IND vs ENG: ಟೀಮ್ ಇಂಡಿಯಾ ಮುಂದಿರುವುದು ಇದೊಂದೇ ಆಯ್ಕೆ

India vs England 4th Test: ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 358 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಜೋ ರೂಟ್ ಅವರ ಭರ್ಜರಿ ಶತಕದೊಂದಿಗೆ 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್​​ ಕಳೆದುಕೊಂಡು 544 ರನ್​ಗಳಿಸಿದೆ.

IND vs ENG: ಟೀಮ್ ಇಂಡಿಯಾ ಮುಂದಿರುವುದು ಇದೊಂದೇ ಆಯ್ಕೆ
Team India

Updated on: Jul 26, 2025 | 1:03 PM

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (58), ಸಾಯಿ ಸುದರ್ಶನ್ (61) ಹಾಗೂ ರಿಷಭ್ ಪಂತ್ (54) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 358 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಝಾಕ್ ಕ್ರಾಲಿ (84), ಬೆನ್ ಡಕೆಟ್ (94) ಭರ್ಜರಿ ಬ್ಯಾಟಿಂಗ್ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಬಳಿಕ ಬಂದ ಒಲೀ ಪೋಪ್ 71 ರನ್​ಗಳ ಕೊಡುಗೆ ನೀಡಿದರು. ಇನ್ನು ಜೋ ರೂಟ್ 150 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದರು. ಪರಿಣಾಮ ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್ ಸ್ಕೋರ್ 500 ರನ್​ಗಳ ಗಡಿದಾಟಿದೆ.

ಅಲ್ಲದೆ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 544 ರನ್​ಗಳಿಸಿದೆ. ಅತ್ತ ಕ್ರೀಸ್​ನಲ್ಲಿ 77 ರನ್ ಬಾರಿಸಿರುವ ಬೆನ್ ಸ್ಟೋಕ್ಸ್ ಹಾಗೂ ಆಲ್​ರೌಂಡರ್ ಲಿಯಾನ್ ಡಾಸನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅದರಂತೆ ನಾಲ್ಕನೇ ದಿನದಾಟದಲ್ಲಿ ಸ್ಟೋಕ್ಸ್ ಹಾಗೂ ಡಾಸನ್ ಇನಿಂಗ್ಸ್ ಮುಂದುವರೆಸಲಿದ್ದಾರೆ.

3 ವಿಕೆಟ್​ಗಳ ಇನಿಂಗ್ಸ್​:

ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ಕೊನೆಗೊಳಿಸಲು ಟೀಮ್ ಇಂಡಿಯಾ ಇನ್ನೂ ಮೂರು ವಿಕೆಟ್​ಗಳನ್ನು ಪಡೆಯಲೇಬೇಕು. ಅದರಲ್ಲೂ ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಡಾಸನ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡವು ಮೊದಲೆರಡು ಸೆಷನ್​ಗಳ ಮೂಲಕ ಬೃಹತ್ ಮೊತ್ತ ಕಲೆಹಾಕಲು ಯತ್ನಿಸುವುದು ಖಚಿತ.

ಈ ಮೂಲಕ 186 ರನ್​ಗಳ ಮುನ್ನಡೆ ಹೊಂದಿರುವ ಇಂಗ್ಲೆಂಡ್ ತಂಡವು ಕನಿಷ್ಠ 250 ರನ್​ಗಳ ಮುನ್ನಡೆ ಪಡೆಯುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಅಂದರೆ ಇಂಗ್ಲೆಂಡ್ 600 ರನ್​ ಕಲೆಹಾಕದೇ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿಲ್ಲ.

ಟೀಮ್ ಇಂಡಿಯಾ ಮುಂದಿರುವುದು ಒಂದೇ ಆಯ್ಕೆ:

ಇಂಗ್ಲೆಂಡ್ ತಂಡವು ಕನಿಷ್ಠ 200 ರನ್​ಗಳ ಮುನ್ನಡೆ ಸಾಧಿಸಿದರೆ, ಟೀಮ್ ಇಂಡಿಯಾ ಮುಂದಿರುವುದು ಡ್ರಾ ಆಯ್ಕೆ ಮಾತ್ರ. ಏಕೆಂದರೆ ದ್ವಿತೀಯ ಇನಿಂಗ್ಸ್​ನ ಕೊನೆಯ 2 ಸೆಷನ್​ನಲ್ಲಿ ಟೀಮ್ ಇಂಡಿಯಾ ಬ್ಯಾಟ್ ಬೀಸಿದರೂ 200 ರಿಂದ 300 ರನ್​ಗಳಿಸಲಷ್ಟೇ ಶಕ್ತರಾಗಲಿದ್ದಾರೆ. ಅಲ್ಲದೆ ಐದನೇ ದಿನದಾಟದಲ್ಲೂ ಬ್ಯಾಟಿಂಗ್ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

ಒಂದು ವೇಳೆ ಟೀಮ್ ಇಂಡಿಯಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ದ್ವಿತೀಯ ಇನಿಂಗ್ಸ್​ನಲ್ಲಿ 350 ರನ್​ಗಳಿಸಿದರೂ, ಇಂಗ್ಲೆಂಡ್ ತಂಡಕ್ಕೆ ಸಿಗುವ ಗುರಿ ಕೇವಲ 150 ರನ್​ಗಳು ಮಾತ್ರ. ಅಂದರೆ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ 200 ರನ್ ಮುನ್ನಡೆ ಪಡೆದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡವು 350 ರನ್​ಗಳಿಸಿದರೂ ಆತಿಥೇಯ ಪಡೆ ಕಡಿಮೆ ಮೊತ್ತದ ಟಾರ್ಗೆಟ್ ಪಡೆಯಲಿದೆ. ಹೀಗಾಗಿ ಭಾರತ ತಂಡವು ಈ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಬೇಕಿರುವುದು ಅನಿವಾರ್ಯ.

ಇತಿಹಾಸದ ಅಂಕಿ ಅಂಶಗಳು:

ಭಾರತ ತಂಡವು ಟೆಸ್ಟ್ ಕ್ರಿಕೆಟ್​ನ ಮೊದಲ ಇನಿಂಗ್ಸ್​ನಲ್ಲಿ​ 127 ಬಾರಿ 150+ ರನ್​ಗಳ ಹಿನ್ನಡೆ ಅನುಭವಿಸಿದೆ. ಈ ವೇಳೆ ಟೀಮ್ ಇಂಡಿಯಾ 93 ಬಾರಿ ಸೋಲನುಭವಿಸಿದೆ. ಇನ್ನು 32 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಹಾಗೆಯೇ ಗೆದ್ದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಅಂದರೆ 150+ ರನ್​ಗಳ ಹಿನ್ನಡೆ ಅನುಭವಿಸಿ ಟೀಮ್ ಇಂಡಿಯಾ ಸೋತಿದ್ದೇ ಹೆಚ್ಚು.

ಇದನ್ನೂ ಓದಿ: 37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ

ಈಗಾಗಲೇ ಇಂಗ್ಲೆಂಡ್ ತಂಡ 186 ರನ್​ಗಳ ಮುನ್ನಡೆ ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ತುಂಬಾ ಕ್ಷೀಣ. ಇದೇ ಕಾರಣದಿಂದಾಗಿ ಭಾರತ ತಂಡವು ಗೆಲ್ಲುವ ಪ್ರಯತ್ನಕ್ಕಿಂತ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯತ್ನಿಸಬೇಕಿದೆ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಬಹುದು.