IND vs ENG: ಓಲ್ಡ್ ಟ್ರಾಫರ್ಡ್ ಮೈದಾನವೆಂದರೆ ಕೊಹ್ಲಿ ಬಳಗ ಹೆದರುವುದ್ಯಾಕೆ? ಇಲ್ಲಿ ಗೆಲ್ಲುವುದು ಸುಲಭದ ಮಾತಲ್ಲ!

| Updated By: ಪೃಥ್ವಿಶಂಕರ

Updated on: Sep 09, 2021 | 4:10 PM

IND vs ENG: ಈ ಮೈದಾನದಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 9 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ ಟೀಮ್ ಇಂಡಿಯಾ ಯಾವುದೇ ಗೆಲುವು ಪಡೆದಿಲ್ಲ, ಆದರೆ 4 ಬಾರಿ ಸೋತಿದೆ.

IND vs ENG: ಓಲ್ಡ್ ಟ್ರಾಫರ್ಡ್ ಮೈದಾನವೆಂದರೆ ಕೊಹ್ಲಿ ಬಳಗ ಹೆದರುವುದ್ಯಾಕೆ? ಇಲ್ಲಿ ಗೆಲ್ಲುವುದು ಸುಲಭದ ಮಾತಲ್ಲ!
ಓಲ್ಡ್ ಟ್ರಾಫರ್ಡ್ ಮೈದಾನ
Follow us on

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯು ತನ್ನ ಅಂತಿಮ ಹಂತವನ್ನು ತಲುಪಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ ಮತ್ತು ಈಗ 14 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಲು ತನ್ನ ಕಠಿಣ ಸವಾಲನ್ನು ಜಯಿಸಬೇಕಾಗಿದೆ. ಸರಣಿಯ ಕೊನೆಯ ಪಂದ್ಯವು ಸೆಪ್ಟೆಂಬರ್ 10 ಶುಕ್ರವಾರದಿಂದ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭವಾಗುತ್ತಿದೆ. ಇಲ್ಲಿ ಗೆಲುವಿನೊಂದಿಗೆ, ಟೀಮ್ ಇಂಡಿಯಾ 2007 ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ. ಪಂದ್ಯವು ಡ್ರಾ ಆದರೂ ಸಹ ಗೆಲುವು ಟೀಮ್ ಇಂಡಿಯಾದ ಕೈಯಲ್ಲಿ ಇರಲಿದೆ. ಆದರೆ ಅದು ಅಷ್ಟು ಸುಲಭವಲ್ಲ, ಏಕೆಂದರೆ ಓಲ್ಡ್ ಟ್ರಾಫರ್ಡ್ ನಲ್ಲಿ ಭಾರತದ ಇತಿಹಾಸ ತುಂಬಾ ಕಳಪೆಯಾಗಿದೆ.

ನಾಟಿಂಗ್ ಹ್ಯಾಮ್​ನಿಂದ ಆರಂಭವಾದ ಟೆಸ್ಟ್ ಸರಣಿಯಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿದೆ. ಮೊದಲ ಟೆಸ್ಟ್ ನಲ್ಲಿಯೇ ಟೀಂ ಇಂಡಿಯಾ ಗೆಲುವಿನ ಅವಕಾಶವನ್ನು ಹೊಂದಿತ್ತು. ಆದರೆ ಕೊನೆಯ ದಿನ ಮಳೆ ಈ ಅವಕಾಶವನ್ನು ಕಸಿದುಕೊಂಡಿತು. ಇದರ ನಂತರ, ತಂಡವು ಲಾರ್ಡ್ಸ್‌ನಲ್ಲಿ ಪ್ರಚಂಡ ಆಟವನ್ನು ತೋರಿಸುವ ಮೂಲಕ ಇಂಗ್ಲೆಂಡ್ ಅನ್ನು ಸೋಲಿಸಿತು ಮತ್ತು ಸರಣಿಯಲ್ಲಿ ಮುನ್ನಡೆ ಸಾಧಿಸಿತು. ಆದಾಗ್ಯೂ, ಲೀಡ್ಸ್​ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ, ಆತಿಥೇಯ ಇಂಗ್ಲೆಂಡ್ ಮರಳಿ ಬಂದು ಭಾರತವನ್ನು ಸೋಲಿಸಿ ಸರಣಿಯನ್ನು ಸಮಗೊಳಿಸಿತು. ಓವಲ್ ಟೆಸ್ಟ್​ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಭಾರತ ಮತ್ತೊಮ್ಮೆ ತಮ್ಮ ಆಟವನ್ನು ತೋರಿಸಿ 2-1 ಮುನ್ನಡೆ ಸಾಧಿಸಿತು. ಈಗ ಎಲ್ಲರ ಕಣ್ಣು ಮ್ಯಾಂಚೆಸ್ಟರ್ ಮೇಲೆ.

