ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಹೈವೋಲ್ಟೇಜ್ ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಂಗ್ಲರು ರೋಹಿತ್ ಪಡೆಯ ಅಬ್ಬರಕ್ಕೆ 100 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಇಂಗ್ಲೆಂಡ್ ತಂಡವನ್ನು 100 ರನ್ಗಳಿಂದ ಮಣಿಸಿದ ಟೀಂ ಇಂಡಿಯಾಕ್ಕೆ ಏಕದಿನ ವಿಶ್ವಕಪ್ನಲ್ಲಿ ಆಂಗ್ಲರ ವಿರುದ್ಧ ಇದು ದಾಖಲೆಯ ಗೆಲುವಾಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ ಸೋಲುಗಳಿಂದ ತತ್ತರಿಸಿರುವ ಇಂಗ್ಲೆಂಡ್ ಐದನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಹಾಗೆಯೇ ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿಶ್ವಕಪ್ ಪ್ರಯಾಣವೂ ಮುಗಿದಿದೆ ಎಂದೇ ಹೇಳಬಹುದು.
ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಿರೀಕ್ಷೆಯಂತೆ ಇಂಗ್ಲೆಂಡ್ ಭಾರತವನ್ನು 229 ರನ್‌ಗಳಿಗೆ ಸೀಮಿತಗೊಳಿಸಿತು. ಹಾಗಾಗಿ ಈ ಗುರಿಯನ್ನು ಇಂಗ್ಲೆಂಡ್ ತಂಡ ಸುಲಭವಾಗಿ ಸಾಧಿಸಲಿದೆ ಎಂದು ಕ್ರೀಡಾಭಿಮಾನಿಗಳು ಭಾವಿಸಿದ್ದರು. ಆದರೆ ಭಾರತದ ಬೌಲರ್‌ಗಳು ಇಂಗ್ಲೆಂಡಿನ ಬ್ಯಾಟಿಂಗ್ ವಿಭಾಗವನ್ನು ಅಕ್ಷರಶಃ ಕಾಡಿದರು. ಗೆಲುವಿಗಾಗಿ 230 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಬಂದಷ್ಟೇ ವೇಗವಾಗಿ ಪೆವಲಿಯನ್ ಸೇರಿಕೊಂಡಿತು. ತಂಡದ ಯಾವೊಬ್ಬ ಬ್ಯಾಟ್ಸ್ಮನ್ಗೂ 30 ಕ್ಕಿಂತ ಹೆಚ್ಚು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್ಗಳ ಕರಾರುವಕ್ಕಾದ ದಾಳಿಗೆ ನಲುಗಿದ ಇಂಗ್ಲೆಂಡ್ 129 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕಳೆದ ಟಿ20 ವಿಶ್ವಕಪ್ನ 10 ವಿಕೆಟ್ಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ.
8 ತಂಡಗಳ ನಡುವೆ ಪಾಕಿಸ್ತಾನದಲ್ಲಿ ನಡೆಯಲ್ಲಿದೆ ಚಾಂಪಿಯನ್ಸ್ ಟ್ರೋಫಿ
ಭಾರತ ಪರ ರೋಹಿತ್ ಶರ್ಮಾ (87), ಕೆಎಲ್ ರಾಹುಲ್ (39) ಮತ್ತು ಸೂರ್ಯಕುಮಾರ್ ಯಾದವ್ (49) ಅಮೋಘ ಆಟವಾಡಿದರು. ಈ ಮೂವರನ್ನು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಕಳೆದ ಪಂದ್ಯದಲ್ಲಿ 95 ರನ್ಗಳ ಇನ್ನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿಗೆ ಈ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಶುಭ್ಮನ್ ಗಿಲ್ 9, ಶ್ರೇಯಸ್ ಅಯ್ಯರ್ 4, ರವೀಂದ್ರ ಜಡೇಜಾ 8, ಮೊಹಮ್ಮದ್ ಶಮಿ 1, ಜಸ್ಪ್ರೀತ್ ಬುಮ್ರಾ 16 ರನ್ ಗಳಿಸಿ ಔಟಾದರೆ, ಕುಲ್ದೀಪ್ ಯಾದವ್ 9 ರನ್ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3, ಕ್ರಿಸ್ ವೋಕ್ಸ್ 2, ಆದಿಲ್ ರಶೀದ್ 2 ಮತ್ತು ಮಾರ್ಕ್ ವುಡ್ 1 ವಿಕೆಟ್ ಪಡೆದರು.
ಭಾರತ ನೀಡಿದ ಸುಲಭ ಸವಾಲನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ಜಾನಿ ಬೈರ್‌ಸ್ಟೋ ಮತ್ತು ಡೇವಿಡ್ ಮಲಾನ್ ಉತ್ತಮ ಆರಂಭ ಪಡೆದರು. ಆದರೆ ಜಸ್ಪ್ರೀತ್ ಬುಮ್ರಾ ಮ್ಯಾಜಿಕ್ಗೆ ಈ ಜೊತೆಯಾಟ ಮುರಿದು ಬಿತ್ತು. ಆರಂಭಿಕ ಮಲಾನ್ ವಿಕೆಟ್ ಉರುಳಿಸಿದ ಬುಮ್ರಾ, ಆ ಬಳಿಕ ಬಂದ ಜೋ ರೂಟ್ ಅವರನ್ನು ಶೂನ್ಯಕ್ಕೆ ಪೆವಲಿಯನ್ಗಟ್ಟಿದರು. ಆ ಬಳಿಕ ಶಮಿ ಕೂಡ ಸತತ ಎರಡು ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್ ಮತ್ತು ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿದರು. ಕುಲ್ದೀಪ್ ಯಾದವ್ಗೆ ಜೋಸ್ ಬಟ್ಲರ್ ಬಲಿಯಾಗುವುದರೊಂದಿಗೆ ಅರ್ಧದಷ್ಟು ಇಂಗ್ಲೆಂಡ್ ತಂಡ ಕೇವಲ 54 ರನ್‌ಗಳಿಗೆ ಪೆವಿಲಿಯನ್ ಸೇರಿತು.
ಮೂರನೇ ಬಲಿಯಾಗಿ ಮೊಹಮ್ಮದ್ ಶಮಿ ಮೊಯಿನ್ ಅಲಿಯವರನ್ನು ಔಟ್ ಮಾಡಿದರೆ, ಕ್ರಿಸ್ ವೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ಏಳನೇ ಹೊಡೆತ ನೀಡಿದರು. 27 ರನ್‌ಗಳಿಸಿ ತಂಡದ ಪರ ಏಕಾಂಹಿ ಹೋರಾಟ ನೀಡಿದ ಲಿವಿಂಗ್‌ಸ್ಟೋನ್‌ರನ್ನು ಔಟ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಎಂಟನೇ ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಅವರು ಆದಿಲ್ ರಶೀದ್ ಅವರನ್ನು ಔಟ್ ಮಾಡಿ ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಪಡೆದರು. ಕೊನೆಯ ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:25 pm, Sun, 29 October 23