IND vs ENG: ಜೂಲನ್ ಗೋಸ್ವಾಮಿಗೆ ಸರಣಿ ಗೆಲುವಿನ ಬೀಳ್ಕೊಟ್ಟ ಟೀಂ ಇಂಡಿಯಾ ವನಿತಾ ಬಳಗ..!

| Updated By: ಪೃಥ್ವಿಶಂಕರ

Updated on: Sep 24, 2022 | 10:51 PM

IND vs ENG: ವೃತ್ತಿಜೀವನದ ಕೊನೆಯ ಪಂದ್ಯದಲ್ಲೂ ಜೂಲನ್ ಗೋಸ್ವಾಮಿ ಕಳೆದ 20 ವರ್ಷಗಳಂತೆ ಪೂರ್ಣಪ್ರಮಾಣದಲ್ಲಿ ಪ್ರದರ್ಶನ ನೀಡಿ ಟೀಂ ಇಂಡಿಯಾಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.

IND vs ENG: ಜೂಲನ್ ಗೋಸ್ವಾಮಿಗೆ ಸರಣಿ ಗೆಲುವಿನ ಬೀಳ್ಕೊಟ್ಟ ಟೀಂ ಇಂಡಿಯಾ ವನಿತಾ ಬಳಗ..!
Indian Women's Cricket Team (1)
Follow us on

ಜೂಲನ್ ಗೋಸ್ವಾಮಿ (Jhulan Goswami) ತಮ್ಮ ವಿದಾಯವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದ ರೀತಿಯಲ್ಲೇ ಪಡೆದುಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯದಲ್ಲೂ ಜೂಲನ್ ಗೋಸ್ವಾಮಿ ಕಳೆದ 20 ವರ್ಷಗಳಂತೆ ಪೂರ್ಣಪ್ರಮಾಣದಲ್ಲಿ ಪ್ರದರ್ಶನ ನೀಡಿ ಟೀಂ ಇಂಡಿಯಾಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಲಾರ್ಡ್ಸ್‌ನಲ್ಲಿ ನಡೆದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಆತಿಥೇಯ ಇಂಗ್ಲೆಂಡ್ ತಂಡವನ್ನು ಬೌಲರ್‌ಗಳ ಬಲದಿಂದ 16 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಟೀಂ ಇಂಡಿಯಾ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದು ಮಾತ್ರವಲ್ಲದೆ ತನ್ನ ಯಶಸ್ವಿ ಲೆಜೆಂಡರಿ ಬೌಲರ್‌ಗೆ ಸ್ಮರಣೀಯ ವಿದಾಯವನ್ನೂ ನೀಡಿದೆ.

23 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವಿಪ್ ಮಾಡುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಯಾರೂ ನಿರೀಕ್ಷದ ರೀತಿಯ ಪ್ರದರ್ಶನ ನೀಡಿ, ಶ್ರೇಷ್ಠ ಆಟಗಾರ್ತಿ ಜೂಲನ್ ಗೋಸ್ವಾಮಿಗೆ ಗೆಲುವಿನ ಬೀಳ್ಕೊಡುಗೆ ನೀಡಿದೆ.

3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಟೀಂ ಇಂಡಿಯಾ ಕೇವಲ 169 ರನ್‌ಗಳಿಗೆ ಆಲೌಟ್ ಆಯಿತು. ಆದರೆ ತಂಡದ ಬೌಲರ್‌ಗಳು ಮಾತ್ರ ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಯುವ ವೇಗಿ ರೇಣುಕಾ ಠಾಕೂರ್ ಇಂಗ್ಲೆಂಡ್‌ ಬ್ಯಾಟಿಂಗ್ ವಿಭಾಗದ ಬೆನ್ನೇಲುಬು ಮುರಿದರು. ಎರಡನೇ ODIನಲ್ಲಿ 4 ವಿಕೆಟ್ ಪಡೆದಿದ್ದ ಠಾಕೂರ್, ಈ ಪಂದ್ಯದಲ್ಲಿಯೂ ಇಂಗ್ಲೆಂಡ್‌ನ ಅಗ್ರ ಕ್ರಮಾಂಕವನ್ನು ಬೇಗನೇ ಪೆವಿಲಿಯನ್​ಗಟ್ಟಿದ್ದಲ್ಲದೆ, ಪ್ರಮುಖ 4 ವಿಕೆಟ್‌ ಪಡೆದರು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಜೂಲನ್ ಗೋಸ್ವಾಮಿ ಅವರ ಖಾತೆಗೆ ಈ ಪಂದ್ಯದಲ್ಲೂ ಎರಡು ವಿಕೆಟ್‌ ಸೇರಿದವು. ಗೋಸ್ವಾಮಿ ಮೊದಲು 18 ವರ್ಷದ ಬ್ಯಾಟರ್ ಆಲಿಸ್ ಕ್ಯಾಪ್ಸಿ ಅವರ ವಿಕೆಟ್ ಪಡೆದರೆ, ನಂತರ ಕೇಟ್ ಕ್ರಾಸ್ ಅವರನ್ನು ಕ್ಲಿನ್ ಬೌಲ್ಡ್ ಮಾಡಿದರು.

