
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಬ್ರಿಸ್ಟಲ್ನ ಕೌಂಟಿ ಮೈದಾನದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಸಾಧಿಸಿದೆ. ಭಾರತ ತಂಡ ಸರಣಿ ಸೋಲನ್ನು ತಪ್ಪಿಸಬೇಕಾದರೆ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇತ್ತ 12 ವರ್ಷಗಳ ನಂತರ ಭಾರತ ವಿರುದ್ಧ ಟಿ20 ಸರಣಿ ಗೆಲ್ಲುವತ್ತ ಇಂಗ್ಲೆಂಡ್ ಕಣ್ಣಿಟ್ಟಿದೆ. ಹೀಗಾಗಿ ಉಭಯ ತಂಡಗಳು ಶತಾಯಗತಾಯ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ವೇಗಿ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದ್ದು, ವಾಷಿಂಗ್ಟನ್ ಸುಂದರ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಆಡುವ ಅವಕಾಶ ನೀಡಲಾಗಿದೆ. ಇತ್ತ ಇಂಗ್ಲೆಂಡ್ ತಂಡದಲ್ಲೂ ಒಂದು ಬದಲಾವಣೆಯನ್ನು ಮಾಡಲಾಗಿದೆ.
ಭಾರತ ತಂಡ 8 ವರ್ಷಗಳ ಬಳಿಕ ಬ್ರಿಸ್ಟಲ್ನ ಕೌಂಟಿ ಮೈದಾನದಲ್ಲಿ ಟಿ20 ಪಂದ್ಯ ಆಡಲಿದೆ. ಇದಕ್ಕೂ ಮುನ್ನ ಭಾರತ ತನ್ನ ಏಕೈಕ ಮತ್ತು ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು 2018ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಆಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ ಅಜೇಯ ಶತಕ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು.
ಭಾರತ ತಂಡ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶನ್ ಕಿಶನ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಜೋಶ್ ಟಂಗ್.
Published On - 9:43 pm, Thu, 9 July 26