
ಸೋಲುವುದಕ್ಕೂ… ಹೋರಾಡಿ ಸೋಲುವುದಕ್ಕೂ ತುಂಬಾ ವ್ಯತ್ಯಾಸವಿದೆ. ರವೀಂದ್ರ ಜಡೇಜಾ ಲಾರ್ಡ್ಸ್ ಮೈದಾನದಲ್ಲಿ ಹೋರಾಡಿದ್ದಲ್ಲ. ಬದಲಾಗಿ ಅಜೇಯರಾಗಿ ಸೋಲೊಪ್ಪಿಕೊಂಡಿದ್ದು. ಟೆಸ್ಟ್ ಕ್ರಿಕೆಟ್‌ನಲ್ಲಿ ಪಂದ್ಯ ಗೆಲ್ಲಿಸಿ ಕೊಡೋದು ಹೇಗೆಂದು ತಿಳಿಯಲು ಜಡೇಜಾ ಎರಡು ಪಂದ್ಯಗಳನ್ನು ವೀಕ್ಷಿಸಲೇಬೇಕಾದ ಅವಶ್ಯಕತೆ ಇದೆ. ಆ ಪಂದ್ಯಗಳೆಂದರೆ…
ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 179 ರನ್ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ಕೇವಲ 67 ರನ್ಗಳಿಸಲಷ್ಟೇ ಶಕ್ತರಾದರು.
ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವು 246 ರನ್ಗಳಿಸಿ ಆಲೌಟ್ ಆದರು. ಇತ್ತ ಮೊದಲ ಇನಿಂಗ್ಸ್ನಲ್ಲಿನ ಹಿನ್ನಡೆಯೊಂದಿಗೆ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಬರೋಬ್ಬರಿ 362 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 261 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ಒಂದೆಡೆ ಬೆನ್ ಸ್ಟೋಕ್ಸ್ ಕ್ರೀಸ್ ಕಚ್ಚಿ ನಿಂತಿದ್ದರೆ, ಮತ್ತೊಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದವು. ಆದರೆ ಬೆನ್ ಸ್ಟೋಕ್ಸ್ ಧೃತಿಗೆಡಲಿಲ್ಲ. ಕೊನೆಯ ಮೂರು ವಿಕೆಟ್ಗಳೊಂದಿಗೆ ಹೋರಾಟ ಮುಂದುವರೆಸಿದರು. ಜೋಫ್ರಾ ಆರ್ಚರ್ ಜೊತೆಗೂಡಿ 25 ರನ್ ಕಲೆಹಾಕಿದರು. ಇದರ ಬೆನ್ನಲ್ಲೇ ಆರ್ಚರ್ ಔಟಾದರು. ಆದರೆ ಆಸ್ಟ್ರೇಲಿಯಾ ಮುಂದೆ ಸೋಲಲು ಬೆನ್ ಸ್ಟೋಕ್ಸ್ ಸಿದ್ಧರಿರಲಿಲ್ಲ.
ಜೋಫ್ರಾ ಆರ್ಚರ್ ಔಟಾದಾಗ ಬೆನ್ ಸ್ಟೋಕ್ಸ್ ಅವರ ಸ್ಕೋರ್ ಕೇವಲ 61 ರನ್ಗಳು ಮಾತ್ರ. ಇದರ ಬೆನ್ನಲ್ಲೇ ಸ್ಟುವರ್ಟ್ ಬ್ರಾಡ್ (0) ಕೂಡ ಔಟಾದರು. ಈ ಹಂತದಲ್ಲಿ ಇಂಗ್ಲೆಂಡ್ ತಂಡಕ್ಕೆ 76 ರನ್ಗಳು ಬೇಕಿದ್ದವು. ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಒಂದು ವಿಕೆಟ್ನ ಅಗತ್ಯತೆ. ಆದರೆ ಸ್ಟೋಕ್ಸ್, ಜ್ಯಾಕ್ ಲೀಚ್ಗೆ ಸ್ಟ್ರೈಕ್ ನೀಡದೇ ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು.
