
ಟೆಸ್ಟ್ ಕ್ರಿಕೆಟ್ನಲ್ಲಿ ಮೂರು ರೀತಿಯ ಚೆಂಡುಗಳನ್ನು ಬಳಸಲಾಗುತ್ತದೆ. ಭಾರತದ ಸೇರಿದಂತೆ ಕೆಲ ದೇಶಗಳು ಎಸ್ಜಿ ಬಾಲ್ಗಳಲ್ಲಿ ಟೆಸ್ಟ್ ಪಂದ್ಯಗಳನ್ನಾಡುತ್ತಿದ್ದರೆ, ಇಂಗ್ಲೆಂಡ್, ಐರ್ಲೆಂಡ್ ಸೇರಿದಂತೆ ಕೆಲ ದೇಶಗಳು ಟೆಸ್ಟ್ನಲ್ಲಿ ಡ್ಯೂಕ್ಸ್ ಬಾಲ್ಗಳನ್ನು ಬಳಸುತ್ತಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಸೇರಿದಂತೆ ಅನೇಕ ದೇಶಗಳು ಕೂಕಬುರ್ರಾ ಚೆಂಡಿನಲ್ಲಿ ಟೆಸ್ಟ್ ಪಂದ್ಯಗಳನ್ನಾಡುತ್ತಿದೆ. ಇದೀಗ ಇಂಗ್ಲೆಂಡ್ನಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಬಾಲ್ ಬಗ್ಗೆ ಇದೀಗ ಅಪಸ್ವರ ಕೇಳಿ ಬಂದಿದೆ. ಅದು ಕೂಡ ಭಾರತ ಮತ್ತು ಇಂಗ್ಲೆಂಡ್ ಆಟಗಾರರಿಂದಲೇ..!
ಭಾರತ ಮತ್ತು ಇಂಗ್ಲೆಂಡ್ ನಡುವಣ ತೆಂಡೂಲ್ಕರ್ – ಅ್ಯಂಡರ್ಸನ್ ಟೆಸ್ಟ್ ಸರಣಿ ವೇಳೆ ಆಟಗಾರರು ಅಂಪೈರ್ ಜೊತೆ ಚೆಂಡು ಬದಲಿಸಲು ಮನವಿ ಮಾಡುತ್ತಿರುವುದು ನೀವು ನೋಡಿರುತ್ತೀರಿ. ಅತ್ತ ಅಂಪೈರ್ ಸಹ ಹಲವು ಬಾರಿ ಗೇಜ್ ಬಳಸಿ ಚೆಂಡನ್ನು ಆಗಾಗ್ಗೆ ಪರಿಶೀಲಿಸುತ್ತಿರುವುದು ಕೂಡ ಕಂಡು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಡ್ಯೂಕ್ಸ್ ಬಾಲ್ ಬೇಗನೆ ಆಕಾರ ಕಳೆದುಕೊಳ್ಳುತ್ತಿರುವುದು.
ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಬಾಲ್ ಬೇಗನೆ ಮೃದುವಾಗುತ್ತಿದೆ ಎಂದು ಆಟಗಾರರು ಆರೋಪಿಸುತ್ತಿದ್ದಾರೆ. ಅಲ್ಲದೆ ಚೆಂಡು ನಿಗದಿತ ಸಮಯಕ್ಕಿಂತ ಮುಂಚೆಯೇ ಆಕಾರ ಕಳೆದುಕೊಳ್ಳುತ್ತಿದೆ ಎಂದು ದೂರುತ್ತಿದ್ದಾರೆ. ಈ ದೂರಿನೊಂದಿಗೆ ಅಂಪೈರ್ ಜೊತೆ ಆಟಗಾರರು ವಾಗ್ವಾದ ನಡೆಸಿದ ಘಟನೆಗಳು ಕೂಡ ಮೊದಲ ಟೆಸ್ಟ್ ಪಂದ್ಯದ ವೇಳೆ ನಡೆದಿದೆ.
ಇತ್ತ ಚೆಂಡು ಮೃದುವಾಗುತ್ತಿರುವುದರಿಂದ ಬೌಲರ್ಗಳ ಮೇಲೆ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ. ಏಕೆಂದರೆ ಮೇಲ್ನೋಟಕ್ಕೆ ಚೆಂಡು ಗಟ್ಟಿಯಾಗಿ ಕಾಣಿಸಿದರೂ ವೇಗಿಗಳು ಚೆಂಡೆಸೆದಾಗ ಅದು ಪುಟಿದೇಳುವ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದಾಗಿ ಉಭಯ ತಂಡಗಳ ವೇಗಿಗಳು ಆಗಾಗ್ಗೆ ಚೆಂಡು ಬದಲಿಸಲು ಕಳೆದ ಎರಡು ಪಂದ್ಯಗಳ ವೇಳೆ ಅಂಪೈರ್ ಜೊತೆ ಮನವಿ ಮಾಡುತ್ತಿದ್ದರು.
