಟು ನಿರಾಸೆ ಮೂಡಿಸಿದರು. ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ 23 ರನ್ ಗಳಿಸಿ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆಯೇ ಔಟಾದರು. ಅದೇ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಎನಿಸಿರುವ ಶ್ರೇಯಸ್ ಅಯ್ಯರ್ ಕೂಡ ಸ್ಪಿನ್ನರ್ಗಳ ಎದುರು ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ 35 ರನ್ ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಔಟಾದರು.
IND vs ENG: ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಭಾರತ; ಇಂಗ್ಲೆಂಡ್ಗೆ 28 ರನ್ ಜಯ
ರೋಹಿತ್ ನಾಯಕತ್ವ
ರೋಹಿತ್ ಶರ್ಮಾ ಸೀಮಿತ ಓವರ್ಗಳ ಸ್ವರೂಪಗಳಲ್ಲಿ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಅವರ ನಾಯಕತ್ವದ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಈ ಟೆಸ್ಟ್ನಲ್ಲಿಯೂ ಅದೇ ಪರಿಸ್ಥಿತಿ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಒಲಿ ಪೋಪ್ ಸೇರಿದಂತೆ ಆಂಗ್ಲ ಬ್ಯಾಟ್ಸ್‌ಮನ್‌ಗಳು ಟೀಂ ಇಂಡಿಯಾವನ್ನು ಬಗ್ಗುಬಡಿಯುತ್ತಿದ್ದಾಗ, ರೋಹಿತ್ ಶರ್ಮಾ ತಂತ್ರಗಾರಿಕೆ ಮಾಡುವ ಗೋಜಿಗೆ ಹೋಗಲಿಲ್ಲ. ಆಕ್ರಮಣಕಾರಿ ಫಿಲ್ಡ್ ಸೆಟ್ಟಿಂಗ್ ಕೂಡ ಕಾಣಿಸಲಿಲ್ಲ, ಅಥವಾ ಆಟಗಾರರ ಮನೋಬಲವನ್ನು ಹೆಚ್ಚಿಸುವಂತೆಯೂ ರೋಹಿತ್ ಕಾಣಿಸಿಕೊಳ್ಳಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಅವರ ನಾಯಕತ್ವ ಮತ್ತೊಮ್ಮೆ ಪ್ರಶ್ನಾರ್ಹವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