ಜ್ಯಾಕ್ ಲೀಚ್ ಸ್ಟ್ರೈಕ್ಗೆ ಬಂದರೆ ಆಸ್ಟ್ರೇಲಿಯಯನ್ನರು ಅವರನ್ನು ಔಟ್ ಮಾಡುವುದು ಖಚಿತವಾಗಿತ್ತು. ಹೀಗಾಗಿಯೇ ಪ್ರತಿ ಓವರ್ನಲ್ಲಿ ಕನಿಷ್ಠ 5 ಎಸೆತಗಳನ್ನು ಬೆನ್ ಸ್ಟೋಕ್ಸ್ ಎದುರಿಸಿದರು. ಅಲ್ಲದೆ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆಯುತ್ತಿದ್ದರು. ಇದರ ನಡುವೆ ಫೋರ್-ಸಿಕ್ಸ್ಗಳನ್ನು ಬಾರಿಸುವ ಮೂಲಕ ತಂಡವನ್ನು ಗುರಿಯತ್ತ ಕೊಂಡೊಯ್ಯುವ ಕಾಯಕಕ್ಕೆ ಕೈ ಹಾಕಿದರು.
ಹೀಗೆ 219 ಎಸೆತಗಳನ್ನು ಎದುರಿಸಿದ ಬೆನ್ ಸ್ಟೋಕ್ಸ್ 8 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 135 ರನ್ ಬಾರಿಸಿದರು. ಇದರ ನಡುವೆ ಜ್ಯಾಕ್ ಲೀಚ್ ಎದುರಿಸಿದ್ದು ಕೇವಲ 17 ಎಸೆತಗಳು ಮಾತ್ರ. ಅಂದರೆ ಲೀಚ್ ಕ್ರೀಸ್ಗೆ ಆಗಮಿಸಿದ ಬಳಿಕ ಸ್ಟೋಕ್ಸ್ 45 ಎಸೆತಗಳನ್ನು ಎದುರಿಸಿದ್ದರು. ಈ 45 ಎಸೆತಗಳಲ್ಲಿ ಅವರು ಬಾರಿಸಿದ್ದು ಬರೋಬ್ಬರಿ 74 ರನ್ಗಳು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ 1 ವಿಕೆಟ್ನ ರೋಚಕ ಜಯ ತಂದುಕೊಟ್ಟಿದ್ದರು.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಡೇಡಿಯಂನಲ್ಲಿ ನಡೆದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 393 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 386 ರನ್ಗಳಿಸಿದ್ದರು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 273 ರನ್ಗಳಿಸಿ ಆಲೌಟ್ ಆಗಿದ್ದರು. ಅದರಂತೆ ದ್ವಿತೀಯ ಇನಿಂಗ್ಸ್ನಲ್ಲಿ 282 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 227 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯಾನ್ ಜೊತೆಗೂಡಿದರು.
ಅತ್ತ ಲಿಯಾನ್ಗೆ ಸ್ಟ್ರೈಕ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತ ಕಮಿನ್ಸ್ ಬಹುತೇಕ ಎಸೆತಗಳನ್ನು ಎದುರಿಸಲು ಮುಂದಾದರು. ಅಲ್ಲದೆ ಲಿಯಾನ್ ಆಗಮನದ ಬಳಿಕ ಕಮಿನ್ಸ್ 44 ಎಸೆತಗಳಲ್ಲಿ 37 ರನ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 2 ವಿಕೆಟ್ಗಳ ರೋಚಕ ಜಯ ತಂದುಕೊಡುವಲ್ಲಿ ಕಮಿನ್ಸ್ ಯಶಸ್ವಿಯಾದರು.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆ್ಯಶಸ್ ಸರಣಿಯ ಈ 2 ಎರಡು ಪಂದ್ಯಗಳ ಫಲಿತಾಂಶ ಮೂಡಿಬಂದಿದ್ದು ಕೊನೆಯ ಹಂತದಲ್ಲಿ. ಅಂದರೆ ಬೌಲರ್ಗಳು ಬ್ಯಾಟಿಂಗ್ಗೆ ಇಳಿದಾಗ. ಈ ವೇಳೆ ಸಂಪೂರ್ಣ ಜವಾಬ್ದಾರಿ ಹೆಗಲೇರಿಸಿಕೊಳ್ಳುವ ಮೂಲಕ ಬಿರುಸಿನ ಬ್ಯಾಟಿಂಗ್ನೊಂದಿಗೆ ಬೆನ್ ಸ್ಟೋಕ್ಸ್ ಹಾಗೂ ಪ್ಯಾಟ್ ಕಮಿನ್ಸ್ ತಮ್ಮ ತಂಡಗಳಿಗೆ ಜಯ ತಂದು ಕೊಟ್ಟಿದ್ದರು.
ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ ಕೆಎಲ್ ರಾಹುಲ್ ಕೂಡ ಕ್ರೀಸ್ ನಲ್ಲಿದ್ದರು. ಹೀಗಾಗಿ ಜಡೇಜಾ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಅದರಂತೆ ಇನಿಂಗ್ಸ್ ಕಟ್ಟುವ ಕಾಯಕಕ್ಕೆ ಕೈ ಹಾಕಿದ ಜಡೇಜಾ ಮೊದಲ 57 ಎಸೆತಗಳಲ್ಲಿ ಬಾರಿಸಿದ್ದು ಕೇವಲ ಒಂದು ಫೋರ್ ಮಾತ್ರ.
ಇನ್ನು ಜಸ್ಪ್ರೀತ್ ಬುಮ್ರಾ ಬಂದ ಬಳಿಕ 74 ಎಸೆತಗಳನ್ನು ಎದುರಿಸಿದ ಜಡೇಜಾ ಕಲೆಹಾಕಿದ್ದು ಕೇವಲ 20 ರನ್ ಮಾತ್ರ ಎಂದರೆ ನಂಬಲೇಬೇಕು. ಅಂದರೆ ಕೊನೆಯ ಎರಡು ವಿಕೆಟ್ಗಳು ಮಾತ್ರ ಉಳಿದಿರುವಾಗಲೂ ಪಂದ್ಯ ಗೆಲ್ಲಿಸಲು ಜಡೇಜಾ ಯಾವುದೇ ಪ್ರಯತ್ನ ಮಾಡಲಿಲ್ಲ.
ಬುಮ್ರಾ ಔಟಾದ ಬಳಿಕ ಮೊಹಮ್ಮದ್ ಸಿರಾಜ್ ಕಣಕ್ಕಿಳಿದಿದ್ದರು. ಕೊನೆಯ ವಿಕೆಟ್ ಇರುವಾಗ 49 ಎಸೆತಗಳನ್ನು ಎದುರಿಸಿದ ಜಡೇಜಾ ಕೇವಲ ಒಂದು ಫೋರ್ ಮಾತ್ರ ಬಾರಿಸಿದ್ದರು. ಅಂದರೆ ಟೀಮ್ ಇಂಡಿಯಾಗೆ ಸೋಲು ಖಚಿತವಾಗುತ್ತಿದ್ದರೂ ರವೀಂದ್ರ ಜಡೇಜಾ ಮಾತ್ರ ಹೋರಾಟದ ಮನೋಭಾವ ತೋರಲೇ ಇಲ್ಲ.
ಇಲ್ಲಿ ರವೀಂದ್ರ ಜಡೇಜಾ 61 ರನ್ ಬಾರಿಸಿದ್ದರಿಂದ ಟೀಮ್ ಇಂಡಿಯಾ 170 ರನ್ಗಳಿಸಲು ಸಾಧ್ಯವಾಯಿತು ಎಂಬ ವಾದವನ್ನು ನೀವು ಮುಂದಿಡುವುದಾದರೆ, ಈ ಸ್ಕೋರ್ಗಳಿಸಲು ಮುಖ್ಯ ಕಾರಣ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್. ಈ ಇಬ್ಬರು ಬೌಲರ್ಗಳು ಬರೋಬ್ಬರಿ 84 ಎಸೆತಗಳನ್ನು ಎದುರಿಸಿದ್ದರು.
ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಜಸ್ಪ್ರೀತ್ ಬುಮ್ರಾಗೆ 54 ಎಸೆತಗಳನ್ನು ಎದುರಿಸಲು ಜಡೇಜಾ ಅವಕಾಶ ನೀಡಿರುವುದೇ ಅಚ್ಚರಿ. ಅಂದರೆ ಇಲ್ಲಿ ಪಂದ್ಯದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಜಡೇಜಾ ಸಿದ್ಧರಾಗಿಯೇ ಇರಲಿಲ್ಲ. ಇದಾದ ಬಳಿಕ ಮೊಹಮ್ಮದ್ ಸಿರಾಜ್ಗೂ ಆಗಾಗ್ಗೆ ಸ್ಟ್ರೈಕ್ ನೀಡಿ ಅಚ್ಚರಿ ಮೂಡಿಸಿದ್ದರು.