ಆಟಗಾರರು ಚೆಂಡು ಮೃದುವಾಗಿದೆ ಅಥವಾ ಆಕಾರ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರೂ, ಅತ್ತ ಅಂಪೈರ್ ಗೇಜ್ ಮೂಲಕ ಚೆಂಡನ್ನು ಪರೀಕ್ಷಿಸುತ್ತಿದ್ದಾರೆ. ಅಂದರೆ ವೃತ್ತಕಾರದಲ್ಲಿರುವ ಸಾಧನ ಮೂಲಕ ಚೆಂಡಿನ ರೂಪ ಬದಲಾಗಿದೆಯಾ ಎಂದು ಪರೀಕ್ಷಿಸಲಾಗುತ್ತಿದೆ. ಒಂದು ವೇಳೆ ರಿಂಗ್ ಮೂಲಕ ಚೆಂಡು ಹಾದು ಹೋದರೆ, ಅದನ್ನು ಆಡಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ.
ಆದರೆ ಇಲ್ಲಿ ಚೆಂಡು ಸಂಪೂರ್ಣ ಆಕಾರ ಬದಲಿಸದಿದ್ದರೂ, ಮೇಲ್ಮೈ ಮೃದುವಾಗುತ್ತಿದೆ ಎಂಬ ವಾದವನ್ನು ಬೌಲರ್‌ಗಳು ಮುಂದಿಡುತ್ತಿದ್ದಾರೆ. ಇಲ್ಲಿ ಗೇಜ್ನಲ್ಲಿ ಸರಿಯಾಗಿ ಕಂಡು ಬಂದರೂ, ಅತ್ತ ಬಾಲ್ ಪುಟಿದೇಳುತ್ತಿಲ್ಲ ಎಂಬ ವಾದವನ್ನು ಆಟಗಾರರು ಮುಂದಿಡುತ್ತಿದ್ದಾರೆ.
ಡ್ಯೂಕ್ಸ್ ಬಾಲ್ ಬೇಗನೆ ಮೃದುವಾಗುತ್ತಿದೆ. ಇದರಿಂದ ಉತ್ತಮ ಬೌಲಿಂಗ್ ಸಂಘಟಿಸುವುದು ತುಂಬಾ ಕಷ್ಟ. ಅಲ್ಲದೆ ಬಾಲ್ ಆಕಾರ ಕೂಡ ಕಳೆದುಕೊಳ್ಳುತ್ತಿದೆ. ಇದಕ್ಕೇನು ಕಾರಣ ಎಂಬುದು ನನಗೆ ತಿಳಿದಿಲ್ಲ. ಪಿಚ್ನಿಂದಾಗಿ ಆಗುತ್ತಿದೆಯಾ ಅಥವಾ ಇನ್ನೇನು ಕಾರಣನಾ ಗೊತ್ತಿಲ್ಲ. ಆದರೆ ಇಂತಹ ಚೆಂಡುಗಳಲ್ಲಿ ಬೌಲಿಂಗ್ ಮಾಡುವುದು ಕಷ್ಟಕರ ಎಂದು ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಹೇಳಿದ್ದಾರೆ.
ನಮ್ಮಲ್ಲಿ ಟೆಸ್ಟ್ ಸರಣಿ ನಡೆದಾಗೆಲ್ಲಾ ಚೆಂಡುಗಳು ಮೃದುವಾಗುವುದು, ಸಂಪೂರ್ಣವಾಗಿ ಆಕಾರ ಕಳೆದುಕೊಳ್ಳುವ ಸಮಸ್ಯೆ ಕಂಡು ಬರುತ್ತಿದೆ. ನಾವು ಬಳಸುವ ರಿಂಗ್ಗಳು ಡ್ಯೂಕ್ಸ್ ಚೆಂಡನ್ನು ಪರೀಕ್ಷಿಸುವ ರಿಂಗ್ಗಳೆಂದು ನಾನು ಭಾವಿಸುವುದಿಲ್ಲ. ಅದು ಸೂಕ್ತವಲ್ಲ. ಇದರ ಬಗ್ಗೆ ನಾವು ಮತ್ತೊಮ್ಮೆ ಪರಿಶೀಲಿಸಬೇಕಿದೆ ಎಂದು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.
