IND vs ENG: 112 ವರ್ಷಗಳ ಹಳೆಯ ದಾಖಲೆ ಸರಿಗಟ್ಟಲಿದೆಯಾ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Feb 29, 2024 | 1:19 PM

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ ಕೊನೆಯ ಪಂದ್ಯಕ್ಕೂ ಮುನ್ನ ಸರಣಿಯನ್ನು ವಶಪಡಿಸಿಕೊಂಡಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಕೊನೆಯ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯ.

IND vs ENG: 112 ವರ್ಷಗಳ ಹಳೆಯ ದಾಖಲೆ ಸರಿಗಟ್ಟಲಿದೆಯಾ ಟೀಮ್ ಇಂಡಿಯಾ
Team India
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದರೆ, ಉಳಿದ ಮೂರು ಪಂದ್ಯಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ 5ನೇ ಪಂದ್ಯಕ್ಕಾಗಿ ಸಜ್ಜಾಗಿದೆ.

ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಗೆಲುವು ದಾಖಲಿಸಿದರೆ, ಬೃಹತ್ ದಾಖಲೆಯೊಂದನ್ನು ಬರೆಯಬಹುದು. ಅದು ಕೂಡ 112 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

112 ವರ್ಷಗಳ ಹಳೆಯ ದಾಖಲೆ:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯನ್ನು 4-1ರಿಂದ ವಶಪಡಿಸಿಕೊಳ್ಳಲಿದೆ. ಭಾರತ ತಂಡವು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 112 ವರ್ಷಗಳ ನಂತರ ಎರಡನೇ ಬಾರಿಗೆ 5 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಸೋತು, ಆ ಬಳಿಕ 4-1 ಅಂತರದಿಂದ ಸರಣಿ ಗೆದ್ದ ವಿಶೇಷ ದಾಖಲೆ ಟೀಮ್ ಇಂಡಿಯಾ ಪಾಲಾಗಲಿದೆ.

ಇದಕ್ಕೂ ಮುನ್ನ 1912ರಲ್ಲಿ ಇಂಗ್ಲೆಂಡ್ ತಂಡ ಇಂತಹದೊಂದು ಸಾಧನೆ ಮಾಡಿತ್ತು. ಇದಾದ ಬಳಿಕ ಯಾವುದೇ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತು, ಆ ಬಳಿಕ 4-1 ಅಂತರದಿಂದ ಸರಣಿ ಗೆದ್ದಿಲ್ಲ. ಇದೀಗ 112 ವರ್ಷಗಳ ಬಳಿಕ ಅಂತಹದೊಂದು ಸಾಧನೆ ಮಾಡುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ಒಂದು ವೇಳೆ ಟೀಮ್ ಇಂಡಿಯಾ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ, 4-1 ಅಂತರದಿಂದ ಸರಣಿ ಗೆದ್ದರೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡ ಎನಿಸಿಕೊಳ್ಳಲಿದೆ. ಇದಕ್ಕೂ ಮುನ್ನ 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತು ಆಸ್ಟ್ರೇಲಿಯಾ ಆ ಬಳಿಕ 4-1 ಅಂತರದಿಂದ 2 ಬಾರಿ ಸರಣಿ ಗೆದ್ದಿತ್ತು.

ಇದಾದ ಬಳಿಕ 1912 ರಲ್ಲಿ ಇಂಗ್ಲೆಂಡ್ ಇಂತಹದೊಂದು ಸಾಧನೆ ಮಾಡಿತ್ತು. ಇದೀಗ ಈ ಸಾಧನೆ ಮಾಡಿದ ಮೂರನೇ ತಂಡ ಎನಿಸಿಕೊಳ್ಳಲು ಟೀಮ್ ಇಂಡಿಯಾಗೆ ಒಂದು ಗೆಲುವಿನ ಅಗತ್ಯತೆಯಿದೆ. ಅದರಂತೆ ಧರ್ಮಶಾಲಾದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.

ಇದನ್ನೂ ಓದಿ: IPL 2024: ಇಬ್ಬರು ಭಾರತೀಯರು: 10 ತಂಡಗಳ ಕೋಚ್​ ಫೈನಲ್​

ಇಂಗ್ಲೆಂಡ್ ಟೆಸ್ಟ್ ತಂಡ: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ಕೀಪರ್), ಟಾಮ್ ಹಾರ್ಟ್ಲಿ, ಒಲೀ ರಾಬಿನ್ಸನ್, ಜೇಮ್ಸ್ ಅ್ಯಂಡರ್ಸನ್, ಶೊಯೆಬ್ ಬಶೀರ್, ಮಾರ್ಕ್ ವುಡ್, ರೆಹಾನ್ ಅಹ್ಮದ್, ಡೇನಿಯಲ್ ಲಾರೆನ್ಸ್ , ಗಸ್ ಅಟ್ಕಿನ್ಸನ್.