ಚಹಾ ವಿರಾಮದ ಬಳಿಕ ಟೀಮ್ ಇಂಡಿಯಾಗೆ ಗೆಲ್ಲಲು 30 ರನ್ಗಳ ಅಗತ್ಯವಿರುವಾಗ ರವೀಂದ್ರ ಜಡೇಜಾ ಮೊಹಮ್ಮದ್ ಸಿರಾಜ್ಗೆ ಸ್ಟ್ರೈಕ್ ನೀಡುತ್ತಿದ್ದರು. ಅತ್ತ ಇಂಗ್ಲೆಂಡ್ಗೆ ಒಂದು ಎಸೆತದಲ್ಲಿ ಪಂದ್ಯ ಗೆಲ್ಲಲು ಅವಕಾಶವಿದ್ದರೂ ಜಡೇಜಾ ಮಾತ್ರ ಬಿರುಸಿನ ಹೊಡೆತಗಳಿಗೆ ಮುಂದಾಗಲೇ ಇಲ್ಲ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ರವೀಂದ್ರ ಜಡೇಜಾ ಇನಿಂಗ್ಸ್ ಕಟ್ಟಿರುವುದು ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಆಡಿದ ಜವಾಬ್ದಾರಿಯುತ ಆಟದಿಂದಾಗಿ ಎಂಬುದು. ಏಕೆಂದರೆ ಈ ಇಬ್ಬರು ಬೌಲರ್ಗಳು ಬರೋಬ್ಬರಿ 84 ಎಸೆತಗಳನ್ನು ಎದುರಿಸಿ ಟೀಮ್ ಇಂಡಿಯಾ ಬೇಗನೆ ಆಲೌಟ್ ಆಗುವುದನ್ನು ತಡೆದಿದ್ದರು.
ಈ 84 ಎಸೆತಗಳ ನಡುವೆ ಜಡೇಜಾ ಪಂದ್ಯವನ್ನು ಗೆಲ್ಲಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ಸಾಕ್ಷಿ 181 ಎಸೆತಗಳನ್ನು ಎದುರಿಸಿ ರವೀಂದ್ರ ಜಡೇಜಾ 3 ಫೋರ್ ಹಾಗೂ 1 ಸಿಕ್ಸ್ ಮಾತ್ರ ಬಾರಿಸಿರುವುದು.
ಅದರಲ್ಲೂ ಕೊನೆಯ ಎರಡು ವಿಕೆಟ್ಗಳು ಮಾತ್ರ ಉಳಿದಿರುವಾಗ 128 ಎಸೆತಗಳನ್ನು ಎದುರಿಸಿದ ಜಡೇಜಾ 2 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಕೇವಲ 44 ರನ್ ಮಾತ್ರ ಕಲೆಹಾಕಿದ್ದರು. ಅಂದರೆ ಸಿಂಗಲ್ಗಳ ಮೂಲಕವೇ 30 ರನ್ಗಳಿಸಿದ್ದರು. ಇದರ ಹೊರತಾಗಿ ಬಿಗ್ ಶಾಟ್ಗಳೊಂದಿಗೆ ಪಂದ್ಯ ಗೆಲ್ಲಿಸಲು ಯಾವುದೇ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ.
ಅದೇ ಆ್ಯಶಸ್ ಸರಣಿಯಲ್ಲಿ ಕೊನೆಯ ವಿಕೆಟ್ ಇರುವಾಗ ಬೆನ್ ಸ್ಟೋಕ್ಸ್ 45 ಎಸೆತಗಳಲ್ಲಿ 74 ರನ್ ಬಾರಿಸಿ ಪಂದ್ಯ ಗೆಲ್ಲಿಸಿದ್ದರು. ಅತ್ತ ಪ್ಯಾಟ್ ಕಮಿನ್ಸ್ 44 ಎಸೆತಗಳಲ್ಲಿ 37 ರನ್ ಸಿಡಿಸಿ 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದರು.
ಇತ್ತ ರವೀಂದ್ರ ಜಡೇಜಾ ರಕ್ಷಣಾತ್ಮಕ ಆಟದೊಂದಿಗೆ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದರು. ಹೀಗೆ ಅಜೇಯರಾಗಿ ಉಳಿದು ಏನು ಪ್ರಯೋಜನ ಎಂದು ಕೇಳಿದರೆ ಉತ್ತರವಿಲ್ಲ. ಅದರಲ್ಲೂ ಇಬ್ಬರು ಬೌಲರ್ಗಳು ಬರೋಬ್ಬರಿ 84 ಎಸೆತಗಳನ್ನು ಎದುರಿಸಿ ಸಾಥ್ ನೀಡಿದರೂ ರವೀಂದ್ರ ಜಡೇಜಾ ಹೋರಾಡದೇ ಇರುವುದೇ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ.
ಇದಾಗ್ಯೂ ಲಾರ್ಡ್ಸ್ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ ನಿಮಗೆ ಹೀರೋ ಅನಿಸಿದ್ದರೆ, ನೀವು ಸಹ 2019ರ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಹಾಗೂ 2023ರ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ನೋಡಲೇಬೇಕು.
Published On - 9:53 am, Tue, 15 July 25