ಇದಲ್ಲದೆ, ಜೂಲನ್ ಫೀಲ್ಡಿಂಗ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ, ರಾಜೇಶ್ವರಿ ಗಾಯಕ್ವಾಡ್ ಅವರ ಓವರ್​ನಲ್ಲಿ ಸ್ಲಿಪ್ನಲ್ಲಿ ಉತ್ತಮ ಕ್ಯಾಚ್ ಹಿಡಿದರು. ಎಲ್ಲಾ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ, ಇಂಗ್ಲೆಂಡ್ ತಂಡದ ಪ್ರಮುಖ 7 ವಿಕೆಟ್​ಗಳನ್ನು 65 ರನ್‌ಗಳಿಗೆ ಉರುಳಿಸಿದರು. ನಂತರ ತಂಡದ ನಾಯಕಿ ಆಮಿ ಜೋನ್ಸ್ ಮತ್ತು ಚಾರ್ಲಿ ಡೀನ್ ಉತ್ತಮ ಜೊತೆಯಾಟದೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ.

ಬ್ಯಾಟ್ಸ್‌ಮನ್‌ಗಳ ಫ್ಲಾಪ್ ಶೋ

ಈಗಾಗಲೇ ಸರಣಿ ವಶಪಡಿಸಿಕೊಂಡು ಇತಿಹಾಸ ಸೃಷ್ಟಿಸಿರುವ ಭಾರತ ತಂಡಕ್ಕೆ ಚೊಚ್ಚಲ ಬಾರಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಸಿಕ್ಕಿತ್ತು. ಐದು ವರ್ಷಗಳ ನಂತರ ಲಾರ್ಡ್ಸ್‌ನಲ್ಲಿ ಮುಖಾಮುಖಿಯಾಗಿದ್ದ ಎರಡೂ ತಂಡಗಳಿಗೆ ಈ ಅವಕಾಶ ಸಿಕ್ಕಿದ್ದು ವಿಶೇಷ. ಆದರೆ ಎರಡು ದಿನಗಳ ಹಿಂದೆ ಬ್ಯಾಟಿಂಗ್​ನಲ್ಲಿ ತೋರಿದ್ದ ಅದ್ಭುತ ಪ್ರದರ್ಶನವನ್ನು ಈ ಪಂದ್ಯದಲ್ಲಿ ತೋರುವಲ್ಲಿ ಭಾರತ ತಂಡ ಎಡವಿತು. ಇಡೀ ತಂಡ 45.4 ಓವರ್‌ಗಳಲ್ಲಿ ಕೇವಲ 169 ರನ್‌ಗಳಿಗೆ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಮಾತ್ರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ, ಇಂಗ್ಲೆಂಡ್ ವಿರುದ್ಧ ಅವಶ್ಯಕ ಅರ್ಧಶತಕ ಸಿಡಿಸಿದರು.

ದೀಪ್ತಿ ಆಲ್​​ರೌಂಡರ್ ಆಟ

ಭಾರತ ಕೇವಲ 29 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ದೀಪ್ತಿ ಮತ್ತು ಸ್ಮೃತಿ ನಡುವೆ 58 ರನ್​ಗಳ ಜೊತೆಯಾಟವಿತ್ತು. ಸ್ಮೃತಿ ಅರ್ಧಶತಕ ಪೂರೈಸಿದ ಕೂಡಲೇ ಔಟಾದರು. ಆದರೆ ದೀಪ್ತಿ ಕೊನೆಯವರೆಗೂ ನಿಂತು ಬಲಿಷ್ಠ ಅರ್ಧಶತಕ ಬಾರಿಸಿ ಭಾರತವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು. ದೀಪ್ತಿ ಅಜೇಯ 68 ರನ್ ಗಳಿಸಿದರು. ಇಂಗ್ಲೆಂಡ್ ಪರ ವೇಗಿ ಕೇಟ್ ಕ್ರಾಸ್ ಗರಿಷ್ಠ 4 ವಿಕೆಟ್ ಪಡೆದರು.

Published On - 10:38 pm, Sat, 24 September 22