Cameron Green: ಏಕಾಂಗಿ ಹೋರಾಟದೊಂದಿಗೆ ಭರ್ಜರಿ ಶತಕ ಬಾರಿಸಿದ ಗ್ರೀನ್
New Zealand vs Australia, 1st Test: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ನ್ಯೂಝಿಲೆಂಡ್ ತಂಡ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಕಿವೀಸ್ ಪರ ಮ್ಯಾಟ್ ಹೆನ್ರಿ ಕರಾರುವಾಕ್ ದಾಳಿ ಸಂಘಟಿಸಿದರೆ, ಆಸ್ಟ್ರೇಲಿಯಾ ಪರ ಕ್ಯಾಮರೋನ್ ಗ್ರೀನ್ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ.
Updated on: Feb 29, 2024 | 12:16 PM

ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಕ್ಯಾಮರೋನ್ ಗ್ರೀನ್ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಟಿಮ್ ಸೌಥಿ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 89 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಸೀಸ್ ಪಡೆಗೆ ಕ್ಯಾಮರೋನ್ ಗ್ರೀನ್ ಆಸರೆಯಾಗಿ ನಿಂತರು. ಎಚ್ಚರಿಕೆಯೊಂದಿಗೆ ಇನಿಂಗ್ಸ್ ಕಟ್ಟಿದ ಗ್ರೀನ್ ರನ್ಗಳಿಸುತ್ತಾ ಸಾಗಿದರು.

ಒಂದೆಡೆ ಕ್ಯಾಮರೋನ್ ಗ್ರೀನ್ ಕ್ರೀಸ್ ಕಚ್ಚಿ ನಿಂತರೆ, ಮತ್ತೊಂದೆಡೆ ವಿಕೆಟ್ ಕಬಳಿಸುವಲ್ಲಿ ನ್ಯೂಝಿಲೆಂಡ್ ಬೌಲರ್ಗಳು ಯಶಸ್ವಿಯಾದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಕ್ಯಾಮರೋನ್ ಗ್ರೀನ್ 155 ಎಸೆತಗಳಲ್ಲಿ 16 ಫೋರ್ಗಳೊಂದಿಗೆ ಶತಕ ಸಿಡಿಸಿದರು.

ಕ್ಯಾಮರೋನ್ ಗ್ರೀನ್ (103) ಈ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದಲ್ಲಿ 9 ವಿಕೆಟ್ ಕಳೆದುಕೊಂಡು 279 ರನ್ ಕಲೆಹಾಕಿದೆ. ಈ ಮೂಲಕ ಮೊದಲ ದಿನದಾಟದಲ್ಲೇ ಆಸ್ಟ್ರೇಲಿಯಾ ಆಲೌಟ್ ಆಗುವುದನ್ನು ತಡೆಯುವಲ್ಲಿ ಗ್ರೀನ್ ಯಶಸ್ವಿಯಾಗಿದ್ದಾರೆ.

ಇನ್ನು ನ್ಯೂಝಿಲೆಂಡ್ ಮ್ಯಾಟ್ ಹೆನ್ರಿ 4 ವಿಕೆಟ್ ಪಡೆದರೆ, ವಿಲಿಯಮ್ ಹಾಗೂ ಸ್ಕಾಟ್ ಕುಗ್ಗೆಲಿನ್ ತಲಾ 2 ವಿಕೆಟ್ ಕಬಳಿಸಿದ್ದಾರೆ. ಸದ್ಯ ಕ್ರೀಸ್ನಲ್ಲಿ ಕ್ಯಾಮರೋನ್ ಗ್ರೀನ್ (103) ಹಾಗೂ ಜೋಶ್ ಹ್ಯಾಝಲ್ವುಡ್ ಇದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
