ಆರು ದಿನಗಳ ಸುದೀರ್ಘ ವಿರಾಮದ ನಂತರ ಟೀಂ ಇಂಡಿಯಾ 2023ರ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಬಲಿಷ್ಠ ಇಂಗ್ಲೆಂಡ್ ತಂಡವನ್ನು (India vs England) ಎದುರಿಸುತ್ತಿದೆ. ಈ ಪಂದ್ಯ ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಒಂದೆಡೆ ಭಾರತ ಗೆದ್ದರೆ, ಅದರ ಸೆಮೀಸ್ ಹಾದಿ ಸುಗಮಗೊಳ್ಳಲಿದೆ. ಇಂಗ್ಲೆಂಡ್ ಗೆದ್ದರೆ, ಅದರ ಸೆಮೀಸ್ ಕನಸು ಜೀವಂತವಾಗಿರಲಿದೆ. ಹೀಗಾಗಿ ಉಭಯ ತಂಡಗಳು ತಮ್ಮ ಬಲಿಷ್ಠ ಆಡುವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯಲ್ಲಿವೆ. ಆದರೆ ಟೀಂ ಇಂಡಿಯಾಕ್ಕೆ ಮಾತ್ರ ಹಾರ್ದಿಕ್ ಪಾಂಡ್ಯ ಅಲಭ್ಯತೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಹೀಗಾಗಿ ರೋಹಿತ್ (Rohit Sharma) ಯಾವ ತಂಡವನ್ನು ಕಟ್ಟಿಕೊಂಡು ಅಖಾಡಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ವಾಸ್ತವವಾಗಿ ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇಲ್ಲದೆ ಕಣಕ್ಕಿಳಿದಿತ್ತು. ಅಕ್ಟೋಬರ್ 29 ರಂದು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ ನಡೆಯಲಿದೆ. ಅಂದು ಕೂಡ ಹಾರ್ದಿಕ್ ಪಾಂಡ್ಯ ಇಲ್ಲದೆ ತಂಡ ಆಡಲಿದೆ. ಇಂಗ್ಲೆಂಡ್ ವಿರುದ್ಧ ಆಡುವ ಹನ್ನೊಂದರ ಆಯ್ಕೆಯಲ್ಲಿ ಟೀಂ ಇಂಡಿಯಾ ಸ್ವಲ್ಪ ಕಷ್ಟಪಡಲಿದೆ. ಲಕ್ನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ತಂಡ ಆಯ್ಕೆ ಮಾಡುವುದೇ ದೊಡ್ಡ ಸವಾಲಿನ ನಿರ್ಧಾರವಾಗಲಿದೆ.
IND vs ENG: 20 ವರ್ಷಗಳಿಂದ ಗೆದ್ದೇ ಇಲ್ಲ! ಆಂಗ್ಲರ ಎದುರು ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?
ಲಕ್ನೋದ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಐಪಿಎಲ್ 2023 ರಲ್ಲಿ ಲಕ್ನೋ ವಿಕೆಟ್ ನಿಧಾನವಾಗಿತ್ತು. ಆದರೆ ವಿಶ್ವಕಪ್‌ಗಾಗಿ ಹೊಸ ಪಿಚ್ ತಯಾರಿಸಲಾಗಿದೆ. ಇಲ್ಲಿ 3 ವಿಶ್ವಕಪ್ ಪಂದ್ಯಗಳು ನಡೆದಿವೆ. ಇದರಲ್ಲಿ ವೇಗದ ಬೌಲರ್‌ಗಳು 27 ವಿಕೆಟ್ ಪಡೆದಿದ್ದರೆ, ಸ್ಪಿನ್ನರ್‌ಗಳು 15 ವಿಕೆಟ್ ಪಡೆದಿದ್ದಾರೆ. ಇದರಿಂದ ತಿಳಿಯುವುದೆನೇಂದರೆ ಈ ವಿಕೆಟ್ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ ಎಂಬುದು. ಹೀಗಾಗಿ ಸಿರಾಜ್ ಮತ್ತು ಶಮಿ ಇಬ್ಬರೂ ಈ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ರೋಹಿತ್ ಈ ಪಿಚ್ನ ಹಿಂದಿನ ದಾಖಲೆಗಳಿಗೆ ಹೆಚ್ಚು ಒತ್ತು ನೀಡಿದರೆ, ಆಗ ತಂಡದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ಮೊಹಮ್ಮದ್ ಶಮಿ ರೂಪದಲ್ಲಿ ಹೆಚ್ಚುವರಿ ವೇಗದ ಬೌಲರ್‌ಗೆ ಮಣೆ ಹಾಕಿತ್ತು. ಆ ಪಂದ್ಯದಲ್ಲಿ ಶಮಿ 5 ವಿಕೆಟ್ ಪಡೆದಿದ್ದರು. ಈ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲದ ಕಾರಣ ಭಾರತ 5 ಬೌಲರ್‌ಗಳೊಂದಿಗೆ ಫೀಲ್ಡಿಂಗ್ ಮಾಡಿದ್ದು ಇದೇ ಮೊದಲು. ಲಕ್ನೋದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಏಕನಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯಲಿದ್ದು, ಹಿಂದಿನ ದಾಖಲೆಗಳನ್ನು ನೋಡಿದಾಗ ಈ ವಿಕೆಟ್ ಸ್ಪಿನ್‌ಗೆ ಸಹಕಾರಿಯಾಗುವ ನಿರೀಕ್ಷೆಯಿದೆ. ಆದರೆ, ಲಕ್ನೋದಲ್ಲಿ ನಡೆದ ಈ ವಿಶ್ವಕಪ್‌ನ ಕೊನೆಯ ಮೂರು ಪಂದ್ಯಗಳಲ್ಲಿ ವೇಗದ ಬೌಲರ್‌ಗಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಆರ್ ಅಶ್ವಿನ್ ರೂಪದಲ್ಲಿ ಹೆಚ್ಚುವರಿ ಸ್ಪಿನ್ನರ್ ಆಯ್ಕೆ ಮಾಡುವ ಅವಕಾಶವನ್ನು ಟೀಂ ಇಂಡಿಯಾ ಹೊಂದಿದೆ. ಆದರೆ ಇದಕ್ಕಾಗಿ ತಂಡದಿಂದ ವೇಗಿಗಳನ್ನು ಕೈಬಿಡಬೇಕಾಗುತ್ತದೆ. ಏಕೆಂದರೆ ತಂಡದ ನಿರ್ವಹಣೆಯು ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡುವ ಗೋಜಿಗೆ ಹೋಗುವ ಸಾಧ್ಯತೆ ಇಲ್ಲ. ಹೀಗಾಗಿ ಶಮಿ ಅಥವಾ ಸಿರಾಜ್ ಈ ಇಬ್ಬರಲ್ಲಿ ಒಬ್ಬರು ತಂಡದಿಂದ ಹೊರನಡೆಯಬೇಕಾಗುತ್ತದೆ.
ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾದಾಗ ನಾಯಕ ರೋಹಿತ್ ಶಮಿ ಕಡೆಗೆ ಒಲವು ತೋರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಸಿರಾಜ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪ್ರತಿ ಪಂದ್ಯದಲ್ಲೂ ಪವರ್ ಪ್ಲೇನಲ್ಲಿ ಅಧಿಕ ರನ್ ನೀಡಿದ್ದಾರೆ. ವಿಕೆಟ್ ಕೂಡ ತೆಗೆಯುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಲಯ ಕಂಡುಕೊಂಡಿದ್ದರು. ಆದರೆ ಈ ಪಂದ್ಯದಲ್ಲಿ ಶಮಿ ಮಾಡಿದ್ದನ್ನು ನೋಡಿದರೆ ಎರಡನೇ ಪಂದ್ಯದಲ್ಲಿ ಅವರಿಗೆ ಅವಕಾಶ ಕೊಟ್ಟರೆ ತಪ್ಪಾಗುವುದಿಲ್ಲ. ಮೊಹಮ್ಮದ್ ಶಮಿ ನಿಧಾನಗತಿಯ ವಿಕೆಟ್‌ಗಳಲ್ಲಿ ಪರಿಣಾಮಕಾರಿ. ಇಬ್ಬರಲ್ಲಿ ಒಬ್ಬರನ್ನು ಹೊರಗೆ ಕಳುಹಿಸಲು ರೋಹಿತ್ ನಿರ್ಧರಿಸಿದರೆ, ಸಿರಾಜ್ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:51 pm, Sat, 28 October 23