ಮ್ಯಾಂಚೆಸ್ಟರ್ ದಾಖಲೆ ಹೀಗಿದೆ
ಸರಣಿಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಇಂಗ್ಲೆಂಡ್‌ಗೆ ಒಂದೇ ಅವಕಾಶವಿದೆ ಮತ್ತು ಇದು ಮ್ಯಾಂಚೆಸ್ಟರ್‌ನಲ್ಲಿದೆ. ಅಲ್ಲಿ ಭಾರತದ ವಿರುದ್ಧ ಅವರ ದಾಖಲೆಯು ಜೋ ರೂಟ್‌ನ ತಂಡದ ಉತ್ಸಾಹವನ್ನು ಹೆಚ್ಚಿಸುತ್ತದೆ. ಆದರೆ ಭಾರತೀಯ ತಂಡವು ಇಲ್ಲಿ ತಮ್ಮ ದಾಖಲೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ಓಲ್ಡ್ ಟ್ರಾಫರ್ಡ್ ನಲ್ಲಿ ಭಾರತ ತಂಡವು ಇಲ್ಲಿಯವರೆಗೆ ಗೆಲುವಿನ ರುಚಿ ನೋಡಿಲ್ಲ.

ಈ ಮೈದಾನದಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 9 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ ಟೀಮ್ ಇಂಡಿಯಾ ಯಾವುದೇ ಗೆಲುವು ಪಡೆದಿಲ್ಲ, ಆದರೆ 4 ಬಾರಿ ಸೋತಿದೆ. ಆದಾಗ್ಯೂ, 5 ಬಾರಿ ಭಾರತವು ಈ ಮೈದಾನದಲ್ಲಿ ಪಂದ್ಯವನ್ನು ಡ್ರಾ ಮಾಡಿದೆ.

ಕೊನೆಯ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿದೆ
2014 ರ ಪ್ರವಾಸದಲ್ಲಿ ಭಾರತ ಈ ಮೈದಾನದಲ್ಲಿ ಕೊನೆಯ ಟೆಸ್ಟ್ ಆಡಿದೆ. ನಂತರ ಇಂಗ್ಲೆಂಡ್ ಭಾರತವನ್ನು ಇನ್ನಿಂಗ್ಸ್ ಮತ್ತು 54 ರನ್ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅಥವಾ ಅಜಿಂಕ್ಯ ರಹಾನೆ, ಆ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಆಗ ನಾಯಕನಾಗಿದ್ದ ಎಂಎಸ್ ಧೋನಿ ಮೊದಲ ಇನ್ನಿಂಗ್ಸ್​ನಲ್ಲಿ 71 ರನ್ ಗಳಿಸಿದರೆ, ರವಿಚಂದ್ರನ್ ಅಶ್ವಿನ್ ಮೊದಲ ಇನ್ನಿಂಗ್ಸ್​ನಲ್ಲಿ 40 ರನ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 46 ರನ್ (ಔಟಾಗದೆ) ಗಳಿಸಿದರು. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಕೊನೆಯದಾಗಿ 2019 ರ ವಿಶ್ವಕಪ್​ನ ಸೆಮಿಫೈನಲ್ ಪಂದ್ಯವನ್ನು ಓಲ್ಡ್ ಟ್ರಾಫರ್ಡ್​ನಲ್ಲಿ ಆಡಿತು. ಆಗಲೂ ಅದು ನ್ಯೂಜಿಲೆಂಡ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು.