
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಜೂನ್ 20 ರಿಂದ ಆರಂಭವಾಗಲಿರುವ ಈ ಸರಣಿಗಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಟೀಮ್ ಇಂಡಿಯಾ ಮುಂದಿರುವ ದೊಡ್ಡ ಸವಾಲು ಪ್ಲೇಯಿಂಗ್ ಇಲೆವೆನ್ನ ಸಂಯೋಜನೆ. ಏಕೆಂದರೆ ಭಾರತ ಟೆಸ್ಟ್ ತಂಡದ ಆಧಾರಸ್ತಂಭಗಳಾಗಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದೆ.
ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸ್ಥಾನಗಳಲ್ಲಿ ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಇದೆ. ಅದರಂತೆ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಏಕೆಂದರೆ ರಾಹುಲ್ ಈ ಹಿಂದೆ ಇಂಗ್ಲೆಂಡ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಅಭ್ಯಾಸ ಪಂದ್ಯಗಳಲ್ಲೂ ಆರಂಭಿಕನಾಗಿ ಕಣಕ್ಕಿಳಿದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಮತ್ತೋರ್ವ ಅನುಭವಿ ದಾಂಡಿಗ ಕರುಣ್ ನಾಯರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕರುಣ್ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದು, ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಅವರು ಬ್ಯಾಟ್ ಬೀಸಬಹುದು. ಹಾಗೆಯೇ ವಿರಾಟ್ ಕೊಹ್ಲಿಯಿಂದ ತೆರವಾಗಿರುವ 4ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಕಣಕ್ಕಿಳಿಸುವ ಸಾಧ್ಯತೆಯಿದೆ.
ಈ ಹಿಂದೆ ಗಿಲ್ 3ನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಸಲುವಾಗಿ ಶುಭ್ಮನ್ ಗಿಲ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇನ್ನು ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಖಚಿತ. ಹಾಗೆಯೇ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕಾರಣ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ಗೆ ಚಾನ್ಸ್ ನೀಡುವ ಸಾದ್ಯತೆ ಹೆಚ್ಚು.
ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಅವರನ್ನು ಆಡುವ ಬಳಗದಲ್ಲಿ ಎದುರು ನೋಡಬಹುದು. ಹಾಗೆಯೇ ಪರಿಪೂರ್ಣ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಸ್ಥಾನ ಪಡೆಯಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ.
ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