IND vs ENG: ರಹಾನೆ-ಪೂಜಾರ ಕೆರಿಯರ್ ಅಂತ್ಯ? ಕ್ಯಾಪ್ಟನ್ ರೋಹಿತ್ ಹೇಳಿದ್ದೇನು?

|

Updated on: Jan 24, 2024 | 7:29 PM

IND vs ENG: ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡ ರೋಹಿತ್ ಶರ್ಮಾ, ಟೀಂ ಇಂಡಿಯಾದ ಇಬ್ಬರು ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡದಿರುವ ಬಗ್ಗೆಯೂ ಮೌನ ಮುರಿದರು.

IND vs ENG: ರಹಾನೆ-ಪೂಜಾರ ಕೆರಿಯರ್ ಅಂತ್ಯ? ಕ್ಯಾಪ್ಟನ್ ರೋಹಿತ್ ಹೇಳಿದ್ದೇನು?
ಟೀಂ ಇಂಡಿಯಾ
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಗುರುವಾರ, ಅಂದರೆ ಜನವರಿ 25 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಸಂಪೂರ್ಣ ಸಿದ್ಧಗೊಂಡಿದ್ದು, ಈಗಾಗಲೇ ಮೊದಲ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಈ ನಡುವೆ ಪಂದ್ಯಕ್ಕೆ ಒಂದು ದಿನ ಮುಂಚೆ ಸುದ್ದಿಗೋಷ್ಠಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma), ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡರು. ಅದರಲ್ಲೂ ಟೀಂ ಇಂಡಿಯಾದ ಇಬ್ಬರು ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಅವರನ್ನು ಆಯ್ಕೆ ಮಾಡದಿರುವ ಬಗ್ಗೆಯೂ ಮೌನ ಮುರಿದರು.

ಯುವಕರಿಗೆ ಅವಕಾಶ ನೀಡುವುದು ಯಾವಾಗ?

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಿಂದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆಯನ್ನು ಕೈಬಿಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ, ನಾವು ತಂಡದಲ್ಲಿ ಅನುಭವಿ ಆಟಗಾರರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಯೋಚಿಸಿದ್ದೇವು. ಆದರೆ ಅನುಭವಿಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತಾ ಹೋದರೆ ಯುವ ಆಟಗಾರರಿಗೆ ಅವಕಾಶ ಸಿಗುವುದು ಯಾವಾಗ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡವು. ಆದರೆ ಅನುಭವಿ ಆಟಗಾರರನ್ನು ತಂಡದಿಂದ ಹೊರಗಿಡುವುದು ಸುಲಭವಾಗಿರಲಿಲ್ಲ. ಯುವ ಆಟಗಾರರಿಗೆ ಭಾರತದಲ್ಲಿ ಹೆಚ್ಚು ಅವಕಾಶ ನೀಡುವುದರಿಂದ ಅವರು ಟೆಸ್ಟ್ ಕ್ರಿಕೆಟ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಅಲ್ಲದೆ ನಾವು ಯುವ ಆಟಗಾರನಿಗೆ ಅವಕಾಶ ನೀಡಿದ್ದು ಏಕೆಂದರೆ, ಯುವ ಆಟಗಾರರು ಭಾರತದ ನೆಲದಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಪಡೆದರೆ, ಅವರು ಈ ಮಾದರಿಯಲ್ಲಿ ಪಳಗಲು ಸಾಧ್ಯವಾಗುತ್ತದೆ. ನಾವು ಇಲ್ಲಿ ಅವರಿಗೆ ಅವಕಾಶ ನೀಡದೆ, ಏಕಾಏಕಿ ವಿದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ರೋಹಿತ್ ಸ್ಪಷ್ಟನೆ ನೀಡಿದ್ದಾರೆ.

ರಹಾನೆ-ಪೂಜಾರ ಕೆರಿಯರ್ ಅಂತ್ಯ?

ಯುವ ಆಟಗಾರರಿಗೆ ನಾಯಕ ರೋಹಿತ್ ಮಣೆ ಹಾಕಿರುವುದನ್ನು ನೋಡಿದರೆ, ಟೀಂ ಇಂಡಿಯಾದಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರ ವೃತ್ತಿಜೀವನ ಮುಗಿದ ಅಧ್ಯಾಯ ಎನ್ನಬಹುದಾಗಿದೆ. ಈ ಇಬ್ಬರೂ ಆಟಗಾರರು ಸಾಕಷ್ಟು ಪ್ರತಿಭಾವಂತರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇವರಿಬ್ಬರ ಆಟದಿಂದ ಟೀಂ ಇಂಡಿಯಾ ಅನೇಕ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಹಾನೆ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ ಈಗ ಅವರಿಬ್ಬರನ್ನೂ ತಂಡದಿಂದ ಹೊರಗಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾ ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಬ್ಬರಿಗೂ ಅವಕಾಶ ಸಿಕ್ಕಿಲ್ಲ. ಹೀಗಾಗಿ ಈ ಇಬ್ಬರ ಕೆರಿಯರ್ ಮುಗಿದಿದೆ ಎಂಬ ಪರೋಕ್ಷ ಸೂಚನೆ ಸಿಕ್ಕಂತ್ತಾಗಿದೆ.

ಮೊದಲ ಎರಡು ಟೆಸ್ಟ್‌ಗಳಿಗೆ ಟೀಂ ಇಂಡಿಯಾ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರಜತ್ ಪಾಟಿದಾರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಸಿರಾಜ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Wed, 24 January 24