
ಭಾರತ ಮತ್ತು ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 10) ಶುರುವಾಗಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯದ ಮೂಲಕ ಜೋಫ್ರಾ ಆರ್ಚರ್ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಅದು ಕೂಡ ಬರೋಬ್ಬರಿ 1595 ದಿನಗಳ ಬಳಿಕ. ಅಂದರೆ ಆರ್ಚರ್ ಕೊನೆಯ ಬಾರಿ ಟೆಸ್ಟ್ ಪಂದ್ಯವಾಡಿದ್ದು 2021 ರಲ್ಲಿ. ಇದಾದ ಬಳಿಕ ಗಾಯಕ್ಕೆ ತುತ್ತಾಗಿದ್ದ ಆರ್ಚರ್ ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅತ್ತ ಜೋಫ್ರಾನನ್ನು ಎದುರಿಸಿ ಹೊಸ ಇತಿಹಾಸ ಬರೆಯಲು ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಅದು ಸಹ 35 ವರ್ಷಗಳ ಕನಸನ್ನು ಈಡೇರಿಸಿಕೊಳ್ಳುವ ಧ್ಯೇಯದೊಂದಿಗೆ ಎಂಬುದು ವಿಶೇಷ.
ಕಳೆದ 35 ವರ್ಷಗಳಿಂದ, ಲಾರ್ಡ್ಸ್ ಮೈದಾನದಲ್ಲಿ ಯಾವುದೇ ಭಾರತೀಯ ನಾಯಕ 50 ಕ್ಕಿಂತ ಹೆಚ್ಚು ರನ್ ಕಲೆಹಾಕಿಲ್ಲ. ಟೀಮ್ ಇಂಡಿಯಾ ನಾಯಕರುಗಳನ್ನು ಕ್ರೀಸ್ ಕಚ್ಚಿ ನಿಂತು ಬ್ಯಾಟಿಂಗ್ ಮಾಡಲು ಇಂಗ್ಲೆಂಡ್ ಬೌಲರ್ಗಳು ಬಿಡಲಿಲ್ಲ ಎನ್ನುವುದು ಸೂಕ್ತ. ಇದೀಗ ಟೀಮ್ ಇಂಡಿಯಾ ಶುಭ್ಮನ್ ಗಿಲ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಎರಡು ಮ್ಯಾಚ್ಗಳಲ್ಲಿ ಶತಕ ಹಾಗೂ ದ್ವಿಶತಕ ಸಿಡಿಸಿರುವ ಗಿಲ್ ಲಾರ್ಡ್ಸ್ ಮೈದಾನದಲ್ಲಿ ಅರ್ಧಶತಕ ಪೂರೈಸುವ ವಿಶ್ವಾಸದಲ್ಲಿದ್ದಾರೆ.
ಈ ಮೂಲಕ 35 ವರ್ಷಗಳಿಂದ ಟೀಮ್ ಇಂಡಿಯಾ ನಾಯಕರುಗಳ ಪಾಲಿಗೆ ಮರೀಚಿಕೆಯಾಗಿರುವ ಹಾಫ್ ಸೆಂಚುರಿಯ ಕನಸನ್ನು ನನಸು ಮಾಡಿಕೊಳ್ಳಲು ಗಿಲ್ ಟೊಂಕ ಕಟ್ಟಿ ನಿಂತಿದ್ದಾರೆ. ಅದು ಸಹ ಆಘಾತ ವೇಗಿ ಜೋಫ್ರಾ ಆರ್ಚರ್ ಅವರನ್ನು ಎದುರಿಸುವ ಮೂಲಕ ಈ ಕನಸು ಈಡೇರುವ ಸಾಧ್ಯತೆಯಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಜೋಫ್ರಾ ಆರ್ಚರ್ ಹಾಗೂ ಶುಭ್ಮನ್ ಗಿಲ್ 3 ಬಾರಿ ಮುಖಾಮುಖಿಯಾಗಿದ್ದರು. ಈ ವೇಳೆ 2 ಬಾರಿ ಗಿಲ್ ವಿಕೆಟ್ ಪಡೆಯುವಲ್ಲಿ ಆರ್ಚರ್ ಯಶಸ್ವಿಯಾಗಿದ್ದಾರೆ. ಇನ್ನು ಆರ್ಚರ್ ಎಸೆದ 28 ಎಸೆತಗಳಲ್ಲಿ ಶುಭ್ಮನ್ ಗಿಲ್ ಕೇವಲ 18 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಆಡಲು ವೈಭವ್ ಸೂರ್ಯವಂಶಿ ಅನರ್ಹ..!
ಇದೀಗ ನಾಲ್ಕು ವರ್ಷಗಳ ಬಳಿಕ ಶುಭ್ಮನ್ ಗಿಲ್ ಹಾಗೂ ಜೋಫ್ರಾ ಆರ್ಚರ್ ಮತ್ತೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಅದು ಕೂಡ ಲಾರ್ಡ್ಸ್ ಮೈದಾನದಲ್ಲಿ. ಹೀಗಾಗಿಯೇ ಮೂರನೇ ಟೆಸ್ಟ್ ಪಂದ್ಯವನ್ನು ಗಿಲ್ vs ಆರ್ಚರ್ ಎಂದು ಬಣ್ಣಿಸಲಾಗುತ್ತಿದೆ. ಈ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾರು ಮಿಂಚಲಿದ್ದಾರೆ ಕಾದು ನೋಡೋಣ.
Published On - 10:33 am, Thu, 10 July 25