ಚೆಂಡು ಆಕಾರ ಕಳೆದುಕೊಳ್ಳುತ್ತಿರುವುದು ಒಂದು ದೊಡ್ಡ ಸಮಸ್ಯೆ ಎಂದು ನಾನು ಭಾವಿಸುತ್ತೇನೆ. ಈ ಸರಣಿಯಲ್ಲಿ, ಚೆಂಡು ತುಂಬಾ ಆಕಾರ ತಪ್ಪಿರುವುದು ಕಂಡು ಬಂದಿದೆ. ಅದು ನಾನು ಎಂದಿಗೂ ನೋಡಿರದ ವಿಷಯ. ಹೀಗೆ ಆಕಾರ ತಪ್ಪಿರುವ ಚೆಂಡು ಅಥವಾ ಮೃದುವಾದ ಬಾಲ್ನಿಂದ ಆಡುವಾಗ ಆಟಗಾರರಿಗೆ ಕಿರಿಕಿರಿಯಾಗುತ್ತದೆ. ಇದೇ ವೇಳೆ ನೀವು ಚೆಂಡನ್ನು ಬದಲಾಯಿಸಿದ ತಕ್ಷಣ ಎಲ್ಲವೂ ಬದಲಾಗುತ್ತದೆ. ಬ್ಯಾಟ್ಸ್‌ಮನ್ ಆಗಿ, ನೀವು ಅದಕ್ಕೆ ಹೊಂದಿಕೊಳ್ಳುತ್ತಲೇ ಇರಬೇಕಾಗುತ್ತದೆ. ಆದರೆ ಪದೇ ಪದೇ ಇಂತಹ ಸಮಸ್ಯೆ ಎದುರಾಗುವುದು ಕ್ರಿಕೆಟ್‌ಗೆ ಒಳ್ಳೆಯದಲ್ಲ ಎಂದು ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಹೇಳಿದ್ದಾರೆ.
ಡ್ಯೂಕ್ಸ್ ಬಾಲ್ನ ಬಗ್ಗೆ ಕೇಳಿ ಬಂದ ಈ ಅಪಸ್ವರದ ಬೆನ್ನಲ್ಲೇ ಚೆಂಡಿನ ತಯಾರಕರಾದ ದಿಲೀಪ್ ಜಗಜೋಡಿಯಾ ಮಾಧ್ಯಮ ಜೊತೆ ಮಾತನಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬ್ಯಾಟ್ಸ್ಮನ್ಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟ್‌ಗಳು ಶಕ್ತಿಯುತವಾಗಿರುತ್ತದೆ. ಹಾಗೆಯೇ ಆಟಗಾರರು ಕೂಡ ಬಲಶಾಲಿಯಾಗಿರುವುದರಿಂದ ಚೆಂಡಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚೆಂಡು ಮೃದುವಾಗುತ್ತಿರಬಹುದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈಗ ಎಲ್ಲರೂ ಚೆಂಡನ್ನು ದೂಷಿಸುತ್ತಾರೆ. ಆಟಗಾರರು ಡಕ್ ಔಟ್ ಆದಾಗ, ಅದಕ್ಕೆ ಪಿಚ್ ಕಾರಣ ಎನ್ನುತ್ತಾರೆ. ಇನ್ನು ಬೌಲರ್‌ಗಳು ವಿಕೆಟ್ ಪಡೆಯದಿದ್ದಾಗ, ಅದಕ್ಕೆ ಚೆಂಡು ಕಾರಣ ಎಂದು ಹೇಳಲಾಗುತ್ತದೆ. ಚೆಂಡು ಹಾಳಾಗುತ್ತದೆ. ಏಕೆಂದರೆ ಅದು ಬಂಡೆಯಲ್ಲ. ಹೀಗಾಗಿ ನಿಯಮದಲ್ಲಿ ಬದಲಾವಣೆ ತರುವುದು ಸೂಕ್ತ. ಇದಕ್ಕಾಗಿ 60 ಮತ್ತು 70 ನೇ ಓವರ್‌ಗಳ ನಡುವೆ ಹೊಸ ಚೆಂಡನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕೆಂದು ದಿಲೀಪ್ ಜಗಜೋಡಿಯಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಆಡಲು ವೈಭವ್ ಸೂರ್ಯವಂಶಿ ಅನರ್ಹ..!
ಒಟ್ಟಿನಲ್ಲಿ ಲಾರ್ಡ್ಸ್ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಡ್ಯೂಕ್ಸ್ ಬಾಲ್ ಹೊಸ ಚರ್ಚಾ ವಿಷಯವಾಗಿದ್ದು, ಈ ಚರ್ಚೆಯ ನಡುವೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟರ್ಗಳು ಅಬ್ಬರಿಸಲಿದ್ದಾರಾ ಅಥವಾ ಬೌಲರ್‌ಗಳು ಪರಾಕ್ರಮ ಮರೆಯಲಿದ್ದಾರಾ ಕಾದು ನೋಡಬೇಕಿದೆ.