
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುವುದು ಅನುಮಾನ. ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ದ್ಬಿತೀಯ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಇತ್ತ ಜಸ್ಪ್ರೀತ್ ಬುಮ್ರಾ ಹೊರಗುಳಿದರೆ, ಅವರ ಬದಲಿಗೆ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತಮ ಅರ್ಷದೀಪ್ ಸಿಂಗ್. ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಅಭ್ಯಾಸದ ವೇಳೆ ಎಡಗೈ ವೇಗಿ ಅರ್ಷದೀಪ್ ನೆಟ್ಸ್ನಲ್ಲಿ ತುಂಬಾ ಹೊತ್ತು ಬೆವರಿಳಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ ಎಂಬುದು ವಿಶೇಷ. ಹೀಗಾಗಿ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದ ಮೂಲಕ ಅರ್ಷದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
ಮತ್ತೊಂದೆಡೆ ಅರ್ಷದೀಪ್ ಸಿಂಗ್ ಜೊತೆ ಆಕಾಶ್ ದೀಪ್ ಕೂಡ ಪೈಪೋಟಿಯಲ್ಲಿದ್ದಾರೆ. ಅವರು ಸಹ ಶುಕ್ರವಾರ ನಡೆದ ಅಭ್ಯಾಸದ ವೇಳೆ ಗಂಟೆಗಳ ಕಾಲ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ. ಇತ್ತ ಟೀಮ್ ಇಂಡಿಯಾದ ಇಬ್ಬರು ಬೌಲರ್ಗಳು ಗಂಟೆಗಳ ಕಾಲ ನೆಟ್ಸ್ನಲ್ಲಿ ಬೆವರಿಳಿಸಿರುವ ಕಾರಣ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಖಚಿತ.
ಅದರಂತೆ ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್ ಅಥವಾ ಆಕಾಶ್ ದೀಪ್ ಸ್ಥಾನ ಪಡೆಯಬಹುದು. ಇಲ್ಲ, ಪ್ರಸಿದ್ಧ್ ಕೃಷ್ಣ ಅವರನ್ನು ದ್ವಿತೀಯ ಪಂದ್ಯದಿಂದ ಕೈ ಬಿಟ್ಟು ಅವರಿಗೆ ಬದಲಿಗೆ ಆಕಾಶ್ ದೀಪ್ಗೆ ಅವಕಾಶ ನೀಡಬಹುದು.
ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದರು. ಇದೀಗ ಫಿಟ್ನೆಸ್ ಸಾಧಿಸಿರೂ, ಅವರ ಮೇಲೆ ಒತ್ತಡ ಹಾಕದಿರಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬುಮ್ರಾ ಅವರನ್ನು ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಹೆಡಿಂಗ್ಲೆಯಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿರುವ ಬುಮ್ರಾ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ನಡೆಯುವುದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ. ಈ ಮೈದಾನವು ಬೌಲರ್ಗಳಿಗೆ ಸಹಕಾರಿ. ಹೀಗಾಗಿ ಒಂದು ಪಂದ್ಯದ ವೇಳೆ ವಿಶ್ರಾಂತಿ ನೀಡಿ ಬುಮ್ರಾ ಅವರನ್ನು ಮೂರನೇ ಮ್ಯಾಚ್ನಲ್ಲಿ ಕಣಕ್ಕಿಳಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಪ್ಲ್ಯಾನ್ ರೂಪಿಸಿರುವ ಸಾಧ್ಯತೆಯಿದೆ.
ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್ಫುಲ್ ಶತಕ